ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ಜಗತ್ತಿನ ಅತಿ ದೊಡ್ಡ ಆಸ್ತಿ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್
ವಿಶ್ವಸಂಸ್ಥೆ, ಜನವರಿ 30: ಜಾಗತಿಕ ಲಸಿಕೆ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಭಾರತಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್, ಭಾರತದಲ್ಲಿನ ಲಸಿಕೆ ಉತ್ಪಾದನಾ ಸಾಮರ್ಥ್ಯವು ಇಂದು ಜಗತ್ತು ಹೊಂದಿರುವ ಅತ್ಯುತ್ತಮ ಆಸ್ತಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಟೆರಸ್, 'ಭಾರತವೇ ಅಭಿವೃದ್ಧಿಪಡಿಸಿದ ಲಸಿಕೆಗಳ ಬೃಹತ್ ಪ್ರಮಾಣದ ಉತ್ಪಾದನೆ ಭಾರತದಲ್ಲಿ ನಡೆಯುತ್ತಿದೆ ಎನ್ನುವುದು ನನಗೆ ತಿಳಿದಿದೆ. ಅದಕ್ಕಾಗಿ ಭಾರತದ ಸಂಸ್ಥೆಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಜಾಗತಿಕ ಲಸಿಕೆ ಆಂದೋಲನವನ್ನು ಶುರುಮಾಡುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲು ಅಗತ್ಯವಾದ ಎಲ್ಲ ಸಾಧನಗಳನ್ನೂ ಹೊಂದಲಿದೆ ಎಂಬ ಭರವಸೆ ನಮಗಿದೆ' ಎಂದರು.
'ಜಗತ್ತು ಇಂದು ಹೊಂದಿರುವ ಅತ್ಯುತ್ತಮ ಆಸ್ತಿ ಎಂದರೆ ಭಾರತದಲ್ಲಿನ ಲಸಿಕೆ ಉತ್ಪಾದನಾ ಸಾಮರ್ಥ್ಯ. ಜಗತ್ತು ಇದನ್ನು ಅರ್ಥ ಮಾಡಿಕೊಂಡು ಸಂಪೂರ್ಣವಾಗಿ ಬಳಸಿಕೊಳ್ಳುವ ವಿಶ್ವಾಸ ಹೊಂದಿದ್ದೇನೆ' ಎಂದು ತಿಳಿಸಿದರು.

'ಜಗತ್ತಿನಾದ್ಯಂತ ಔಷಧಗಳು ಲಭ್ಯವಾಗುವಂತೆ ಮಾಡುವುದು ಪ್ರಜಾಪ್ರಭುತ್ವೀಕರಣದ ಅತ್ಯಂತ ಮಹತ್ವದ ಅಂಶ ಎನ್ನುತ್ತೇನೆ. ಈಗಾಗಲೇ ಅಸ್ತಿತ್ವದಲ್ಲಿರುವ ಕೆಲವು ಲಸಿಕೆಗಳನ್ನು ಜಗತ್ತಿನಾದ್ಯಂತ ಉತ್ಪಾದಿಸಲು ಅನುಕೂಲವಾಗುವಂತೆ ಕಂಪೆನಿಗಳಿಗೆ ಪರವಾನಗಿ ನೀಡುವಂತೆ ಇಂದು ಮತ್ತೆ ಮನವಿ ಮಾಡುತ್ತೇನೆ' ಎಂದು ಹೇಳಿದರು.
ಭಾರತವು ನೆರೆಯ ದೇಶಗಳಿಗೆ 55 ಲಕ್ಷ ಡೋಸ್‌ಗಳಿಗೂ ಅಧಿಕ ಕೊರೊನಾ ವೈರಸ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ.












Click it and Unblock the Notifications