Iran And USA: ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಆತಂಕ, ಬಂಕರ್ ಸೇರಿದ ಇರಾನ್ ಸರ್ವಾಧಿಕಾರಿ?
ಅಮೆರಿಕ ಮತ್ತು ಇರಾನ್ ನಡುವೆ ಇದೀಗ ಘೋರ ಯುದ್ಧ ನಡೆಯುವ ಎಲ್ಲಾ ಲಕ್ಷಣ ಗೋಚರಿಸಿದೆ. ಈ ಪೈಕಿ ಡೊನಾಲ್ಡ್ ಟ್ರಂಪ್ ಯಾವಾಗ ನೇರವಾಗಿ ಇರಾನ್ ಕಡೆಗೆ ಅಮೆರಿಕದ ಬೃಹತ್ ಸೇನೆಯನ್ನ ಹಾಗೂ ಸೇನಾ ಹಡಗನ್ನು ನುಗ್ಗಿಸಲು ಅನುಮತಿ ನೀಡಿದರೋ, ಆ ನಂತರ ಪರಿಸ್ಥಿತಿ ಮತ್ತೊಂದು ತಿರುವು ಪಡೆಯುತ್ತಿದೆ. ಇಷ್ಟೆಲ್ಲಾ ನಡೆಯುವಾಗಲೇ ಮತ್ತೊಂದು ಕಡೆ ಇರಾನ್ ನೆಲದಲ್ಲಿ ತಲ್ಲಣವೇ ಸೃಷ್ಟಿಯಾಗಿದೆ. ಅದು ಏನೆಂದರೆ ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಆತಂಕದಲ್ಲಿ ಬಂಕರ್ ಸೇರಿದ ಇರಾನ್ ಸರ್ವಾಧಿಕಾರಿ? ಹೀಗೊಂದು ಪ್ರಶ್ನೆ ಇಡೀ ಜಗತ್ತನ್ನು ಕಾಡುವಾಗ, ಇರಾನ್ ಅಧಿಕಾರಿಗಳು ಅಮೆರಿಕ ವಿರುದ್ಧ ಮತ್ತೆ ಗುಡುಗಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು, ಆ ಮೂಲಕ ಇಡೀ ಜಗತ್ತಿನಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಬಹುದು ಎಂಬ ಆತಂಕ ಮನೆಮಾಡಿದೆ. ಈ ಮಧ್ಯೆ ರಷ್ಯಾ ಮತ್ತು ಚೀನಾ ಬೇರೆಯದ್ದೇ ತಂತ್ರ ಹೂಡಿವೆ ಎಂಬ ಚರ್ಚೆಗಳ ನಡುವೆ, ಅಮೆರಿಕ ಮಾತ್ರ ಇರಾನ್ ಕೊಬ್ಬು ಕರಗಿಸುತ್ತೇವೆ ಎಂದು ಮುಂದೆ ನುಗ್ಗುತ್ತಿದೆ. ಇದು ಮಧ್ಯಪ್ರಾಚ್ಯ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಹೊಸ ಅಶಾಂತಿ ಸೃಷ್ಟಿ ಮಾಡಬಹುದು ಎಂಬುದು ತಜ್ಞರ ವಾದ. ಈ ಪರಿಸ್ಥಿತಿಯ ನಡುವೆ ಇರಾನ್ ಸರ್ವಾಧಿಕಾರಿ ಖಮೇನಿ ಈಗ ಎಲ್ಲಿ? ಎಂಬ ಪ್ರಶ್ನೆ ಮೂಡಿದೆ.

ಖಮೇನಿ ದಿಢೀರ್ ಬಂಕರ್ ಒಳಗೆ?
ಇರಾನ್ ವಿರುದ್ಧ ಈ ಬಾರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಲು ಅಮೆರಿಕ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ, ಏಕೆಂದರೆ ಇರಾನ್ ಕಡೆಗೆ ಅಮೆರಿಕ ಕಳಿಸುತ್ತಿರುವ ಅಸ್ತ್ರಗಳು ಅಷ್ಟು ದೊಡ್ಡ ಮಟ್ಟದಲ್ಲಿವೆ. ಮಧ್ಯಪ್ರಾಚ್ಯ ಕಡೆಗೆ ಅಮೆರಿಕ ಸೇನೆಯ F-15E ಸ್ಟ್ರೈಕ್ ಈಗಲ್ ಜೆಟ್‌ಗಳು & ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಹೊರಟು ಬರುತ್ತಿವೆ. ಮತ್ತೊಂದೆಡೆ ಈ ವೇಳೆ ಅಮೆರಿಕ ದಿಢೀರ್ ಮಧ್ಯಪ್ರಾಚ್ಯದಲ್ಲಿ ತನ್ನ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕೂಡ ಬಲಪಡಿಸಿದೆ. ಇದೆಲ್ಲವನ್ನೂ ನೋಡಿರುವ ಇರಾನ್ ಸರ್ವಾಧಿಕಾರಿ ಖಮೇನಿ ಬಂಕರ್ ಸೇರಿರುವ ಆರೋಪ ಕೇಳಿಬಂದಿದೆ.
ಮಧ್ಯಪ್ರಾಚ್ಯದ ಭವಿಷ್ಯ ಡೋಲಾಯಮಾನ
ಏನೋ ದೊಡ್ಡದಾಗಿ ಕಾರ್ಯಾಚರಣೆ ನಡೆಯುವ ಮುನ್ಸೂಚನೆ ಸಿಗುತ್ತಿದ್ದು, ಆ ದಿಕ್ಕಿನಲ್ಲಿ ದೊಡ್ಡದಾದ ಸೈನ್ಯವೇ ಹೊರಟಿದೆ. ಹೀಗಾಗಿ ಏನಾಗುತ್ತದೆ? ಎಂದು ಕಾದು ನೋಡುತ್ತಿದೆ ಇಡೀ ಜಗತ್ತು. ಆದರೆ ಈ ಸಮಯದಲ್ಲೂ ಇರಾನ್ ಮಾತ್ರ ಸಂಧಾನದ ಮಾತು ಆಡುತ್ತಿಲ್ಲ. ಬದಲಾಗಿ ಇರಾನ್ ಈಗಲೂ ಅದೇ ಹಾಡು ಎನ್ನುವಂತೆ ತಾನು ಕೂಡ ಯುದ್ಧಕ್ಕೆ ಸಿದ್ಧ ಎನ್ನುತ್ತಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿದೆ. ಯಾವುದೇ ಕ್ಷಣದಲ್ಲಿ ಅಮೆರಿಕ & ಇರಾನ್ ನಡುವೆ ಘೋರ ಸೇನಾ ಕಾರ್ಯಾಚರಣೆ ಶುರುವಾಗುವ ಲಕ್ಷಣ ಗೋಚರಿಸುತ್ತಿದೆ. ಇನ್ನುಳಿದಂತೆ ಅಮೆರಿಕ ದಾಳಿ ಮಾಡುವ ವೇಳೆ ಇಸ್ರೇಲ್ ಕೂಡ ಇರಾನ್ ವಿರುದ್ಧ ಮುಗಿಬೀಳಲಿದ್ದು, ಮಧ್ಯಪ್ರಾಚ್ಯದ ಭವಿಷ್ಯ ಡೋಲಾಯಮಾನವಾಗಿದೆ.












Click it and Unblock the Notifications