Gaza War: ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯಲು ಇಸ್ರೇಲ್ ಮಿಲಿಟರಿ ಪ್ಲಾನ್?
ಗಾಜಾ ಪಟ್ಟಿಯಲ್ಲಿ ರಕ್ತಪಾತ ನಿಲ್ಲುತ್ತಿಲ್ಲ & ಇಸ್ರೇಲ್ ಹಾಗೂ ಹಮಾಸ್ ನಡುವಿನ ತಿಕ್ಕಾಟ ಇಡೀ ಗಾಜಾ ಪ್ರದೇಶವನ್ನೇ ಬಲಿ ಪಡೆಯುತ್ತಿದೆ. ಇಂತಹ ಸಮಯದಲ್ಲಿ ಲಕ್ಷ ಲಕ್ಷ ಜನರಿಗೆ ಎಲ್ಲಿ ಹೋಗಬೇಕು? ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯೂ ಇದೀಗ ಹೊರ ಬಿದ್ದಿದೆ. ಅದರಲ್ಲೂ ಸಂಪೂರ್ಣವಾಗಿ ಗಾಜಾ ಪಟ್ಟಿಯನ್ನೇ ವಶಕ್ಕೆ ಪಡೆಯಲು ಇದೀಗ ಇಸ್ರೇಲ್ ಸೇನೆ ತಯಾರಿ ನಡೆಸಿದೆಯಂತೆ!
ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಮಿಸೈಲ್ & ರಾಕೆಟ್ ಮೂಲಕ ದಾಳಿ ಮಾಡಿ, ಆ ನಂತರ ನೇರವಾಗಿ ಇಸ್ರೇಲ್ ಒಳಗೆ ನುಗ್ಗಿ ನೂರಾರು ಪ್ರಜೆಗಳನ್ನು ಒತ್ತೆಯಾಳು ರೂಪದಲ್ಲಿ ಕಿಡ್ನಾಪ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 2023ರ ಅಕ್ಟೋಬರ್ ಮೊದಲನೇ ವಾರದಲ್ಲಿ ನಡೆದಿದ್ದ ಈ ಘಟನೆ ನಂತರ ಇಡೀ ಮಧ್ಯಪ್ರಾಚ್ಯ ಅಲ್ಲಾಡಿ ಹೋಗಿದೆ. ಅದ್ರಲ್ಲೂ ಕಳೆದ ಒಂದೂವರೆ ವರ್ಷದಿಂದ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ಸಮರ ಸಾರಿ ದಾಳಿ ನಡೆಸುತ್ತಿದೆ. ಹೀಗಿದ್ದಾಗ ದಿಢೀರ್ ಇಡೀ ಗಾಜಾ ಪಟ್ಟಿಯನ್ನೇ ವಶಕ್ಕೆ ಪಡೆದು, ಅಲ್ಲಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಇಸ್ರೇಲ್ ತಯಾರಿ ನಡೆಸಿದೆ ಎನ್ನುವ ಸುದ್ದಿಯು ಇಡೀ ಮಧ್ಯಪ್ರಾಚ್ಯಕ್ಕೆ ಶಾಕ್ ಕೊಟ್ಟಿದೆ.

ಬೆಂಕಿಯಿಂದ ಬಾಣಲೆಗೆ ಬಿದ್ದ ಮಧ್ಯಪ್ರಾಚ್ಯ?
ಹೌದು, ಇಸ್ರೇಲ್ ಕ್ಯಾಬಿನೆಟ್ ಅಂದ್ರೆ ಸಂಪುಟ ಸಭೆಯಲ್ಲಿ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆದು ಮುಂದೆ ನುಗ್ಗುವ ಬಗ್ಗೆ ಒಪ್ಪಿಗೆ ಪಡೆಯಲಾಗಿದೆ. ಈ ಮೂಲಕ ಗಾಜಾ ಪಟ್ಟಿಯನ್ನು ಇಸ್ರೇಲ್ ಯಾವುದೇ ಕ್ಷಣದಲ್ಲಿ ತನ್ನ ವಶಕ್ಕೆ ಪಡೆಯಬಹುದು ಎಂಬ ಸುದ್ದಿ ಹಬ್ಬಿದೆ. ಹೀಗಾಗಿಯೇ, ಗಾಜಾ ಪಟ್ಟಿಯಲ್ಲಿ ವಾಸ ಮಾಡುತ್ತಿರುವ ಜನರು ಬೆಚ್ಚಿ ಬಿದ್ದಿದ್ದಾರೆ. ಹಾಗೇ ಗಾಜಾ ಪಟ್ಟಿಯ ಜನರನ್ನು ಬೇರೆ ಬೇರೆ ಕಡೆಗೆ ಸ್ಥಳಾಂತರ ಮಾಡಲು ಕೂಡ ಯೋಜನೆ ರೂಪಿಸಲಾಗಿದೆ ಎಂಬ ಸುದ್ದಿ ಇನ್ನಷ್ಟು ತಲ್ಲಣ ಎಬ್ಬಿಸಿದೆ.
ಅಮೆರಿಕ ಈ ವಿಚಾರದಲ್ಲಿ ಏನು ಹೇಳುತ್ತದೆ?
ಗಾಜಾ ಪಟ್ಟಿಯನ್ನು ಸಂಪೂರ್ಣ ಇಸ್ರೇಲ್ ವಶಕ್ಕೆ ಪಡೆಯುವ ಬಗ್ಗೆ ಅಮೆರಿಕ ಬೆಂಬಲವನ್ನ ನೀಡುತ್ತಿದೆ. ಯಾಕಂದ್ರೆ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆದ ನಂತರ, ಆ ಜಾಗವನ್ನ ನಮಗೆ ನೀಡಲಿದೆ ಇಸ್ರೇಲ್ ಅನ್ನೋದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮಾತಾಗಿತ್ತು. ಹೀಗಿದ್ದಾಗ ದಿಢೀರ್ ವಾಯುದಾಳಿ ಪ್ರಮಾಣ ಕೂಡ ಹೆಚ್ಚಾಗುತ್ತಿದ್ದು, ಈಗಾಗಲೇ ಭಾಗಶಃ ಹಮಾಸ್‌ನ ಮುಖಂಡರು ಸತ್ತು ಹೋಗಿದ್ದಾರೆ.
ಇಂತಹ ಸಮಯದಲ್ಲೇ, ಸಂಪೂರ್ಣ ಗಾಜಾ ಪಟ್ಟಿಯ ಮೇಲೆ ಹಿಡಿತ ಸಾಧಿಸುವ ಗುರಿ ಇಸ್ರೇಲ್ ಸರ್ಕಾರದ್ದು. ಆದರೆ ಈ ವಿಚಾರವಾಗಿ ಮಧ್ಯಪ್ರಾಚ್ಯ ಭಾಗದ ಬೇರೆ, ಬೇರೆ ದೇಶಗಳು ಏನು ಹೇಳುತ್ತವೆ? ಈ ನಿರ್ಧಾರ ಯಾವ ರೀತಿಯ ಪರಿಣಾಮ ಬೀರಬಹುದು? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಗಾಜಾ ಪಟ್ಟಿಯಲ್ಲಿ ಈಗಾಗಲೇ ಲಕ್ಷಾಂತರ ಜನರು ಅನ್ನ & ಆಹಾರಕ್ಕೆ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.












Click it and Unblock the Notifications