Iran Tension: ಇರಾನ್ ಬೆನ್ನಿಗೆ ನಿಂತ ಚೀನಾ, ಅಮೆರಿಕ ದಾಳಿ ನಡೆಸಿದರೆ ನೇರ ಅಖಾಡಕ್ಕೆ ಡ್ರ್ಯಾಗನ್?
ಇರಾನ್ ವಿರುದ್ಧ ನಾವು ದಾಳಿ ಮಾಡೇ ಮಾಡುತ್ತೇವೆ, ಈ ಬಾರಿ ಇರಾನ್‌ಗೆ ಬುದ್ಧಿ ಕಲಿಸೋದು ಪಕ್ಕಾ ಎಂದು ಅಮೆರಿಕ ಹೇಳುತ್ತಿದೆ. ಇನ್ನೊಂದು ಕಡೆ ಇರಾನ್ ಕೂಡ ನಮ್ಮ ಮೇಲೆ ಒಂದೇ ಒಂದು ಸಣ್ಣ ದಾಳಿ ಆದರೂ ಅದನ್ನು ಯುದ್ಧ ಎಂದು ಘೋಷಣೆ ಮಾಡಿ, ಪೂರ್ಣ ಪ್ರಮಾಣದ ಹೋರಾಟಕ್ಕೆ ನಾವು ಸಿದ್ಧ ಎನ್ನುತ್ತಿದೆ. ಈ ಇಬ್ಬರ ತಿಕ್ಕಾಟ ಕಂಡು ಇಡೀ ಜಗತ್ತು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯ ಭಾಗದಲ್ಲಿ ಬಿಸಿ ಹೆಚ್ಚಾಗಿದ್ದು, ಮುಂದೆ ಏನಾಗುತ್ತೋ? ಎಂಬ ಆತಂಕ ಆವರಿಸಿದೆ. ಈ ಸಮಯದಲ್ಲೇ ಇರಾನ್ ಬೆನ್ನಿಗೆ ನಿಂತ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ.
ಮಧ್ಯಪ್ರಾಚ್ಯದ ದೇಶ ಇರಾನ್ ಸಮೀಪಕ್ಕೆ ಈಗಾಗಲೇ, ಅಮೆರಿಕದ ಶಸ್ತ್ರಾಸ್ತ್ರಗಳು ಬಂದು ತಲುಪಿವೆ. ಅಮೆರಿಕ ಈಗ ಇರಾನ್ ಕಡೆಗೆ ಕಳಿಸಿರುವ ಅಸ್ತ್ರಗಳು ದೊಡ್ಡ ಮಟ್ಟದಲ್ಲೇ ಇದ್ದು, ಮಧ್ಯಪ್ರಾಚ್ಯ ಭಾಗವು ಯಾವುದೇ ಕ್ಷಣದಲ್ಲಿ ಘೋರ ಯುದ್ಧವನ್ನ ನೋಡಬಹುದಾ? ಎಂಬ ಅನುಮಾನ ಹುಟ್ಟಿಸಿದೆ. ಹೀಗೆ ಆತಂಕ ಮೂಡಲು ಕಾರಣ ಅಮೆರಿಕ ಸೇನೆಯ F-15E ಸ್ಟ್ರೈಕ್ ಈಗಲ್ ಜೆಟ್‌ಗಳು & ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಎದುರಾಳಿ ನೆಲವನ್ನು ಪುಡಿ ಪುಡಿ ಮಾಡುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಇರಾನ್ ಕೂಡ ಎಲ್ಲಾ ಅಸ್ತ್ರಗಳನ್ನು ಸಜ್ಜಾಗಿಸಿ ಕಾಯುತ್ತಿದೆ. ಆದರೆ ಈ ಸಮಯಕ್ಕೆ ಸರಿಯಾಗಿ ಚೀನಾ ಮಧ್ಯದಲ್ಲಿ ಎಂಟ್ರಿ ಕೊಟ್ಟು, ಅಮೆರಿಕ ವಿರುದ್ಧ ಗುಡುಗಿದೆ.

ಬಹಿರಂಗವಾಗಿ ಇರಾನ್ ಬೆನ್ನಿಗೆ ನಿಂತ ಚೀನಾ
ಚೀನಾ ಮೊದಲಿನಿಂದ ಕೂಡ ಇರಾನ್ ಬೆನ್ನಿಗೆ ನಿಲ್ಲುತ್ತಾ ಬಂದಿದ್ದು, ಕಷ್ಟದಲ್ಲೂ ಬೆಂಬಲ ನೀಡಿದೆ. ಇರಾನ್ ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರ ಎಂದು ಚೀನಾ ಕರೆದಿದೆ. ಈ ಬಗ್ಗೆ ವಿಶ್ವಸಂಸ್ಥೆ ಚೀನಾ ರಾಯಭಾರಿ ಫು ಕಾಂಗ್ ಮಹತ್ವದ ಹೇಳಿಕೆಯನ್ನು ಇದೀಗ ನೀಡಿದ್ದಾರೆ. ಪಶ್ಚಿಮ ಏಷ್ಯಾ ಪ್ರಮುಖ ಶಕ್ತಿ ಪೈಪೋಟಿ ಪರಿಣಾಮ ಕುಸ್ತಿಯ ನೆಲ ಆಗಬಾರದು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಅನಗತ್ಯ ಘರ್ಷಣೆಗಳು ಬೇಡ ಎಂದು ಹೇಳಿದೆ ಚೀನಾ.
ಯಾವುದೇ ಮಿಲಿಟರಿ ಸಾಹಸ ಒಂದು ನಿರ್ದಿಷ್ಟ ಪ್ರದೇಶವನ್ನು ಪ್ರಪಾತಕ್ಕೆ ತಳ್ಳುತ್ತದೆ, ಎಂದು ಚೀನಾದ ರಾಯಭಾರಿ ಪ್ರತಿಕ್ರಿಯೆ ನೀಡುವ ಮೂಲಕ ಪರೋಕ್ಷವಾಗಿ ಅಮೆರಿಕಗೆ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಇರಾನ್ ಬೆನ್ನಿಗೆ ಬಹಿರಂಗವಾಗಿ ಚೀನಾ ನಿಂತುಕೊಂಡಿದ್ದು, ಯುದ್ಧ ನಡೆದರೆ ತಾನು ಕೂಡ ಅಖಾಡ ಪ್ರವೇಶ ಮಾಡುತ್ತೇನೆ ಎಂಬುದನ್ನು ಡ್ರ್ಯಾಗನ್ ಈಗ ಪರೋಕ್ಷವಾಗಿ ತಿಳಿಸಿದಂತೆ ಕಾಣುತ್ತಿದೆ. ಹಾಗೇ ಮುಂದಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನೇರವಾಗಿ ಯುದ್ಧ ಶುರುವಾಗಿಬಿಟ್ಟರೆ ಆಗ ಇರಾನ್‌ಗೆ ಬೇಕಾದ ಅಸ್ತ್ರಗಳನ್ನು ಕೊಡಲು ಚೀನಾ ಈ ಮೂಲಕ ಸಜ್ಜಾದಂತೆ ತೋರುತ್ತಿದೆ.
ರಷ್ಯಾ ಕೂಡ ಎಂಟ್ರಿ ಕೊಡೋದು ಗ್ಯಾರಂಟಿ?
ಚೀನಾ ಈಗ ಯಾವ ರೀತಿ ಇರಾನ್ ಪರವಾಗಿ ಬ್ಯಾಟ್ ಬೀಸಿದೆಯೋ ಅದೇ ರೀತಿ ರಷ್ಯಾ ಕೂಡ ಅತಿ ಶೀಘ್ರದಲ್ಲೇ ಇರಾನ್ ಬೆನ್ನಿಗೆ ನಿಲ್ಲಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಏಕೆಂದರೆ ಇರಾನ್ ಮತ್ತು ರಷ್ಯಾ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ & ವಹಿವಾಟು ನಡೆಸುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದರೆ ಆಗ ರಷ್ಯಾ ಸೈಲೆಂಟ್ ಆಗಿ ಇರಲು ಆಗದು. ಹೀಗಾಗಿ ರಷ್ಯಾ ಕೂಡ ಈ ಯುದ್ಧದಲ್ಲಿ ಎಂಟ್ರಿ ಕೊಡುವ ಅನಿವಾರ್ಯ ಸ್ಥಿತಿ ಆಗ ಎದುರಾಗಲಿದೆ. ಇದು ಮುಂದೆ ಜಾಗತಿಕ ಯುದ್ಧವಾಗುವ ಎಲ್ಲಾ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications