Iran: ಇರಾನ್ ಬಡಿದಾಟದಲ್ಲಿ ಸಾವಿನ ಸಂಖ್ಯೆ 3,400ಕ್ಕೆ ಏರಿಕೆ, ಅಮೆರಿಕ ಅಧ್ಯಕ್ಷ ನೀಡಿದ ಎಚ್ಚರಿಕೆ ಏನು?
ಇರಾನ್ ಪ್ರತಿಭಟನೆ ಕಾವು ಇಡೀ ಜಗತ್ತಿಗೆ ತಲುಪಿದ್ದು, ಅಮೆರಿಕ ಎದ್ದು ಕೂತಿದೆ. ಯಾವ ಕ್ಷಣದಲ್ಲಿ ಬೇಕಾದರೂ ಅಮೆರಿಕದ ಯುದ್ಧ ವಿಮಾನಗಳು ನೇರವಾಗಿ ಇರಾನ್ ಕಡೆಗೆ ನುಗ್ಗಿ ದಾಳಿ ಮಾಡುವ & ಇರಾನ್ ಸರ್ಕಾರ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಇರಾನ್ ಮತ್ತು ಅಮೆರಕ ನಡುವೆ ಯುದ್ಧದ ಕಾರ್ಮೋಡ ಆವರಿಸಿದ ಸಮಯದಲ್ಲೇ ಇರಾನ್ ಬಡಿದಾಟದಲ್ಲಿ ಸಾವಿನ ಸಂಖ್ಯೆ 3,400ಕ್ಕೆ ಏರಿಕೆ ಆಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೌದು, ಇರಾನ್‌ನಲ್ಲಿ ಪ್ರತಿಭಟನಾಕಾರರ ಹತ್ಯೆ ನಿಲ್ಲಿಸಲಾಗಿದೆ ಎಂದು ತಮಗೆ ತಿಳಿಸಲಾಗಿದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್. ಮತ್ತೊಂದು ಕಡೆ ಸೇನಾ ಕಾರ್ಯಾಚರನೆ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿ ಮಾತನಾಡಿರುವ ಟ್ರಂಪ್ ಅವರು, ಅದನ್ನು ವೀಕ್ಷಿಸುತ್ತೇನೆ ಮತ್ತು ನೋಡುತ್ತೇನೆ ಎಂದಿದ್ದಾರೆ. ಇರಾನ್ ಸರ್ಕಾರದ ವಿರುದ್ಧ ಹಾಗೂ ಅಲ್ಲಿನ ಆಡಳಿತ ವೈಫಲ್ಯ ಖಂಡಿಸಿ ಹೋರಾಟ ಆರಂಭವಾಗಿತ್ತು.

3,428 ಜನರ ಜೀವ ಬಲಿ
ಆಡಳಿತ ವೈಫಲ್ಯದ ವಿರುದ್ಧ ಶುರುವಾದ ಪ್ರತಿಭಟನೆಗಳು ಘೋರ ರೂಪ ಪಡೆದು, ಈವರೆಗೂ ಸುಮಾರು 3,428 ಜನರನ್ನ ಬಲಿ ಪಡೆಯಲಾಗಿದೆ ಎಂಬ ಆರೋಪ ಇದೆ. ಹೀಗೆ ಇರಾನ್ ನೆಲದಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೋರಾಟ ಮಾಡಿದವರ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪವನ್ನ ಟ್ರಂಪ್ ಗಂಭೀರವಾಗಿ ಪರಿಗಣಿಸಿದ್ದರು. ಅಲ್ಲದೆ ಇರಾನ್‌ಗೆ ನೇರವಾಗಿ ಪೆಟ್ಟು ಕೊಡುವ ಎಚ್ಚರಿಕೆ ನೀಡಿದ್ದರು, ಆದರೆ ಈಗ ಅವರೇ ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಇಲ್ಲ?
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚರ್ಚೆಯಾದ ವಿಚಾರ ಏನೆಂದರೆ ಇರಾನ್ ವಿರುದ್ಧ ನೇರ ಸೇನಾ ಕಾರ್ಯಾಚರಣೆಗೆ ಅಮೆರಿಕ ಮುಂದಾಗುತ್ತಾ? ಎಂಬುದು. ಆದರೆ ಇದೀಗ ಅಮೆರಿಕ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಟೆಹ್ರಾನ್ ಹಿಂಸೆ ನಿಲ್ಲಿಸಿದೆ ಹಾಗೂ ಅದು ಮುಂದುವರಿಯುವುದಿಲ್ಲ ಎಂಬ ಭರವಸೆ ಸಿಕ್ಕಿದೆ ಎಂದಿದ್ದಾರೆ. ಕೊಲೆ ನಿಂತಿದೆ ಮತ್ತು ಮರಣದಂಡನೆಗಳು ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ, ನಾವು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತೇವೆ ಎಂದಿದ್ದಾರೆ ಟ್ರಂಪ್. ಆದರೆ ಅಮೆರಿಕ ಸೇನೆ ನೇರವಾಗಿ ಇರಾನ್‌ಗೆ ನುಗ್ಗುವ ಕುರಿತು ಟ್ರಂಪ್ ಅವರು ಇನ್ನೂ ಸ್ಪಷ್ಟನೆ ನೀಡಿಲ್ಲ.
ಇರಾನ್ ವಾಯು ಗಡಿ ಬಂದ್
ಅಮೆರಿಕ ದಾಳಿ ಮಾಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಇರಾನ್ ವಾಯು ಗಡಿ ಬಂದ್ ಮಾಡಿದೆ. ಇರಾನ್ ವಾಯು ಪ್ರದೇಶ ಬಂದ್ ಮಾಡಿ ಆದೇಶ ಹೊರಡಿಸಿದ್ದು, ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಗುರುವಾರ ಏರ್ ಇಂಡಿಯಾ ಅಮೆರಿಕಗೆ ತೆರಳಬೇಕಿದ್ದ ಒಟ್ಟು ಮೂರು ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಹಾಗೂ ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲವು ಯುರೋಪ್ ವಿಮಾನ ಸೇವೆಗಳು ವಿಳಂಬವಾಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಇರಾನ್ ಪ್ರಜೆಗಳು ಖುದ್ದು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಹೀಗೆ ಇರಾನ್ ಆಂತರಿಕ ಬಿಕ್ಕಟ್ಟು ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿದೆ.












Click it and Unblock the Notifications