ಭಾರತ - ಚೀನಾ ನಡುವೆ ಮಹತ್ವದ ಮಾತುಕತೆ, ಗಸ್ತು ಒಪ್ಪಂದಕ್ಕೆ ಅಸ್ತು!
ಭಾರತ - ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ. ಚೀನಾ ಹಾಗೂ ಭಾರತದ ಗಡಿ ವಿವಾದ ಸಮಸ್ಯೆಯ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವಿಷಮ ಸ್ಥಿತಿಯನ್ನು ತಲುಪಿತ್ತು. ಭಾರತದ ಪ್ರಯತ್ನಗಳ ಹೊರತಾಗಿಯೂ ಚೀನಾ ಭಾರತದೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.
2020ರಲ್ಲಿ ಭಾರತ ಹಾಗೂ ಚೀನಾದ ಸೈನಿಕರ ನಡುವೆ ನಡೆದಿದ್ದ ಸಂಘರ್ಷವೇ ಇದಕ್ಕೆ ಕಾರಣ. ಭಾರತ ಹಾಗೂ ಚೀನಾದ ಸೈನಿಕ ನಡುವೆ ಗಲ್ವಾನ್ ಕಣಿವೆ ಪ್ರದೇಶದಲ್ಲಿ ದಾಳಿ ನಡೆದಿತ್ತು. ಈ ಬೆಳವಣಿಗೆಯಿಂದ ಎರಡೂ ದೇಶಗಳ ನಡುವೆ ವಿದೇಶಾಂಗ ನೀತಿಯಲ್ಲಿ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂಘರ್ಷ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಭಾರತ ಹಾಗೂ ಚೀನಾದ ನಡುವೆ ಮೊದಲಿನಿಂದಲೂ ಉತ್ತಮ ಸಂಬಂಧ ಇಲ್ಲ. ಆದರೆ, ರಾಜತಾಂತ್ರಿಕವಾಗಿ ಸಂಬಂಧ ಮುಂದುವರಿದಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯಿಂದ ಇದು ಸಹ ಹಾಳಾಗಿತ್ತು.

ಚೀನಾ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಇತ್ತೀಚಿನ ದಿನಗಳ ವರೆಗೂ ಮುಂದುವರಿಸಿದ್ದು ಇದೆ. ಆದರೆ, ಭಾರತದ ವಿದೇಶಾಂಗ ನೀತಿಯು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲೂ ಮಹತ್ವದ ಹೆಜ್ಜೆಯನ್ನೇ ಇರಿಸಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ಈಚೆಗೆ ಪಾಕಿಸ್ತಾನಕ್ಕೆ ಸಹ ಭೇಟಿ ನೀಡಿದ್ದರು. ಅಲ್ಲೂ ಸಹ ಸಕಾರಾತ್ಮಕ ಬೆಳವಣಿಗೆ ನಡೆದಿತ್ತು.
ಇನ್ನು ಚೀನಾದ ವಿಚಾರಕ್ಕೆ ಬಂದರೆ, 2020ರ ಬೆಳವಣಿಗೆಯ ನಂತರ ಭಾರತ ಹಾಗೂ ಚೀನಾದ ನಡುವಿನ ಸಂಬಂಧ ತೀರ ಹಾಳಾಗಿತ್ತು. ಇದೇ ಕಾರಣಕ್ಕಾಗಿ ಎರಡೂ ರಾಷ್ಟ್ರಗಳ ನಡುವೆ ಮಹತ್ವದ ಬೆಳವಣಿಗೆಗಳೇನೂ ನಡೆದಿರಲಿಲ್ಲ. ಇದೀಗ ಸುದೀರ್ಘ 4 ವರ್ಷಗಳ ನಂತರ ಪರಿಸ್ಥಿತಿ ತಿಳಿಯಾಗುವ ಲಕ್ಷಣ ಕಾಣಿಸುತ್ತಿದೆ. ಭಾರತ ಮತ್ತು ಚೀನಾ ರಾಷ್ಟ್ರಗಳು ಲಡಾಖ್ ಗಡಿಯಲ್ಲಿ ಗಸ್ತು ತಿರುಗಾಟದ ಪುನರಾರಂಭವಾಗುತ್ತಿದೆ.
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಗಸ್ತು ತಿರುಗುವ ವಿಚಾರಕ್ಕೆ ಭಾರತ ಹಾಗೂ ಚೀನಾ ಸಮ್ಮತಿ ಸೂಚಿಸಿವೆ. ಈ ನಿರ್ದಿಷ್ಟ ಒಪ್ಪಂದವು ಡೆಪ್ಸಾಂಗ್ ಹಾಗೂ ಡೆಮ್ಚೋಕ್ ಪ್ರದೇಶಗಳಲ್ಲಿನ ಗಸ್ತು ತಿರುಗಾಟದ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ.

ಭಾರತ ಹಾಗೂ ಚೀನಾದ ನಡುವಿನ ಬೆಳವಣಿಗೆಯನ್ನು ಭಾರತದ ವಿದೇಶಾಂಗ ಇಲಾಖೆಯು ದೃಢಪಡಿಸಿದೆ. ಚೀನಾದೊಂದಿಗಿನ ಮಾತುಕತೆ ಯಶಸ್ವಿಯಾಗಿದೆ. ಈಗ ಗಡಿಯ ಪರಿಸ್ಥಿತಿ ಸಹಜ ಸ್ಥಿತಿಗೆ ತಿರುಗುತಿದ್ದು, ಭಾರತ ಹಾಗೂ ಚೀನಾ ಗಸ್ತು ತಿರುಗುವುದಕ್ಕೆ ಸಮ್ಮತಿಸಿವೆ ಎಂದು ಹೇಳಲಾಗಿದೆ.
ಚೀನಾ ಸಮ್ಮತಿ: ಇನ್ನು ಚೀನಾ ಸಹ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಿರುವ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಲಡಾಕ್ ದೀಪ್‌ಸಾಂಗ್ ಮತ್ತು ದೇಮ್‌ಚೊಕ್ ವ್ಯಾಪ್ತಿಯಲ್ಲಿ ಗಸ್ತು ತಿರುಗಾಟ ಶುರುವಾಗಲಿದೆ. ಗುಸ್ತು ತಿರುಗಾಟದ ಪುನರಾರಂಭದ ಬಗ್ಗೆ ಎರಡೂ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಸುದೀರ್ಘ ನಾಲ್ಕು ವರ್ಷಗಳ ನಂತರ ಮಹತ್ವದ ಬದಲಾವಣೆ ಆಗಿದೆ.
ಬ್ರಿಕ್ಸ್ ಶೃಂಗಸಭೆ: ಇನ್ನು ರಷ್ಯಾದಲ್ಲಿ ನಡೆಯಲಿರುವ ಬಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಇದಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿರುವಾಗಲೇ ಈ ಬೆಳವಣಿಗೆ ನಡೆದಿದೆ. ಇದರಿಂದಾಗಿ ಮುಂದೆ ಭಾರತ ಹಾಗೂ ಚೀನಾದ ನಡುವೆ ಇನ್ನಷ್ಟು ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.












Click it and Unblock the Notifications