ಇಸ್ರೇಲ್ ಸೇನೆ ದಾಳಿಗೆ ನಲುಗಿ ಹೋದ ಗಾಜಾಪಟ್ಟಿ, 23 ಲಕ್ಷ ಜನ ಅತಂತ್ರ?
4 ತಿಂಗಳು ಮುಗಿಸಿದ್ರೂ ಇಸ್ರೇಲ್ & ಹಮಾಸ್ ಉಗ್ರರ ಯುದ್ಧ ನಿಲ್ಲುತ್ತಿಲ್ಲ. ಇದೇ ಕಾರಣ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅದರಲ್ಲೂ ಇಸ್ರೇಲ್ ಸೇನೆ ಇದೀಗ ಗಾಜಾಪಟ್ಟಿ ಮೂಲೆ, ಮೂಲೆಯಲ್ಲೂ ಭೀಕರ ಅಟ್ಯಾಕ್ ಮುಂದುವರಿಸಿದೆ. ಹೀಗೆ ಇಸ್ರೇಲ್ ನಡೆಸಿದ ದಾಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗಾಜಾಪಟ್ಟಿಯ ಮಧ್ಯಭಾಗ & ಉತ್ತರದ ರಫಾ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 9 ಜನ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಮಾಸ್ ತಪ್ಪಿಗೆ ಕಳೆದ 4 ತಿಂಗಳಿಂದ ಗಾಜಾದಲ್ಲಿ ಸಾಮಾನ್ಯ ಜನ ನರಳುತ್ತಿದ್ದಾರೆ. ಈಗಾಗಲೇ 25,000 ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ನಡುವೆ ಇಸ್ರೇಲ್ 1,200 ಜನರನ್ನ ಕಳೆದುಕೊಂಡಿದೆ. ಈ ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಅಮೆರಿಕ ಅಡ್ಡಿ ಮಾಡುತ್ತಿದೆ ಎನ್ನುವ ಆರೊಪಗಳ ಮಧ್ಯೆ ಗಾಜಾ ಮೇಲೆ ದಾಳಿ ಮಾಡುವ ಜತೆಗೆ ಇಸ್ರೇಲ್ ಸೇನೆಯು, ವೆಸ್ಟ್ ಬ್ಯಾಂಕ್‌ನ ಮೇಲೆ ಕೂಡ ಭಾರಿ ಅಟ್ಯಾಕ್ ಮಾಡ್ತಿದೆ ಎಂಬ ಆರೋಪ ಇದೆ. ಇತ್ತೀಚೆಗೆ ಅಮೆರಿಕ ಕೂಡ ಇಸ್ರೇಲ್ ಸೇನೆ ದಾಳಿ ವಿರುದ್ಧ ತಿರುಗಿಬಿದ್ದಿದೆ. ಇಷ್ಟೆಲ್ಲದರ ನಡುವೆ ಕೂಡ, ಇಸ್ರೇಲ್ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ.

23 ಲಕ್ಷ ಜನರ ಕಥೆ ಏನು?
ಗಾಜಾಪಟ್ಟಿ ಜನರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಒಂದು ಕಡೆ ಉಗ್ರರ ಸರ್ಕಾರ ಹಮಾಸ್‌ಗೆ ಹೆದರಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ ಇಸ್ರೇಲ್‌ನ ಸೇನೆ ಈಗ ಗಾಜಾದ ಸಾಮಾನ್ಯ ಜನರ ಪ್ರಾಣ ತೆಗೆಯುತ್ತಿದೆ ಎಂಬ ಗಂಭೀರ ಆರೋಪವನ್ನ ಕೂಡ ಮಾಡಲಾಗುತ್ತಿದೆ. ಆದರೆ ಇದ್ಯಾವುದಕ್ಕೂ ಇಸ್ರೇಲ್ ಕೇರ್ ಮಾಡುತ್ತಿಲ್ಲ ಯಾಕಂದ್ರೆ ಈ ಬಾರಿ ಹಮಾಸ್ ಉಗ್ರರನ್ನು ಬುಡ ಸಮೇತ ಕಿತ್ತು ಹಾಕಲು, ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹಾಗೇ ಸುಮಾರು 23 ಲಕ್ಷ ಜನರು ಈಜಿಪ್ಟ್ ಗಡಿ ಬಳಿ ಅತಂತ್ರರಾಗಿದ್ದಾರೆ.
ಉಗ್ರರ ಸುರಂಗ ಮಾರ್ಗ ಉಡೀಸ್!
ಅಷ್ಟಕ್ಕೂ ಈಗ ಹಮಾಸ್ ಉಗ್ರರ ಹಿಡಿತದಲ್ಲಿ ಇರುವ ಗಾಜಾದ ಉತ್ತರ & ದಕ್ಷಿಣ ಭಾಗದ ಮೇಲೆ ಇಸ್ರೇಲ್ ಮನಸ್ಸಿಗೆ ಬಂದಂತೆ ಅಟ್ಯಾಕ್ ಮಾಡ್ತಿದ್ದು. ಅದರಲ್ಲೂ ಹಮಾಸ್ ಉಗ್ರರ ಸುರಂಗಗಳ ಜೊತೆಗೆ ಉಗ್ರರ ಬಿಡಾರ ಹುಡುಕಿ ಹುಡುಕಿ ನಾಶ ಮಾಡಲಾಗುತ್ತಿದೆ. ಈಗಾಗಲೇ ಸಾವಿರ ಸಾವಿರ ಉಗ್ರರು ಹೆಣವಾಗಿ ಹೋಗಿದ್ದಾರೆ. ಹಾಗೇ ಹಮಾಸ್ ಉಗ್ರರನ್ನು ಗಜಾಪಟ್ಟಿಯ ನೆಲದಿಂದ, ಸಂಪೂರ್ಣವಾಗಿ ಉಡೀಸ್ ಮಾಡಲು ಇಸ್ರೇಲ್ ಸೇನೆ ಈಗ ಪಣತೊಟ್ಟಿದೆ.
ಹಮಾಸ್ ಉಗ್ರರು VS ಇಸ್ರೇಲ್ ಸೇನೆ ಮಧ್ಯೆ ಭೀಕರ ಯುದ್ಧ ಆರಂಭವಾಗಿ ಭರ್ಜರಿ 90 ದಿನಗಳೇ ಕಳೆದು ಹೋಗಿದೆ. ಇವತ್ತು ಯುದ್ಧ ನಿಲ್ಲುತ್ತೆ, ನಾಳೆ ಯುದ್ಧ ನಿಲ್ಲುತ್ತೆ ಅಂತಾನೆ ಅಲ್ಲಿ ಜನರು ಕಾಯ್ತಿದ್ದಾರೆ. ಇಷ್ಟಾದರೂ ಯುದ್ಧ ನಿಲ್ಲುತ್ತಿಲ್ಲ ಕೆಲ ತಿಂಗಳ ಹಿಂದಷ್ಟೇ ಈ ರಕ್ತಪಾತಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಯತ್ನ ಮಾಡಿತ್ತು. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಅಡ್ಡಿ, ಆತಂಕ ಎದುರಾಗಿ ಯುದ್ಧವೂ ಮುಂದುವರಿದಿದೆ. ಹೀಗಾಗಿ ಜಗತ್ತಿನಾದ್ಯಂತ ಭಯ ಆವರಿಸಿದೆ.












Click it and Unblock the Notifications