10 ವರ್ಷಗಳ ಬಳಿಕ ಇನ್‌ಸ್ಟಾಗ್ರಾಮ್ ಹೊಸ ಲೋಗೋ: ವಿನ್ಯಾಸ ಬದಲಾವಣೆಗೆ ನೆಟ್ಟಿಗರಿಂದ ಭಾರೀ ಟೀಕೆ

Instagram New Logo: ಯುವಜನರ ನೆಚ್ಚಿನ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ತನ್ನ ಪ್ರಸಿದ್ಧ ಟೆಕ್ಸ್ಟ್ ಲೋಗೋವನ್ನ ಬರೋಬ್ಬರಿ ಹತ್ತು ವರ್ಷಗಳ ನಂತರ ಬದಲಾಯಿಸಿದೆ. ಆದರೆ, ಇನ್‌ಸ್ಟಾಗ್ರಾಮ್‌ನ ಈ ಹೊಸ ವಿನ್ಯಾಸದ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

Instagram ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರು ಇತ್ತೀಚೆಗೆ ತಮ್ಮ ಖಾತೆಯಲ್ಲಿ ಹೊಸ ಟೆಕ್ಸ್ಟ್ ಲೋಗೋ ಫಾಂಟ್ ಅನ್ನು ಪರಿಚಯಿಸಿದ್ದರು. ಈ ಬದಲಾವಣೆಯು ಆ್ಯಪ್‌ಗೆ ಹೊಸ ಕಳೆ ನೀಡಲಿದೆ ಎಂದು ಅವರು ಭಾವಿಸಿದ್ದರು, ಆದರೆ ನೆಟ್ಟಿಗರ ಪ್ರತಿಕ್ರಿಯೆ ಸಂಪೂರ್ಣವಾಗಿ ಈ ಅನಿಸಿಕೆಗೆ ತುಂಬ ವಿರುದ್ಧವಾಗಿದೆ. ಇನ್‌ಸ್ಟಾಗ್ರಾಮ್‌ನ ಈ ನಿರ್ಧಾರ ಬಳಕೆದಾರರಿಗೆ ಇಷ್ಟವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

Instagram


ಆಡಮ್ ಮೊಸ್ಸೆರಿ ಅವರ ಹೇಳಿಕೆ ಏನು?

"ಕಳೆದ 10 ವರ್ಷಗಳಿಂದ ಇನ್‌ಸ್ಟಾಗ್ರಾಮ್ ಆ್ಯಪ್‌ನ ಮೇಲ್ಭಾಗದಲ್ಲಿರುವ ವರ್ಡ್‌ಮಾರ್ಕ್ ಬದಲಾಗಿರಲಿಲ್ಲ. ಹೀಗಾಗಿ ಇದೀಗ ಒಂದು ಹೊಸ ರಿಫ್ರೆಶ್ ನೀಡುವ ಸಮಯ ಬಂದಿದೆ," ಎಂದು ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಬರೆದುಕೊಂಡಿದ್ದಾರೆ. "ಇದು ಹಿಂದಿಗಿಂತಲೂ ಹೆಚ್ಚು ಸ್ವಚ್ಛ ಮತ್ತು ಆಧುನಿಕವಾಗಿದೆ . ಇನ್‌ಸ್ಟಾಗ್ರಾಮ್ ಅನ್ನ ಯಾವಾಗಲೂ ವಿಶೇಷವಾಗಿರಿಸಿರುವ ಸರಳತೆ ಮತ್ತು ಕರಕುಶಲತೆಯನ್ನ ಇದು ಪ್ರತಿಬಿಂಬಿಸುತ್ತದೆ," ಎಂದು ಅವರು ತಿಳಿಸಿದ್ದಾರೆ. ಬಿಳಿ ಬ್ಯಾಕ್‌ಗ್ರೌಂಡ್‌ ಕಪ್ಪು ಬಣ್ಣದಿಂದ ಬರೆದಿರುವ ಹೊಸ 'Instagram' ವಿನ್ಯಾಸದ ಚಿತ್ರವನ್ನ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿನ್ಯಾಸದಲ್ಲಿ ಆಗಿರುವ ಬದಲಾವಣೆಗಳೇನು?

ಬಳಕೆದಾರರ ಹೋಮ್ ಸ್ಕ್ರೀನ್‌ನಲ್ಲಿ ಕಾಣುವ ಗುಲಾಬಿ ಮತ್ತು ಕಿತ್ತಳೆ ಬಣ್ಣದ ಗ್ರೇಡಿಯಂಟ್ ಸ್ಕ್ವೇರ್ ಲೋಗೋದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಮೊದಲಿನಂತೆಯೇ ಇದೆ. ಆದರೆ, ಆ್ಯಪ್‌ ಓಪನ್ ಮಾಡಿದಾಗ ಮೇಲ್ಭಾಗದಲ್ಲಿ ಕಾಣುವ "Instagram" ಎಂಬ ಪದದ ಫಾಂಟ್ ಅನ್ನು ಬದಲಾಯಿಸಲಾಗಿದೆ.

ಈ ಬದಲಾವಣೆ ನೋಡಲು ಚಿಕ್ಕದಾಗಿದ್ದರೂ, ಬಳಕೆದಾರರ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಹೊಸ ವಿನ್ಯಾಸದಲ್ಲಿ ಅಕ್ಷರಗಳಿಗೆ ಕರ್ಸಿವ್ ತಿರುವುಗಳನ್ನ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ "s," "g," ಮತ್ತು "r" ಅಕ್ಷರಗಳಿಗೆ ಹಳೆಯ ಶೈಲಿಯ ತಿರುವುಗಳನ್ನ ಸೇರಿಸಲಾಗಿದೆ.

ನೆಟ್ಟಿಗರ ಟೀಕೆ

ಆಡಮ್ ಮೊಸ್ಸೆರಿ ಅವರ ಪೋಸ್ಟ್‌ಗೆ ಆರಂಭದಲ್ಲಿ ಕೆಲವು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದರೂ, ಶೀಘ್ರದಲ್ಲೇ ಜನರು ಈ ಬದಲಾವಣೆಯ ಹಿಂದಿನ ಕಾರಣವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿನ್ಯಾಸದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಅನೇಕರು ಈ ಹೊಸ ಫಾಂಟ್ ಆಕರ್ಷಕವಾಗಿಲ್ಲ ಎಂದು ಹೇಳಿದರೆ, ಕೆಲವರು ಇದನ್ನು ಕೇವಲ "AI slop" ಎಂದು ಟೀಕಿಸಿದ್ದಾರೆ.

ಒಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ಮೆಟಾ ಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವವರಿಗೆ ಗುಣಮಟ್ಟದ ಕೆಲಸದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೊಸ ಲೋಗೋ ಅತ್ಯಂತ ಕೆಟ್ಟದಾಗಿ ಕಾಣುತ್ತಿದೆ. ಇದು ಕ್ಲಾಸಿಕ್ ಸ್ಕ್ರಿಪ್ಟ್ ಮತ್ತು ಸ್ಟ್ಯಾಂಡರ್ಡ್ ಸಾನ್ಸ್ ಸೆರಿಫ್ ಎರಡನ್ನೂ ಬೆರೆಸಲು ಹೋಗಿ ಎಡವಿದೆ. ಇದರಲ್ಲಿರುವ 'I' ಅಕ್ಷರ ತುಂಬ ವಿಭಿನ್ನವಾಗಿದೆ," ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು "ಖಂಡಿತ ಇದು ಬೇಡ " ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಹೊಸ ಫಾಂಟ್‌ನಲ್ಲಿರುವ "r" ಅಕ್ಷರದ ಆಕಾರವು ಸ್ಪಷ್ಟವಾಗಿಲ್ಲದ ಕಾರಣ, ಇದು "Instagram" ಬದಲಿಗೆ "Instagzam" ಎಂದು ಓದುತ್ತಾರೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಯಾವಾಗ ಲೋಗೋ ಬದಲಾಗಿತ್ತು?

ಕೊನೆಯ ಬಾರಿಗೆ ಇನ್‌ಸ್ಟಾಗ್ರಾಮ್ ತನ್ನ ವಿನ್ಯಾಸವನ್ನ 2016 ರಲ್ಲಿ ಬದಲಾಯಿಸಿತ್ತು. ಆ ಸಮಯದಲ್ಲಿ, ಕಂಪನಿಯು ಕಾಮನಬಿಲ್ಲು ಪಟ್ಟಿಯನ್ನ ಹೊಂದಿದ್ದ ತನ್ನ ಕ್ಲಾಸಿಕ್ ಕಂದು ಬಣ್ಣದ ಕ್ಯಾಮೆರಾ ಲೋಗೋವನ್ನ ಸಂಪೂರ್ಣವಾಗಿ ಕೈಬಿಟ್ಟಿತ್ತು. ಅದರ ಸ್ಥಾನದಲ್ಲಿ, ಪ್ರಸ್ತುತ ಇರುವ ವರ್ಣರಂಜಿತ ಹಾಗೂ ಆಕರ್ಷಕ ಗ್ರೇಡಿಯಂಟ್ ಲೋಗೋವನ್ನು ಪರಿಚಯಿಸಲಾಗಿತ್ತು. ಆ ಸಮಯದಲ್ಲಿ ಈ ಬದಲಾವಣೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದೀಗ 10 ವರ್ಷಗಳ ಬಳಿಕ ಆಗಿರುವ ಈ ಟೆಕ್ಸ್ಟ್ ಲೋಗೋ ಬದಲಾವಣೆಯನ್ನು ಬಳಕೆದಾರರು ಮುಂದಿನ ದಿನಗಳಲ್ಲಿ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+