Israel Hamas War: ಅಮೆರಿಕ ಮೇಲೆ ಸೇಡು ತೀರಿಸಿಕೊಳ್ಳಲು ಇರಾನ್ ತಂತ್ರ? ಹಮಾಸ್ ವಂಚನೆಗೆ ಬಲಿಯಾಯಿತೇ ಇಸ್ರೇಲ್?
Israel Hamas War: ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಭೀಕರ ದಾಳಿ ಆರಂಭಿಸಿದ್ದಾರೆ. ಇದನ್ನು ಕಂಡ ಜಗತ್ತು ಅಚ್ಚರಿಗೆ ಒಳಗಾಗಿದೆ. ಇಸ್ರೇಲ್ ಅಕ್ಷರಶಃ ಬೆಚ್ಚಿಬಿದ್ದಿದೆ. ಇತಿಹಾಸದಲ್ಲಿ ಕಂಡುಕೇಳರಿಯದಂತಹ ದಾಳಿ ಇದಾಗಿದೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ. ದೇಶದ ಭದ್ರತೆಗೆ ಹೆಸರುವಾಸಿಯಾದ ಇಸ್ರೇಲ್ ಎಲ್ಲಿ ಎಡವಿತು ಎಂಬುದರ ಕುರಿತು ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ.
ಇಸ್ರೇಲ್ ಮೇಲಿನ ಹಮಾಸ್ ದಾಳಿಯೊಂದಿಗೆ ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ದವೊಂದು ಆರಂಭಗೊಂಡಿದೆ. 1948 ರ ಅರಬ್-ಇಸ್ರೇಲಿ ಯುದ್ಧದ ನಂತರ ಇಸ್ರೇಲ್ ಗಡಿಯೊಳಗೆ ನಡೆಯುತ್ತಿರುವ ಘೋರ ಸಂಘರ್ಷ ಇದಾಗಿದೆ.

ಸಾಂಪ್ರಾದಾಯಿಕ ಯುದ್ಧಗಳಿಗಿಂತ ಭಿನ್ನವಾಗಿ ಇಸ್ರೇಲ್ ಆಂತರಿಕ ಗುಂಪುಗಳ ಸಂಘರ್ಷವನ್ನು ಎದುರಿಸುತ್ತಿದೆ. ಹಮಾಸ್‌ನ ಮಿಲಿಟರಿಗೆ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಬೆಂಬಲವಿದೆ. ಈ ಬ್ರಿಗೇಡ್‌ಗಳು ಸಿರಿಯನ್ ಮತ್ತು ಇರಾನ್-ಬೆಂಬಲಿತ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಗುಂಪುಗಳಾಗಿವೆ.
ಇದಲ್ಲದೇ, ಹಮಾಸ್‌ಗೆ ಹಲವಾರು ಸಂಘಟನೆಗಳ ಬೆಂಬಲವಿದೆ. ಉದಾಹರಣೆಗೆ, ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್ಸ್, ಪಾಪ್ಯುಲರ್ ಫ್ರಂಟ್ ಪ್ಯಾಲೆಸ್ಟೈನ್ ಲಿಬರೇಶನ್ ಮತ್ತು ಡೆಮಾಕ್ರಟಿಕ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ ಗುಂಪುಗಳು ಹಮಾಸ್‌ಗೆ ಗೌಪ್ಯ ಬೆಂಬಲವನ್ನು ನೀಡುತ್ತಿವೆ.
ಈ ಸಂಘಟನೆಗಳು ಹಮಾಸ್‌ಗಿಂತ ಕಡಿಮೆ ಪ್ರಸಿದ್ಧಿಯನ್ನು ಹೊಂದಿವೆ. ಆದರೂ, ಇಸ್ರೇಲ್‌ನೊಳಗೆ ಮಾಹಿತಿದಾರರ ಜಾಲಗಳನ್ನು ನಿರ್ವಹಿಸುತ್ತಿವೆ. ಅತ್ಯಾಧುನಿಕ ಸ್ಫೋಟಕಗಳನ್ನು ತಯಾರಿಸುವುದು, ಮಾನವರಹಿತ ಯುದ್ಧ ಡ್ರೋನ್‌ಗಳನ್ನು ಬಳಸುವುದು ಹಾಗೂ ವಿಶೇಷ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಸುವುದು ಸೇರಿದಂತೆ ಹಲವಾರು ಯುದ್ಧ ಪ್ರಕ್ರಿಯೆಗಳಲ್ಲಿ ಈ ಗುಂಪುಗಳು ಪರಿಣತಿಯನ್ನು ಹೊಂದಿವೆ.

ಈ ಗುಂಪುಗಳ ಬೆಂಬಲದಿಂದಲೇ ಹಮಾಸ್ ಆಪರೇಷನ್ ಅಲ್-ಅಕ್ಸಾಕ್ಕೆ ಕೈಹಾಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್‌ನ ಮೇಲೆ ಸಂಯೋಜಿತ ಶಸ್ತ್ರಾಸ್ತ್ರ ದಾಳಿಯನ್ನು ಪ್ರಾರಂಭಿಸಲು ಈ ಗುಂಪುಗಳು ಹಮಾಸ್‌ಗೆ ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಲಾಗುತ್ತಿದೆ.
ಇರಾನ್‌ನಿಂದ ತರಬೇತಿ
ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಲು ಇರಾನ್ ಹಮಾಸ್ ಬೆಂಬಲವಾಗಿ ನಿಂತಿರುವ ಮಾತುಗಳು ಕೇಳಿಬರುತ್ತಿವೆ. ಹಮಾಸ್ ಉಗ್ರರಿಗೆ ಯುದ್ಧತಂತ್ರದ ತರಬೇತಿಯನ್ನು ಇರಾನ್‌ನಲ್ಲಿ ನೀಡಿಬಹುದು ಎಂದು ಹೇಳಲಾಗುತ್ತಿದೆ. ಇರಾನ್ ದೇಶವು ಹೈಬ್ರಿಡ್ ಯುದ್ಧದಲ್ಲಿ ಚೆನ್ನಾಗಿ ಪಾರಂಗತರಾಗಿರುವುದನ್ನು ತಳ್ಳಿಹಾಕುವಂತಿಲ್ಲ
ಹಮಾಸ್‌ನಿಂದ ಇಸ್ರೇಲ್ ಮೇಲೆ ದಾಳಿ ಮಾಡಿಸುವುದು, ಇಸ್ರೇಲ್ ಯುದ್ಧಭೂಮಿಗೆ ಅಮೆರಿಕದ ಸೈನಿಕರು ಬರುವಂತೆ ಮಾಡುವುದು, ಆ ನಂತರ ಯುದ್ಧಭೂಮಿಗೆ ಇರಾನ್ ಸೈನಿಕರನ್ನು ಕಳಿಸುವ ಲೆಕ್ಕಾಚಾರಗಳು ಈ ದಾಳಿಯ ಹಿಂದಿರಬಹುದು ಎಂದು ಹೇಳಲಾಗುತ್ತಿದೆ.
ಇಸ್ರೇಲಿ ರಕ್ಷಣಾ ವ್ಯವಸ್ಥೆಗಳನ್ನು ಇರಾನ್ ಯುದ್ಧತಜ್ಞರು ವ್ಯಾಪಕವಾಗಿ ಅಧ್ಯಯನ ಮಾಡಿಯೇ ಈ ದಾಳಿ ಮಾಡಿಸಲು ಕೈಹಾಕಿದ್ದಾರೆ ಎಂದೂ ಹೇಳಲಾಗುತ್ತಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಲೆಬನಾನಿನ ರೆಸಿಸ್ಟೆನ್ಸ್ ಬ್ರಿಗೇಡ್‌ಗಳು ವಂಚನೆಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಅನುಭವವನ್ನು ಹೊಂದಿವೆ ಎಂದು ಯುದ್ಧ ಪರಿಣಿತರು ಹೇಳುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಸ್ರೇಲ್ ಮೊದಲ ಬಾರಿ ಜಾಗತಿಕವಾಗಿ ಮುಖಭಂಗವನ್ನು ಅನುಭವಿಸಿದೆ. ಇಸ್ರೇಲ್ ಮೇಲಿನ ದಾಳಿಯನ್ನು ಇರಾನ್ ಸಂಭ್ರಮಿಸಿದೆ. ಹಮಾಸ್ ಉಗ್ರರನ್ನು ಸ್ವಾತಂತ್ರ್ಯ ಯೋಧರೆಂದು ಇರಾನ್ ಕರೆದಿದೆ. ಇದೆಲ್ಲವನ್ನು ಗಮನಿಸಿದರೆ, ಇಸ್ರೇಲ್ ಭಾರೀ ವಂಚನೆಗೆ ಒಳಗಾಗಿರುವುದು ಮಾತ್ರ ಸತ್ಯವಾಗಿದೆ.












Click it and Unblock the Notifications