Israel Hamas War: ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ಮೇಲೆ ಭೀಕರ ದಾಳಿ- ಅಸಹಾಯಕ ಸ್ಥಿತಿಯಲ್ಲಿ ಯಹೂದಿ ರಾಷ್ಟ್ರ
Israel Hamas War: ಬಲಿಷ್ಠ ರಾಷ್ಟ್ರವೆಂದೇ ಖ್ಯಾತವಾಗಿರುವ ಇಸ್ರೇಲ್ ಅಸಹಾಯಕ ಸ್ಥಿತಿಗೆ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ಹಮಾಸ್ ದಾಳಿಗೆ ತತ್ತರಿಸಿರುವ ಯಹೂದಿ ರಾಷ್ಟ್ರವು ಈಗ ಲೆಬನಾನ್ ಹಾಗೂ ಸಿರಿಯಾ ದೇಶಗಳನ್ನು ಎದುರಿಸಬೇಕಿದೆ. ಈ ಎರಡೂ ದೇಶಗಳು ಉತ್ತರ ಇಸ್ರೇಲ್‌ನಲ್ಲಿ ಮಂಗಳವಾರ ಕ್ಷಿಪಣಿ ದಾಳಿ ನಡೆಸಿವೆ. ಇದು ಇಸ್ರೇಲ್ ಅನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಈ ಎರಡೂ ದೇಶಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿ ಮಿಲಿಟರಿ ಶೆಲ್ ದಾಳಿ ನಡೆಸಿದೆ. ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್‌ನಲ್ಲಿ ಉಪಟಳ ಆರಂಭಿಸಿರುವ ಹೊತ್ತಿನಲ್ಲಿ, ಉತ್ತರ ಇಸ್ರೇಲ್‌ನಲ್ಲಿ ಲೆಬನಾನ್ ಹಾಗೂ ಸಿರಿಯಾ ದೇಶಗಳು ದಾಳಿ ನಡೆಸುತ್ತಿವೆ.

ಇಸ್ರೇಲ್ ರಕ್ಷಣಾ ಪಡೆಗಳನ್ನು ಗುರಿಯಾಗಿಸಿ ಲೆಬನಾನ್‌ನ ಪಶ್ಚಿಮ ಗಲಿಲಿಯಲ್ಲಿ 15 ರಾಕೆಟ್‌ಗಳನ್ನು ಹಾರಿಸಲಾಗಿದೆ. ಅಪಾಯದ ಮುನ್ಸೂಚನೆ ತಿಳಿದ ಇಸ್ರೇಲ್ ಪಡೆಗಳು ಉತ್ತರ ಇಸ್ರೇಲ್‌ನ ಹಲವಾರು ಪಟ್ಟಣಗಳಲ್ಲಿ ಸೈರನ್‌ಗಳ ಮೊಳಗಿಸಿರುವ ಬಗ್ಗೆ ವರದಿಯಾಗಿದೆ.
ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಲ್ಕು ಸ್ಪೋಟಕಗಳನ್ನು ತಡೆಹಿಡಿಯಲಾಗಿದೆ. ಉಳಿದವು ಸ್ಫೋಟಕಗಳು ಬಯಲು ಪ್ರದೇಶಗಳಲ್ಲಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಸಾವು ನೋವುಗಳು ಕಂಡುಬಂದಿಲ್ಲವೆಂದು ಹೇಳಲಾಗುತ್ತಿದೆ.
ಲೆಬನಾನ್ ಹಾಗೂ ಸಿರಿಯಾದ ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಫಿರಂಗಿ ದಾಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಮಿಲಿಟರಿ ತನ್ನ ಮೊದಲ ಹೇಳಿಕೆಯಲ್ಲಿ ತಿಳಿಸಿದೆ. ನಂತರದ ಹೇಳಿಕೆಯಲ್ಲಿ, ಹೆಜ್ಬುಲ್ಲಾ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ಪೋಸ್ಟ್‌ಗಳ ಮೇಲೆ ಟ್ಯಾಂಕ್‌ಗಳು ಶೆಲ್ ದಾಳಿ ನಡೆಸಿವೆ ಎಂದು ತಿಳಿಸಿದೆ.

ಸ್ವಲ್ಪ ಸಮಯದ ನಂತರ ಲೆಬನಾನಿನ ಉತ್ತರದಲ್ಲಿರುವ ಅವಿವಿಮ್ ನಗರದ ಬಳಿ ಕ್ಷಿಪಣಿಯನ್ನು ಉಡಾಯಿಸಲಾಯಿತು. ಇದರಲ್ಲಿ ಯಾವುದೇ ಸೈನಿಕರು ಗಾಯಗೊಂಡಿಲ್ಲ. ಆ ದಾಳಿಗೆ ಪ್ರತಿಕ್ರಿಯೆಯಾಗಿ ಯುದ್ಧ ಹೆಲಿಕಾಪ್ಟರ್ ಮೂರನೇ ಹಿಜ್ಬುಲ್ಲಾ ಪೋಸ್ಟ್ ಅನ್ನು ಉಡಾಯಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ನಾವು ಎಲ್ಲ ರೀತಿಯ ಸನ್ನಿವೇಶಗಳಿಗೆ ಸಿದ್ದರಾಗಿದ್ದೇವೆ. ಇಸ್ರೇಲ್ ದೇಶದ ನಿವಾಸಿಗಳನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಗೋಲನ್ ಹೈಟ್ಸ್ ಪ್ರದೇಶದಲ್ಲಿ ಸಿರಿಯಾದಿಂದ ಕೆಲ ರಾಕೆಟ್‌ಗಳನ್ನು ಹಾರಿಸಲಾಗಿದೆ. ಹಲವಾರು ಸ್ಪೋಟಕಗಳು ಇಸ್ರೇಲ್ ಭೂಪ್ರದೇಶವನ್ನು ದಾಟಿ ಬಯಲು ಪ್ರದೇಶಗಳಲ್ಲಿ ಬಿದ್ದಿವೆ. ಇದರಲ್ಲಿ ಯಾವುದೇ ಹಾನಿಯಾಗಿಲ್ಲವೆಂದು ಇಸ್ರೇಲ್ ಹೇಳಿದೆ.

ಬೆಂಕಿಯ ಮೂಲವನ್ನು ಗುರಿಯಾಗಿಟ್ಟುಕೊಂಡು ಸಿರಿಯಾದ ಮೇಲೆ ಫಿರಂಗಿ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇಸ್ರೇಲಿ ಪಡೆಗಳು ಲೆಬನಾನ್ ಗಡಿಯಲ್ಲಿ ಭಯೋತ್ಪಾದಕರೊಂದಿಗೆ ಘರ್ಷಣೆ ನಡೆಸಿದ ಒಂದು ದಿನದ ನಂತರ ಈ ದಾಳಿಗಳು ನಡೆದಿವೆ. ಘರ್ಷಣೆಯಲ್ಲಿ ಮೂವರು ಇಸ್ರೇಲಿ ಸೈನಿಕರು ಮತ್ತು ಇಬ್ಬರು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಭಯೋತ್ಪಾದಕರ ತಾಣಗಳ ಮೇಲೆ ಇಸ್ರೇಲ್‌ನ ಪ್ರತೀಕಾರದ ಬಾಂಬ್ ದಾಳಿಯಲ್ಲಿ ಮೂವರು ಹಿಜ್ಬುಲ್ಲಾ ಸದಸ್ಯರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಸಿರಿಯಾಕ್ಕೆ ಯುಎಇ ಎಚ್ಚರಿಕೆ
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಮಧ್ಯ ಪ್ರವೇಶಿಸದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಸಿರಿಯಾದ ಅಸ್ಸಾದ್ ಆಡಳಿತಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿರುವ ಯುಎಇ ಹಮಾಸ್‌ಗೆ ಬೆಂಬಲ ನೀಡಿಲ್ಲ.












Click it and Unblock the Notifications