ತುತ್ತು ಅನ್ನಕ್ಕಾಗಿ ಪರದಾಡುತ್ತಾ, ಲೂಟಿಗೆ ಇಳಿದ ಯುದ್ಧ ಭೂಮಿಯ ಜನ?
ಯುದ್ಧ ಎಂದರೆ ಬರೀ ರಕ್ತ, ಮಾಂಸದ ಮುದ್ದೆ ಬಿದ್ದಿರುವ ನರಕದ ಹಾದಿ ಅಲ್ಲ. ಅಲ್ಲೂ ಜೀವಗಳು ಬದುಕಿರುತ್ತವೆ, ಅನ್ನ & ನೀರು ಸಿಗದೆ ನರಳುವ ಜೀವಗಳು ಪರದಾಡುತ್ತವೆ. ಈ ಮಾತು ಭೂಮಿ ಮೇಲೆ ಮತ್ತೆ ಮತ್ತೆ ಸತ್ಯವಾಗುತ್ತಿದ್ದು, ಇದೀಗ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧದಲ್ಲಿ ಜನ ಇಂತಹದ್ದೇ ಪರಿಸ್ಥಿತಿ ಕಣ್ತುಂಬಿಕೊಂಡಿದ್ದಾರೆ. ಹಾಗಾದರೆ ಗಾಜಾಪಟ್ಟಿ ಜನರು ವಿಶ್ವಸಂಸ್ಥೆ ಗೋದಾಮಿಗೆ ನುಗ್ಗಿ ದರೋಡೆ ಮಾಡಿದ್ದೇಕೆ?
ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದಾಗಲೇ, ಪ್ಯಾಲೆಸ್ತೀನ್ ಪರ 8,306 ಜನ ಇಲ್ಲಿಯವರೆಗೂ ಮೃತಪಟ್ಟಿದ್ದಾರೆ. ಇಸ್ರೇಲ್ ಕಡೆ ಸಾವಿನ ಸಂಖ್ಯೆ 1400 ದಾಟಿದೆ. ಹೀಗೆ ಕೇವಲ 3 ವಾರದ ಹಿಂದೆ ಶುರುವಾಗಿದ್ದ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 10 ಸಾವಿರ ಜನರ ಜೀವ ಬಲಿ ಪಡೆದಿದೆ. ಇನ್ನೂ ಇದೇ ಸಮಯದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ವಿಶ್ವಸಂಸ್ಥೆ ಗೋದಾಮು ಲೂಟಿ!
ಹೌದು, ಹಿಟ್ಟು ಸೇರಿದಂತೆ ದಿನಬಳಕೆ ವಸ್ತುಗಳಿಗೆ ಗಾಜಾದಲ್ಲಿ ಜನರು ನರಳಾಡುತ್ತಿದ್ದಾರೆ. ಹೀಗೆ ಈ ವಸ್ತುಗಳು ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ದುಡುಕಿರುವ ಗಾಜಾ ಜನರು ನೇರವಾಗಿ ವಿಶ್ವಸಂಸ್ಥೆಯ ಗೋದಾಮಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಕದ್ದು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಉತ್ತರ ಗಾಜಾಪಟ್ಟಿ ಭಾಗದಿಂದ ಜನರು ಬೇಗ ದಕ್ಷಿಣ ಗಾಜಾಗೆ ತೆರಳಲಿ ಎಂದು ಇಸ್ರೇಲ್ ಸೇನೆ ಸಲಹೆ ನೀಡುತ್ತಲೇ ಇದೆ. ಆದರೂ ಜನರಿಗೆ ದಕ್ಷಿಣ ಗಾಜಾಪಟ್ಟಿ ಭಾಗದಕ್ಕೆ ತೆರಳಲು ಸೂಕ್ತ ವ್ಯವಸ್ಥೆ ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ಈಗ ಸ್ವತಃ ವಿಶ್ವಸಂಸ್ಥೆಯ ಗೋದಾಮಿಗೆ ಜನರು ನುಗ್ಗಿ ಇಂತಹ ಕೆಲಸ ಮಾಡಿದ್ದಾರೆ.
