ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military
ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆಯ ನಂತರ ಈಗ ಮಧ್ಯಪ್ರಾಚ್ಯ ಧಗಧಗ ಅಂತಿದ್ದು, ಯಾವುದೇ ಕ್ಷಣದಲ್ಲಿ ಇಡೀ ಮಧ್ಯಪ್ರಾಚ್ಯ ಹೊತ್ತಿ ಉರಿಯುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ ದಿಢೀರ್ ಅಂತಾ ಖಮೇನಿ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿದ ಇರಾನ್ ಇನ್ನಷ್ಟು ದಾಳಿ ಮಾಡಲು ಸಜ್ಜಾಗಿದೆ. ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ನಂತರ, ಇರಾನ್ ಆಡಳಿತ ನಿರ್ವಹಿಸಲು ಹೊಸ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಇನ್ನು ಇಸ್ಲಾಮಿಕ್ ರಿಪಬ್ಲಿಕ್ ಕಾನೂನು ವ್ಯವಸ್ಥೆಯಲ್ಲೇ ಈ ಮಂಡಳಿಗೆ ಸ್ಪಷ್ಟ ಸ್ಥಾನಮಾನವಿದೆ. ಹೀಗೆ ತಾತ್ಕಾಲಿಕವಾಗಿ ಇರಾನ್ ಆಡಳಿತವನ್ನು ನಡೆಸುವ ಜವಾಬ್ದಾರಿಯನ್ನ ಈ ಮಂಡಳಿಗೆ ನೀಡಲಾಗುತ್ತದೆ.
ಇಸ್ಲಾಮಿಕ್ ರಿಪಬ್ಲಿಕ್ ಕಾನೂನು ಹೇಳುವಂತೆ ಆಡಳಿತ ಮಂಡಳಿ ಇರಾನ್‌ನ ಆಡಳಿತದಲ್ಲಿ ಪ್ರಮುಖ ಭಾಗವಾಗಿರಲಿದೆ. ಮಂಡಳಿಯಲ್ಲಿ ಇರಾನ್ ಪ್ರಸ್ತುತ ಅಧ್ಯಕ್ಷರು, ದೇಶದ ನ್ಯಾಯಾಂಗದ ಮುಖ್ಯಸ್ಥರು & ಗಾರ್ಡಿಯನ್ ಕೌನ್ಸಿಲ್‌ನ ಒಬ್ಬ ಸದಸ್ಯರು ಇರುತ್ತಾರೆ. ಇನ್ನು ಈ ಸದಸ್ಯರನ್ನು ಸುಪ್ರೀಂ ಲೀಡರ್‌ಗೆ ಸಲಹೆ ನೀಡುವ & ಸಂಸತ್ ಜೊತೆಗೆ ಉಂಟಾಗುವ ಭಿನ್ನಾಭಿಪ್ರಾಯ ಪರಿಹರಿಸುವ ಕೌನ್ಸಿಲ್ ಆಯ್ಕೆ ಮಾಡುತ್ತದೆ. ಈ ಮೂಲಕ ತಕ್ಷಣಕ್ಕೆ ಏನೇ ಗೊಂದಲ ಉಂಟಾದರೂ ಅದನ್ನು ಬಗೆಹರಿಸಲು ಸೂಕ್ತ ವ್ಯವಸ್ಥೆಯನ್ನು ಇರಾನ್ ಮಾಡಿಕೊಂಡಿದೆ. ಖಮೇನಿ ಹತ್ಯೆಯಿಂದ ಇಡೀ ಇರಾನ್ ನಲುಗಿ ಹೋಗಿದ್ದು, ಅಮೆರಿಕದ ಸೇನೆ ಒಳಗೆ ನುಗ್ಗಲು ಈಗ ಗಡಿಯಲ್ಲಿ ಕಾಯುತ್ತಿದೆ.

ಆಡಳಿತ ಮಂಡಳಿಗೆ ಸೇರುವುದು ಯಾರು?
ಖಮೇನಿ ಜಾಗಕ್ಕೆ ಹೊಸ ವ್ಯಕ್ತಿಯನ್ನು ಕೂರಿಸಲು ಹಾಗೂ ಮತ್ತೊಬ್ಬ ಸರ್ವಾಧಿಕಾರಿ ಆಯ್ಕೆ ಮಾಡಲು ಇದೀಗ ಹೊಸ ಆಡಳಿತ ಮಂಡಳಿ ಸಜ್ಜಾಗಿದೆ. ಈ ಮಂಡಳಿಯಲ್ಲಿ, ಸುಧಾರಣಾವಾದಿ ನಾಯಕತ್ವದ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ & ನ್ಯಾಯಾಂಗ ಮುಖ್ಯಸ್ಥ ಘೋಲಾಮ್ ಹೊಸೆನ್ ಮೊಹ್ಸೆನಿ ಎಜೆಯಿ ಇರಲಿದ್ದಾರೆ. ಇನ್ನು ಇರಾನ್ ಕಾನೂನು ಹೇಳುವಂತೆ ಹೊಸ ಪರಮೋಚ್ಚ ನಾಯಕನ ಆಯ್ಕೆ ಮಾಡುವ ಜವಾಬ್ದಾರಿ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್'ಗೆ ಸೇರಿದ್ದು, ಸಾಧ್ಯವಾದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿಯಮವು ಹೇಳುತ್ತದೆ.
ಇರಾನ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಖಮೇನಿ ಮಾತ್ರವಲ್ಲ ಈಗಾಗಲೇ ಇರಾನ್ ದೇಶದ ಇಬ್ಬರು ಪ್ರಮುಖ ಸೇನಾಧಿಕಾರಿಗಳು ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ. ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ನೀಡಿರುವ ಮಾಹಿತಿಯ ಪ್ರಕಾರವೇ, ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಸೇರಿದಂತೆ, ಇರಾನ್ ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಶಾಮ್ಖಾನಿ ಈ ದಾಳಿಯಲ್ಲಿ ಮೃತಪಟ್ಟಿರುವುದು ಕನ್ಫರ್ಮ್ ಆಗಿತ್ತು. ಇದರ ಜೊತೆಗೆ ಇರಾನ್ ಸರ್ವಾಧಿಕಾರಿ ಖಮೇನಿಯ ಜೀವ ಕೂಡ ಹೋಗಿದ್ದು, ಇಡೀ ಇರಾನ್ ಬೂದಿ ಮುಚ್ಚಿದ ಕೆಂಡವಾಗಿದೆ.
40,000 ಸೈನಿಕರು ಕಾರ್ಯಾಚರಣೆಗೆ ಸಿದ್ಧ
ಅಮೆರಿಕ ಬಳಿ ಮಧ್ಯಪ್ರಾಚ್ಯ ಭಾಗದಲ್ಲಿ ಸುಮಾರು 40,000 ಸೈನಿಕರು ಸಿದ್ಧವಾಗಿ ನಿಂತಿದ್ದಾರೆ. ಇರಾನ್ ಸಮೀಪಕ್ಕೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮತ್ತು ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಬಂದು ನಿಂತು ಹಲವು ದಿನಗಳೇ ಕಳೆದಿವೆ. ಪ್ರಪಂಚದಲ್ಲೇ ಅತ್ಯಂತ ಬಲಿಷ್ಠ ಯುದ್ಧನೌಕೆ ಎಂದು ಯುಎಸ್‌ಎಸ್ ಅಬ್ರಹಾಂ ಲಿಂಕನ್ ಹಾಗೂ ಫೋರ್ಡ್ ಹೆಸರನ್ನ ಮಾಡಿವೆ. ಹೀಗಿದ್ದಾಗಲೇ ಪ್ರಸ್ತುತ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆ ಬೆಂಬಲದಿಂದ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನ ಹಾರಾಟ ನಡೆಸುವಷ್ಟು ಶಕ್ತಿಯ ಪಡೆದಿದೆ. ಹೀಗಾಗಿ ಆದಷ್ಟು ಬೇಗ ಈ ತಿಕ್ಕಾಟ ಮುಗಿದು ಹೋಗಲಿ ಎಂಬ ಬೇಡಿಕೆ ಜಗತ್ತಿನಾದ್ಯಂತ ಕೇಳಿಬಂದಿದೆ.












Click it and Unblock the Notifications