ಅಮೆರಿಕದಲ್ಲಿ ವೃದ್ಧರಿಗೆ ವಂಚನೆ: ಪೊಲೀಸರ ಬಲೆಗೆ ಬಿದ್ದ ಇಬ್ಬರು ಭಾರತೀಯರಿಗೆ 5 ವರ್ಷ ಜೈಲು ಶಿಕ್ಷೆ

ಅಮೆರಿಕದ ಅರ್ಕಾನ್ಸಾಸ್ ರಾಜ್ಯದಲ್ಲಿ ವೃದ್ಧರನ್ನ ಗುರಿಯಾಗಿಸಿಕೊಂಡು ಆನ್‌ಲೈನ್ ಮೂಲಕ ಹಣ ದೋಚುತ್ತಿದ್ದ ಇಬ್ಬರು ಭಾರತೀಯರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗಜೇರಾ ಪ್ರಶಾಂತ್ ಹಾಗೂ ಧಾರಾಬೆನ್ ಬಾವಡಿಯಾ ಎಂಬ ಇಬ್ಬರು ಆರೋಪಿಗಳು ಪೇಪಾಲ್ ರೀಫಂಡ್ ವಂಚನೆ ಜಾಲದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ಸ್ಥಳೀಯ ನ್ಯಾಯಾಲಯವು ಇಬ್ಬರಿಗೂ ಐದು ವರ್ಷಗಳ ಜೈಲು ಶಿಕ್ಷೆಯನ್ನ ವಿಧಿಸಿದೆ.

ಆರೋಪಿಗಳನ್ನ ಬಂಧಿಸಲು ಅಮೆರಿಕದ ಜಂಟ್ರಿ ಪೊಲೀಸ್ ಇಲಾಖೆ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ ಮತ್ತು ಆನ್‌ಲೈನ್ ವಂಚಕರ ಬಣ್ಣ ಬಯಲು ಮಾಡುವ ಜನಪ್ರಿಯ ಯೂಟ್ಯೂಬ್ ಚಾನಲ್ ಟ್ರೈಲಾಜಿ ಮೀಡಿಯಾ ಜಂಟಿಯಾಗಿ ಸ್ಟಿಂಗ್‌ ಆಪರೇಶನ್‌ ನಡೆಸಿದ್ದವು.

Indian Nationals

ಟ್ರೈಲಾಜಿ ಮೀಡಿಯಾ ತಂಡವು ತಾವು ವಂಚನೆಗೊಳಗಾಗುವ ಬಲಿಪಶುಗಳಂತೆ ನಟಿಸಿ, ಬರೋಬ್ಬರಿ 29,500 ಡಾಲರ್ ಅಂದರೆ ಅಂದಾಜು 24 ಲಕ್ಷ ರೂಪಾಯಿ ನಗದನ್ನ ಪಡೆಯಲು ಭಾರತದಿಂದ ಅಮೆರಿಕಕ್ಕೆ ಬರುವಂತೆ ಆರೋಪಿಗಳನ್ನ ನಂಬಿಸಿದ್ದರು. ಹಣ ನೀಡುವ ಸ್ಥಳದಲ್ಲಿ ಜಂಟ್ರಿ ಪೊಲೀಸ್ ಅಧಿಕಾರಿ ಡೇವಿಡ್ ವಿಲಿಯಮ್ಸನ್ ಅವರು ಬಿಳಿ ಕೂದಲು ಬಿಟ್ಟುಕೊಂಡು ವೃದ್ಧನ ವೇಷದಲ್ಲಿ ಕಾಯುತ್ತಿದ್ದರು.

ವಂಚಕರು ನೀಡಿದ್ದ ಏಂಜಲ್ ಎಂಬ ಕೋಡ್ ವರ್ಡ್ ಹೇಳಿ, ಮೊದಲೇ ನಿಗದಿಯಾಗಿದ್ದ ಸೀರಿಯಲ್ ನಂಬರ್ ಹೊಂದಿದ್ದ 1 ಡಾಲರ್ ನೋಟನ್ನು ತೋರಿಸಿದ ನಂತರ, ಅಧಿಕಾರಿಗಳು ನಕಲಿ ಹಣದ ಬಂಡಲ್ ಅನ್ನು ಆರೋಪಿಗಳ ಕೈಗಿಟ್ಟರು. ಹಣ ಆರೋಪಿಗಳ ಕೈಸೇರುತ್ತಿದ್ದಂತೆ ಅಲ್ಲಿಯೇ ಅಡಗಿದ್ದ ಪೊಲೀಸರು ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಗಜೇರಾ ಪ್ರಶಾಂತ್, ಧಾರಾಬೆನ್ ಬಾವಡಿಯಾ ಹಿನ್ನೆಲೆ ಏನು?

ವಿಚಾರಣೆ ವೇಳೆ ಆರೋಪಿ ಗಜೇರಾ ಪ್ರಶಾಂತ್ ಹಲವು ಅಚ್ಚರಿಯ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ತಾನು ಧಾರಾಬೆನ್ ಬಾವಡಿಯಾಳನ್ನ ಕೇವಲ ಏಳು ದಿನಗಳ ಹಿಂದೆಯಷ್ಟೇ ಭೇಟಿಯಾಗಿದ್ದೆ. ಒಂದು ಪಾರ್ಸೆಲ್ ತರಲು ಆಕೆ ತನಗೆ 300 ಡಾಲರ್ ಹಣದ ಆಮಿಷ ಒಡ್ಡಿದ್ದಳು. ಆ ಪಾರ್ಸೆಲ್‌ನಲ್ಲಿ ಸುಮಾರು 30,000 ಡಾಲರ್ ಹಣವಿದೆ ಎಂಬುದು ತನಗೆ ತಿಳಿದಿತ್ತು ಎಂದು ಆತ ಒಪ್ಪಿಕೊಂಡಿದ್ದಾನೆ.

ಇತ್ತ ಧಾರಾಬೆನ್, ತಾನು ಬಟ್ಟೆ ವ್ಯಾಪಾರದ ಉದ್ದೇಶಕ್ಕಾಗಿ ಕೆಲ ವಾರಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದಿರುವುದಾಗಿ ಹೇಳಿದ್ದಾಳೆ. ಭಾರತದಲ್ಲಿರುವ ತನ್ನ ಕುಟುಂಬ ಅಪಾಯದಲ್ಲಿದ್ದು, ಪ್ರಶಾಂತ್‌ನನ್ನು ಭೇಟಿಯಾಗುವಂತೆ ತನಗೆ ಸೂಚನೆ ಬಂದಿತ್ತು ಎಂದು ಆಕೆ ಕಥೆ ಕಟ್ಟಿದ್ದಾಳೆ.

ಆದರೆ, ಪೊಲೀಸರು ಇವರಿಬ್ಬರ ಬಳಿಯಿದ್ದ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಹಲವು ಸಿಮ್ ಕಾರ್ಡ್‌ಗಳನ್ನ ವಶಪಡಿಸಿಕೊಂಡಿದ್ದು, ಇವರು ಈ ವಂಚನಾ ಜಾಲದ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಶಂಕಿಸಿದ್ದಾರೆ.

ವೃದ್ಧರಿಗೆ ವಂಚನೆ ಮಾಡುವ ಪೇಪಾಲ್ ಸ್ಕ್ಯಾಮ್ ಹೇಗೆ ನಡೆಯುತ್ತದೆ?

ಫೆಡರಲ್ ಟ್ರೇಡ್ ಕಮಿಷನ್ ಪ್ರಕಾರ, ಸಾಮಾನ್ಯವಾಗಿ ಈ ರೀತಿಯ ವಂಚನೆಗಳು ಅಪರಿಚಿತ ಫೋನ್ ಕರೆಗಳು, ಇ-ಮೇಲ್ ಅಥವಾ ಪಾಪ್-ಅಪ್ ಮೆಸೇಜ್‌ಗಳ ಮೂಲಕ ಶುರುವಾಗುತ್ತವೆ.

ಮೊದಲಿಗೆ ವಂಚಕರು ಗ್ರಾಹಕರ ಖಾತೆಗೆ ಆಕಸ್ಮಿಕವಾಗಿ ಹೆಚ್ಚು ಹಣ ಜಮೆಯಾಗಿದೆ ಎಂದು ನಂಬಿಸುತ್ತಾರೆ. ಬಳಿಕ, ತಾವು ಕಳುಹಿಸಿರುವ ಹೆಚ್ಚುವರಿ ಹಣವನ್ನ ತಕ್ಷಣವೇ ಹಿಂದಿರುಗಿಸದಿದ್ದರೆ ತಮ್ಮ ಉದ್ಯೋಗ ಹೋಗುತ್ತದೆ ಎಂದು ಕಣ್ಣೀರು ಹಾಕುವ ನಾಟಕವಾಡುತ್ತಾರೆ.

ಇದನ್ನು ನಂಬುವ ಮುಗ್ಧ ವೃದ್ಧರು, ವಂಚಕರು ಕೇಳಿದ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ ಅಥವಾ ಗಿಫ್ಟ್ ಕಾರ್ಡ್, ಕ್ಯಾಶ್ ಪಿಕ್‌ಅಪ್ ಮೂಲಕ ಹಣ ನೀಡುತ್ತಾರೆ. "ಈ ವಂಚಕರು ಬಹಳ ತರಬೇತಿ ಪಡೆದಿರುತ್ತಾರೆ. ಯಾವ ಸಮಯದಲ್ಲಿ, ಹೇಗೆ ಮಾತನಾಡಿ ಎದುರಾಳಿಯನ್ನ ಭಾವುಕಗೊಳಿಸಿ ಹಣ ಕೀಳಬೇಕು ಎಂಬುದು ಅವರಿಗೆ ಕರಗತವಾಗಿರುತ್ತದೆ," ಎಂದು ತನಿಖಾಧಿಕಾರಿ ರಿಯಾನ್ ಲೋಫ್ಟಸ್ ಹೇಳಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಸಾರ್ವಜನಿಕರು ಇಂತಹ ಅಪರಿಚಿತ ಕರೆಗಳು ಅಥವಾ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವ ಮುನ್ನ ಎಚ್ಚರವಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+