ಭೂಸೇನೆ ಮೂಲಕವೂ ದಾಳಿ ಶುರು
ಇಷ್ಟುದಿನ ಹಮಾಸ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಸೇನೆಯು ಈಗ ತನ್ನ ರಣತಂತ್ರ ಬದಲಿಸಿದೆ. ಹಮಾಸ್ ಉಗ್ರರು ಗಾಜಾಪಟ್ಟಿಯಲ್ಲಿ ಸುರಂಗ ತೋಡಿ ಅದೇ ಜಾಗದಿಂದ ಅಟ್ಯಾಕ್ ಮಾಡ್ತಿರುವುದು ಇಸ್ರೇಲ್‌ಗೂ ಗೊತ್ತಾಗಿದೆ. ಹೀಗಾಗಿ ವಾಯುದಾಳಿಯ ಜೊತೆಗೆ ನಿಧಾನವಾಗಿ ಭೂ ಸೇನೆ ಮೂಲಕವೂ ದಾಳಿ ಆರಂಭಿಸಿದೆ ಇಸ್ರೇಲ್. ಗಾಜಾ ಗಡಿ ಭಾಗದಲ್ಲಿ ಈಗಾಗಲೇ ಇಸ್ರೇಲ್ ಸೇನೆ ಭಾರಿ ಪ್ರಮಾಣದಲ್ಲಿ ನಿಯೋಜನೆ ಆಗಿದ್ದು, ಇಲ್ಲಿಂದ ನೇರವಾಗಿ ಹಮಾಸ್ ಉಗ್ರರ ಅಡ್ಡೆ ಒಳಗಡೆ ನುಗ್ಗಿ ನುಗ್ಗಿ, ಉಗ್ರರನ್ನು ಹೊಡೆದು ಹಾಕ್ತಿದೆ.

ಒಟ್ನಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವಿನ ಯುದ್ಧ ಕ್ಷಣಕ್ಷಣಕ್ಕೂ ಇದೀಗ ಭೀಕರವಾಗುತ್ತಿದೆ. ಹೀಗೆ ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಇನ್ನೂ ಎಷ್ಟು ಜನ ಈ ಯುದ್ಧಕ್ಕಾಗಿ ಜೀವನವನ್ನೇ ತ್ಯಾಗ ಮಾಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧ ನಿಲ್ಲಿಸಲು ಜಗತ್ತಿನ ಹಲವು ದೇಶಗಳು ಯತ್ನಿಸುತ್ತಿದ್ದು, ಮುಂದೆ ಇದು ಯಾವ ರೀತಿಯಾಗಿ ಫಲವನ್ನು ನೀಡಲಿದೆ? ಅನ್ನೋದನ್ನ ಕೂಡ ಕಾದು ನೋಡಬೇಕಿದೆ.
ಉಕ್ರೇನ್ ಯುದ್ಧದ ಮೇಲೂ ಎಫೆಕ್ಟ್?
ಇಸ್ರೇಲ್ & ಹಮಾಸ್ ನಡುವೆ ಯುದ್ಧ ಶುರುವಾಗಿರುವುದು ಈಗ ಉಕ್ರೇನ್‌ಗೂ ಆಪತ್ತು ತಂದಿದೆ. ಏಕೆಂದರೆ ರಷ್ಯಾ & ಉಕ್ರೇನ್ ಯುದ್ಧದ ಜ್ವಾಲೆ ಧಗಧಗಿಸುವ ಸಮಯದಲ್ಲಿ ಉಕ್ರೇನ್ ಸೇನೆಗೂ ಕೆಟ್ಟ ಸುದ್ದಿ ಸಿಕ್ಕಿದೆ. ಇಸ್ರೇಲ್ ಪರ ಅಮೆರಿಕ ನಿಂತಿದ್ದು, ಈ ಕಾರಣದಿಂದ ಲಕ್ಷಾಂತರ ಕೋಟಿ ರೂಪಾಯಿ ಯುದ್ಧ ನೆರವನ್ನು ಇಸ್ರೇಲ್ ಸೇನೆಗೆ ಅಮೆರಿಕ ಘೋಷಿಸಿದೆ. ಹೀಗಿದ್ದಾಗ ಉಕ್ರೇನ್‌ಗೆ ಸಹಾಯ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆ ಯುದ್ಧದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಸೇನೆಯು ಭಾರಿ ಹಿನ್ನಡೆ ಅನುಭವಿಸುತ್ತಿದೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications