Iran: ಇಂಟರ್ನೆಟ್ ಬಂದ್ ಮಾಡಿದ ಸರ್ಕಾರ, ಬ್ಲೂಟೂತ್ ಬಳಸುತ್ತಿರುವ ಹೋರಾಟಗಾರರು!
ಇರಾನ್ ನೆಲದಲ್ಲಿ ಪ್ರತಿಭಟನೆ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದ್ದು, ನೇರವಾಗಿ ಹೋರಾಟ ಮಾಡುವವರ ಹತ್ಯೆ ಆಗುತ್ತಿದೆ ಎಂಬ ಆರೋಪಗಳ ನಡುವೆ ಹೊಸ ತಲ್ಲಣ ಎದ್ದಿದೆ. ಇರಾನ್ ನೆಲ ಈಗ ಧಗಧಗ ಎನ್ನುತ್ತಿದ್ದು, ಮನೆಯಲ್ಲಿ ಇದ್ದವರು ಕೂಡ ಸುರಕ್ಷಿತವಲ್ಲ ಎಂಬ ವಾತಾವರಣ ಇದೀಗ ನಿರ್ಮಾಣ ಆಗಿದೆ. ಹೀಗಿದ್ದಾಗ ಇಂಟರ್ನೆಟ್ ಬಂದ್ ಮಾಡಿದ ಸರ್ಕಾರ ಹೇಗಾದರೂ ಮಾಡಿ ಪರಿಸ್ಥಿತಿ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದೆ. ಆದರೆ ಹೋರಾಟಗಾರರು ಇದನ್ನು ಮೀರಿ ಬೇರೆ, ಬೇರೆ ದಾರಿ ಹುಡುಕುತ್ತಿದ್ದಾರೆ. ಅದರಲ್ಲೂ ಹೋರಾಟದ ಸಂದೇಶ ರವಾನಿಸಲು ಬ್ಲೂಟೂತ್ ಬಳಸಿ ಪ್ರತಿಭಟನೆ ಇನ್ನಷ್ಟು ಹೆಚ್ಚು ಮಾಡಿದ್ದಾರೆ.
ಹೌದು, ಕಳೆದ ಕೆಲ ದಿನಗಳಿಂದ ಇರಾನ್ ನೆಲದಲ್ಲಿ ಸರ್ಕಾರದ ವಿರುದ್ಧ ಭಾರಿ ಘೋರವಾಗಿ ಹೋರಾಟ ಆರಂಭವಾಗಿದೆ. ಪ್ರತಿಭಟನೆ ಬೇರೆ ಬೇರೆ ಭಾಗಕ್ಕೆ ಹಬ್ಬದಂತೆ ತಡೆಯಲು ಅಧಿಕಾರಿಗಳು ಇಂಟರ್‌ನೆಟ್ ಸೇವೆ ಬಂದ್ ಮಾಡಿದ್ದಾರೆ. ಮತ್ತೊಂದು ಕಡೆ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಇರಾನ್ ದೇಶದಲ್ಲಿ ಉಚಿತವಾಗಿ ಇಂಟರ್ನೆಟ್ ಸೇವೆ ನೀಡುತ್ತಿದೆ. ಆದರೆ ಸ್ಟಾರ್‌ಲಿಂಕ್ ಮೂಲಕ ಉಚಿತವಾಗಿ ಇಂಟರ್ನೆಟ್ ಸೇವೆ ಪಡೆಯುತ್ತಿರುವ ಪ್ರಜೆಗಳನ್ನು ಪತ್ತೆ ಮಾಡಿ ಇರಾನ್ ಅಧಿಕಾರಿಗಳು ಹಿಂಸೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇಷ್ಟೆಲ್ಲಾ ಇದ್ದಾಗಲೇ ದಿಢೀರ್ ಬ್ಲೂಟೂತ್ ಅಸ್ತ್ರ ಪ್ರಯೋಗ ಮಾಡಲಾಗಿದೆ.

ಬ್ಲೂಟೂತ್ ಮೂಲಕ ಸಂದೇಶ ರವಾನೆ
ಮಧ್ಯಪ್ರಾಚ್ಯ ಭಾಗದ ಪ್ರಭಾವಿ ದೇಶವಾಗಿರುವ ಇರಾನ್‌ನಲ್ಲಿ ಇದೀಗ ಇಂಟರ್‌ನೆಟ್ ಸೇವೆ ಬಂದ್ ಆಗಿ, ಪ್ರತಿಭಟನೆ ಸಂಬಂಧ ಯಾವುದೇ ಸಂದೇಶ ಅಥವಾ ವಿಡಿಯೋ ಹಂಚಿಕೊಳ್ಳಲು ಅವಕಾಶ ಸಿಗದಿದ್ದರೂ ಹೊಸ ಅಸ್ತ್ರ ಬಳಕೆ ಮಾಡಲಾಗಿದೆ. ಓಪನ್ ಸೋರ್ಸ್ಡ್ ಬ್ಲೂಟೂತ್ ಆಧಾರಿತ ಮೆಸೇಜಿಂಗ್ ಅಪ್ಲಿಕೇಶನ್ ಬಿಟ್‌ಚಾಟ್‌ನಂತಹ ಅಪ್ಲಿಕೇಶನ್‌ಗಳತ್ತ ಮುಖ ಮಾಡಿರುವ ಇರಾನ್ ಜನರು, ಇದರ ಸಹಾಯ ಪಡೆದು ಇದೀಗ ಹೋರಾಟದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ಇರಾನ್ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ
ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಡೆವಲಪ್ ಮಾಡಿರುವ ಅಪ್ಲಿಕೇಶನ್‌ಗೆ ಇಂಟರ್ನೆಟ್ ಸಂಪರ್ಕ ಬೇಕಿಲ್ಲ. ಐಒಎಸ್ & ಆಂಡ್ರಾಯ್ಡ್ ಮೊಬೈಲ್ ಮೂಲಕ ಬ್ಲೂಟೂತ್ ಬಳಸಿ ಸಂದೇಶ ಕಳುಹಿಸಲು ಇದು ಸಹಾಯ ಮಾಡುತ್ತಿದೆ. ಹೀಗಾಗಿ ಜನರು ಕೂಡ ಬಿಟ್‌ಚಾಟ್‌ನಂತಹ ಅಪ್ಲಿಕೇಶನ್‌ಗಳತ್ತ ಮುಖ ಮಾಡಿದ್ದು, ಪ್ರತಿಭಟನೆ ಇನ್ನಷ್ಟು ಕಾವು ಪಡೆಯುತ್ತಿದೆ. ಕಳೆದ ವರ್ಷದ ಜುಲೈನಲ್ಲಿ ಪ್ರಾರಂಭಿಸಲಾದ ಬಿಟ್‌ಚಾಟ್ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಸಂದೇಶ ಕಳುಹಿಸುವ ಅಪ್ಲಿಕೇಶನ್. ಈಗ ಇರಾನ್ ಹೋರಾಟಗಾರರಿಗೆ ಇದೇ ಅಪ್ಲಿಕೇಶನ್ ನೆರವಿಗೆ ಬರುತ್ತಿದ್ದು, ಇರಾನ್ ಸರ್ಕಾರ ನಲುಗಿದೆ.












Click it and Unblock the Notifications