ವಂಚನೆ ಆರೋಪ, ಎನ್ನಾರೈ ದಂಪತಿ ಬಂಧನ
ನ್ಯೂಯಾರ್ಕ್, ಡಿ.3: ಅಮೆರಿಕದ ಕೆಂಟುಕಿಯಲ್ಲಿ ಫಾಸ್ಟ್ ಫುಡ್ ರೆಸ್ಟೋರೆಂಟ್ ನಡೆಸುತ್ತಿದ್ದ ಭಾರತೀಯ ಮೂಲದ ದಂಪತಿಗಳ ಕೈಗೆ ಕೋಳ ಬಿದ್ದಿದೆ. ಸ್ಥಳೀಯ ಕಾರ್ಮಿಕರ ಸಮಸ್ಯೆಗೆ ತಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡು ಕೊಂಡಿದ್ದ ದಂಪತಿ, ಭಾರತದಿಂದ ಅಕ್ರಮವಾಗಿ ಕಾರ್ಮಿಕರನ್ನು ಅಮೆರಿಕ ಕರೆಸಿಕೊಂಡ ಆರೋಪವನ್ನು ದಂಪತಿಗಳ ಮೇಲೆ ಹೊರೆಸಲಾಗಿದೆ.
ಕಡಿಮೆ ವೇತನ ಕೊಟ್ಟು ಹೆಚ್ಚು ಸಮಯ ಕೆಲಸ ಮಾಡಿಸುವ ಉದ್ದೇಶದಿಂದ ಭಾರತದಿಂದ ಕೆಲಸದ ಆಳುಗಳನ್ನು (ಕಾರ್ಮಿಕರನ್ನು ) ಅಕ್ರಮವಾಗಿ ಕರೆತರುತ್ತಿದ್ದ ಭಾರತೀಯ ದಂಪತಿಯನ್ನು ಕೆಂಟುಕಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿ ಫಾಸ್ಟ್ ಪುಡ್ ಉದ್ಯಮ ನಡೆಸುತ್ತಿರುವ ಭಾರತದ ಅಮೃತ್ ಲಾಲ್ ಪಟೇಲ್ ಹಾಗೂ ಪತ್ನಿ ದಕ್ಷಾಬೆನ್ ಪಟೇಲ್ ಅವರು ಕಾನೂನು ಬಾಹಿರವಾಗಿ ಭಾರತದಿಂದ ಮಾನವ ಕಳ್ಳ ಸಾಗಣೆ ಮಾಡಿ ಇಲ್ಲಿಗೆ ಕರೆತಂದು ಅವರನ್ನು ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಕೆಂಟುಕಿ ಲೆಕ್ಸಿಂಗ್ಟನ್ ನಲ್ಲಿ ಇಂಥ ನಾಲ್ಕು ರೆಸ್ಟೋರೆಂಟ್ ಗಳನ್ನು ನಡೆಸುತ್ತಿರುವ ಈ ದಂಪತಿ ಭಾರತದಿಂದ ಬಡವರನ್ನು ಕರೆ ತಂದು ಯಾವುದೇ ದಾಖಲಾತಿಗಳೂ ಇಲ್ಲದ ಈ ಕಾರ್ಮಿಕರನ್ನು ಅತ್ಯಂತ ಕಡಿಮೆ ಸಂಬಳ(1800 USD)ದಲ್ಲಿ ದಿನದ 12 ಗಂಟೆಗಳಿಗೂ ಅಧಿಕ ಕಾಲ ದುಡಿಸಿಕೊಳ್ಳುತ್ತಾರೆ ಮತ್ತು ಈ ಕಾರ್ಮಿಕರಿಗೆ ವಾರದ ರಜೆ ಕೂಡ ಇರುವುದಿಲ್ಲ. ನಿರಂತರ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ ಎಂದು ಅಧಿಕಾರಿಗಳು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ಇದರಿಂದ ಈ ಪಟೇಲ್ ದಂಪತಿ ಹೆಚ್ಚು ಪ್ರಮಾಣದ ಹಣ ಗಳಿಸುತ್ತಿದ್ದಾರೆ ಎಂದು ಅಮೆರಿಕದ ಸಹಾಯಕ ಅಟಾನಿಕರ್ ಹೈಡೀ ಹಾಕಿನ್ಸ್ ಹೇಳಿದ್ದಾರೆ. ಪಟೇಲ್ ದಂಪತಿಯನ್ನು ಬಿಡುಗಡೆ ಮಾಡಿದರೆ ಅವರು ಭಾರತಕ್ಕೆ ಪರಾರಿಯಾಗಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಈಗಾಗಲೇ ಇವರು ಭಾರತಕ್ಕೆ ಒಂದು ಲಕ್ಷ ಡಾಲರ್ ಗಳಿಗೂ ಹೆಚ್ಚು ಸಂಪತ್ತನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಇಬ್ಬರು ಮಕ್ಕಳೊಂದಿಗೆ 2006 ರಲ್ಲಿ ಇಲ್ಲಿಗೆ ಬಂದ ಪಟೇಲ್ ದಂಪತಿ ಈಗ ಅಮೆರಿಕ ಪೌರತ್ವ ಪಡೆಯುವ ನಿರೀಕ್ಷೆಯಲ್ಲಿರುವುದರಿಂದ ತಿರುಗಿ ಭಾರತಕ್ಕೆ ಹೋಗಲಾರರು ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ.
ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ ಪಟೇಲ್ ದಂಪತಿ ನಾಲ್ವರು ಭಾರತೀಯರನ್ನು ರಾತ್ರಿ ವೇಳೆ ನೆಲ ಮಾಳಿಗೆಯಲ್ಲಿ ಕೂಡಿಹಾಕುತ್ತಿದ್ದರು. ಅವರಿಗೆ ಆರೋಗ್ಯ ಇಲ್ಲದಿದ್ದರೂ ಅವರಿಂದ ಕೆಲಸ ಮಾಡಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಪಟೇಲ್ ದಂಪತಿ ಇದೇ ರೀತಿ ಮಾಡುತ್ತಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಲೆಕ್ಸಿಂಗ್ಟನ್ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಹಿತಿತಿ ಕಲೆ ಹಾಕಿದ್ದಾರೆ. ನಂತರ ಪಟೇಲ್ ದಂಪತಿಯನ್ನು ಬಂಧಿಸಲಾಗಿದೆ.(ಪಿಟಿಐ)











Click it and Unblock the Notifications