800 ಜನರ ಜೀವ ಉಳಿಸಿದ್ದೇವೆ ಎಂದ ಅಮೆರಿಕ: ಇರಾನ್ ಬಿಕ್ಕಟ್ಟಿನ ತಾಜಾ ಮಾಹಿತಿ ಇಲ್ಲಿದೆ
ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗಿಲ್ಲ, ಇಬ್ಬರೂ ಯಾವುದೇ ಸಮಯದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ಮಾಡಿ ಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಅಮೆರಿಕದ ಪಡೆಗಳು ಇರಾನ್ ಮೇಲೆ ದಾಳಿ ಮಾಡಲು ಸನ್ನದ್ಧವಾಗಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಕೊನೇ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್ ಅವರು ಇರಾನ್ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ. ಟ್ರಂಪ್ ಅವರ ಹೇಳಿಕೆ ಬೆನ್ನಲ್ಲೇ ಈಗ ಅಮೆರಿಕ ಅಧ್ಯಕ್ಷರ ಅಧಿಕೃತ ಕಚೇರಿ ವೈಟ್‌ಹೌಸ್ ನೀಡಿರುವ ಸ್ಪಷ್ಟನೆ ಜಗತ್ತಿನ ಗಮನ ಸೆಳೆದಿದೆ.
ಇರಾನ್ ನೆಲದಲ್ಲಿ ಪ್ರತಿಭಟನೆಗಳ ವಿರುದ್ಧ ತೆಹ್ರಾನ್ ಕೈಗೊಂಡಿರುವ ಕ್ರಮಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಒತ್ತಡದ ಮೇರೆಗೆ ಇರಾನ್ ಕನಿಷ್ಠ 800 ಜನರ ಮರಣದಂಡನೆ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಬಗ್ಗೆ ತಿಳಿಸಿದ್ದು, ಟ್ರಂಪ್ ಅವರ ಮಧ್ಯಸ್ಥಿತಿಕೆಯ ಕಾರಣಕ್ಕೆ 800 ಜನರ ಮರಣದಂಡನೆಗೆ ಬ್ರೇಕ್ ಹಾಕಲಾಗಿದೆ ಎಂದಿದ್ದಾರೆ. ಅಲ್ಲದೆ, ಅಧ್ಯಕ್ಷರ ಮುಂದೆ ಎಲ್ಲಾ ಆಯ್ಕೆಗಳು ಉಳಿದಿವೆ ಹಾಗೂ ಇದೇ ರೀತಿ ಪ್ರತಿಭಟನಾಕಾರರ ಹತ್ಯೆ ಮುಂದುವರಿದರೆ ಗಂಭೀರ ಪರಿಣಾಮಗಳ ಬಗ್ಗೆ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದಿದ್ದಾರೆ.

ಇರಾನ್ ಪರಿಸ್ಥಿತಿಯ ಬಗ್ಗೆ ಅವಲೋಕನ
ಕ್ಯಾರೋಲಿನ್ ಲೀವಿಟ್ ಇದೇ ವೇಳೆ ಮತ್ತೊಂದು ವಿಚಾರ ಸ್ಪಷ್ಟಪಡಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಅಮೆರಿಕ ಈಗಲೂ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಒಂದು ಆಯ್ಕೆಯನ್ನು ಇಟ್ಟುಕೊಂಡಿದೆ ಎನ್ನುವ ಮುನ್ಸೂಚನೆ ಸಿಗುತ್ತಿದೆ. ಡೊನಾಲ್ಡ್ ಟ್ರಂಪ್ ಕೂಡ ಈ ಬಗ್ಗೆ ಕೆಲವು ಗಂಟೆಗಳ ಹಿಂದಷ್ಟೇ ಮಾತನಾಡಿ, ಇರಾನ್‌ನ ಅಧಿಕಾರಿಗಳು ಮರಣದಂಡನೆ ಕ್ರಮ ನಿಲ್ಲಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎನ್ನುವ ವಿಚಾರ ತಿಳಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನಂತರ ಶ್ವೇತಭವನ ಅಧಿಕೃತವಾಗಿ ಇದನ್ನು ಸ್ಪಷ್ಟಪಡಿಸಿದೆ.
ಟ್ರಂಪ್ ಮೇಲೆ ರಾಜತಾಂತ್ರಿಕ ಒತ್ತಡ
ಹಾಗೇ ಇನ್ನೊಂದು ಕಡೆ ಚರ್ಚೆ ಆಗುತ್ತಿರುವ ವಿಚಾರ ಏನೆಂದರೆ, ಇರಾನ್ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರ ದಿಢೀರ್ ಮೃದು ಧೋರಣೆಗೆ ಮಧ್ಯಪ್ರಾಚ್ಯದ ಬಲಿಷ್ಠ ರಾಷ್ಟ್ರಗಳ ಒತ್ತಡ ಕೂಡ ಕಾರಣ ಎನ್ನಲಾಗಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್ ನಾಯಕರು ಹಾಗೂ ಅಧಿಕಾರಿಗಳು ದಿಢೀರ್ ತುರ್ತು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಇದೇ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ತಡೆಯಲು ಗಂಭೀರ ಚರ್ಚೆ ನಡೆದಿದ್ದು, ರಾಜತಾಂತ್ರಿಕ ಒತ್ತಡವನ್ನು ಹೇರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಟ್ರಂಪ್ ಕೂಡ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕುತ್ತಿರುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಇದು ಒಂದು ಕಡೆ ಆಗಿದ್ದರೆ, ಇನ್ನೊಂದು ಕಡೆ ಇರಾನ್ ತಮ್ಮ ಮೇಲೂ ದಾಳಿ ಮಾಡಬಹುದು ಎಂಬ ಭೀತಿ ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್ ದೇಶಗಳಿಗೆ ಕಾಡುತ್ತಿದೆ. ಏಕೆಂದರೆ ಈ ದೇಶಗಳಲ್ಲಿ ಅಮೆರಿಕದ ಸೇನಾ ನೆಲೆಗಳು ಇವೆ. 2025 ಜೂನ್ ತಿಂಗಳಲ್ಲಿ, ಇಸ್ರೇಲ್ ವಿರುದ್ಧ ಯುದ್ಧ ಮಾಡುವ ಸಮಯದಲ್ಲಿ ಇರಾನ್ ನೇರವಾಗಿ ಮಧ್ಯಪ್ರಾಚ್ಯದ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿಯನ್ನು ನಡೆಸಿತ್ತು. ಇದರ ಪರಿಣಾಮ ಕತಾರ್ ಸೇರಿದಂತೆ ಸುತ್ತಮುತ್ತಲ ದೇಶಗಳಲ್ಲಿ ಆತಂಕ ಎದುರಾಗಿತ್ತು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ಇದೀಗ ಅಮೆರಿಕ ಅಧ್ಯಕ್ಷರ ಮೇಲೆ ಒತ್ತಡ ಹೇರಲಾಗಿದ್ದು, ಇದೇ ಕಾರಣಕ್ಕೆ ಟ್ರಂಪ್ ಅವರು ಕೂಡ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications