ಟ್ರಂಪ್‌ಗೆ ಜೈಲೂಟ ಗ್ಯಾರಂಟಿಯಾದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಥೆ ಏನು?
ನ್ಯೂಯಾರ್ಕ್: ಜಗತ್ತಿನ ಮೂಲೆ ಮೂಲೆಯಲ್ಲೂ ಟ್ರಂಪ್ ವಿಚಾರ ಮತ್ತೊಮ್ಮೆ ಚರ್ಚೆಗೆ ಬರುತ್ತಿದೆ. 4 ವರ್ಷಗಳ ಕಾಲ ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿದ್ದ ಟ್ರಂಪ್ ಒಂದಲ್ಲ ಒಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿದ್ದರು. ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರವೂ ಟ್ರಂಪ್ ಖದರ್ ಕಡಿಮೆ ಆಗಿಲ್ಲ. ಈಗ ಮತ್ತೆ ಅಧಿಕಾರ ಹಿಡಿಯುವ ವಿಚಾರಕ್ಕಲ್ಲ, ಜೈಲಿಗೆ ಹೋಗುವ ವಿಷಯಕ್ಕೆ ಸುದ್ದಿಯಾಗಿದ್ದಾರೆ ಟ್ರಂಪ್.
ಕೊರೊನಾ ಬಂದಾಗ ಮಾಸ್ಕ್ ಹಾಕುವ ವಿಚಾರದಿಂದ ಹಿಡಿದು ಸಣ್ಣ ಸಣ್ಣ ಸಂಗತಿಗೂ ಎದುರಾಳಿಗಳ ಜೊತೆ ಕದನಕ್ಕೆ ಇಳಿದಿದ್ದ ಟ್ರಂಪ್ ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲೂ ದೊಡ್ಡಣ್ಣ ಎಂಬ ಖ್ಯಾತಿ ಪಡೆದಿರುವ ಅಮೆರಿಕದ ಘನತೆ ಟ್ರಂಪ್ ಆಡಳಿತದಲ್ಲಿ ನಗೆಪಾಟಲಿಗೆ ಈಡಾಗಿತ್ತು.

ಸೋಲಿನ ಬಿಸಿ: ಇದೆಲ್ಲಾ 2020ರ ಅಧ್ಯಕ್ಷೀಯ ಚುನಾವಣೆ ಮೇಲೆ ನೇರ ಪರಿಣಾಮ ಬೀರಿ ಟ್ರಂಪ್ ಹೀನಾಯವಾಗಿ ಸೋಲು ಕಂಡರು. ಹೀನಾಯವಾಗಿ ಸೋತರೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈಗ ಅವರೇ ಕಂಬಿ ಹಿಂದೆ ಬೀಳುವ ಸ್ಥಿತಿ ಬಂದಿದ್ದು, ಮುಂದೆ ಏನಪ್ಪಾ ಪರಿಸ್ಥಿತಿ ಅಂತಿದ್ದಾರೆ ಬೆಂಬಲಿಗರು.
ಜೈಲಿಗೆ ಹೋದರೆ ಗತಿ ಏನು?: ಟ್ರಂಪ್ ರೀತಿ ಅಮೆರಿಕದ ಇತಿಹಾಸದಲ್ಲಿ ಯಾವುದೇ ಮಾಜಿ ಅಧ್ಯಕ್ಷ ಕ್ರಿಮಿನಲ್ ಪ್ರಕರಣ ಎದುರಿಸಿಲ್ಲ. ಅದರಲ್ಲೂ ಜೈಲು ಪಾಲಾಗುವ ಸ್ಥಿತಿ ಬಂದೇ ಇಲ್ಲ ಎನ್ನಬಹುದು. ಆದರೆ ಈಗ ಹೊಸ ದಾಖಲೆ ಸೃಷ್ಟಿಯಾಗುತ್ತಿದೆ. ಈ ಹೊತ್ತಲ್ಲೇ ಟ್ರಂಪ್ ಬೆಂಬಲಿಗರು ಬೀದಿಗೆ ಇಳಿದು ರಂಪ ಮಾಡಲು ಸಜ್ಜಾಗುತ್ತಿದ್ದಾರೆ. ಹೀಗಾಗಿ ಪ್ರಶ್ನೆಯೊಂದು ಉದ್ಭವಿಸಿದ್ದು, ಟ್ರಂಪ್ ಜೈಲಿಗೆ ಹೋದರೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಾ? ಎಂಬ ಚರ್ಚೆ ಶುರುವಾಗಿದೆ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿ ತಿಳಿಯೋಣ.
ಕಂಬಿ ಹಿಂದೆ ಪ್ರಚಾರ?: ಅಮೆರಿಕದ ಕಾನೂನು ಹೇಳುವಂತೆ ಟ್ರಂಪ್ ಜೈಲಿಗೆ ಹೋದರೂ 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬಹುದು. ಟ್ರಂಪ್ ಜೈಲಿನಲ್ಲೇ ಇದ್ದುಕೊಂಡು ತಮ್ಮ ಪರ ಪ್ರಚಾರ ಮಾಡಲು ಅವಕಾಶವಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿ, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಕ್ಯಾಂಪೇನ್ ಮಾಡಬಹುದಾಗಿದೆ. ಈ ಕಾರಣಕ್ಕೆ ಟ್ರಂಪ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದರೂ ಟೆನ್ಷನ್ ಇದ್ದೇ ಇದೆ.
ಜೈಲಿನಿಂದಲೇ ಆಡಳಿತ!: ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮಾತ್ರವಲ್ಲ, ಅಕಸ್ಮಾತ್ ಚುನಾವಣೆಯಲ್ಲಿ ಗೆದ್ದರೆ ಜೈಲಿನಿಂದಲೇ ಆಡಳಿತ ನಡೆಸುವುದಕ್ಕೂ ಅವಕಾಶವಿದೆ. ಹೀಗಾಗಿ ತಮ್ಮ ನೆಚ್ಚಿನ ನಾಯಕನನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಂಡು ಬರಬೇಕು ಅಂತಲೇ ಟ್ರಂಪ್ ಬೆಂಬಲಿಗರು ಪಣತೊಟ್ಟಿದ್ದಾರೆ. ಇದು ಅಮೆರಿಕದಲ್ಲಿ ಹಿಂಸಾಚಾರ ಭುಗಿಲೇಳಲು ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಟ್ರಂಪ್ ಎದುರಾಳಿಗಳದ್ದು. ಪರಿಸ್ಥಿತಿ ಹೇಗಿದೆ ಎಂದರೆ, ಸಣ್ಣದೊಂದು ಕಿಡಿ ಬಿದ್ದರೂ ಭಾಗಶಃ ಅಮೆರಿಕ ಧಗಧಗ ಹೊತ್ತಿ ಉರಿಯೋದು ಪಕ್ಕಾ.
ಬೈಡನ್ ಬಗ್ಗೆ ಸಿಟ್ಟು: ಟ್ರಂಪ್ ವಿರುದ್ಧ ಮೂಡಿದ್ದ ಆಡಳಿತ ವಿರೋಧಿ ಅಲೆ ಹಾಗೂ ಆಕ್ರೋಶ 2020ರ ಚುನಾವಣೆಯಲ್ಲಿ ಬೈಡನ್ ಗೆಲುವಿಗೆ ಕಾರಣವಾಗಿತ್ತು. ಅದರಲ್ಲೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬೈಡನ್ ಪರವಾಗಿ ಹಗಲು-ರಾತ್ರಿ ಲೆಕ್ಕಿಸದೆ ಚುನಾವಣಾ ಪ್ರಚಾರ ನಡೆಸಿ ಡೆಮಾಕ್ರಟಿಕ್ ಪಕ್ಷಕ್ಕೆ ಮತ್ತೆ ಅಧಿಕಾರ ದೊರಕಿಸಿಕೊಡಲು ಶ್ರಮಿಸಿದ್ದರು. ಆದರೆ 2024ರ ಅಧ್ಯಕ್ಷೀಯ ಚುನಾವಣೆ 2020ರ ರೀತಿ ಇರಲು ಸಾಧ್ಯವೇ ಇಲ್ಲ. ಬೈಡನ್ ಮಾಡಿಕೊಂಡ ಎಡವಟ್ಟು ಹಾಗೂ ಅಮೆರಿಕದ ಆರ್ಥಿಕ ಬಿಕ್ಕಟ್ಟು ಮತ್ತೆ ಆಡಳಿತ ವಿರೋಧಿ ಅಲೆ ಸೃಷ್ಟಿಸಿದೆ. 2020ರ ಚುನಾವಣೆಯಲ್ಲಿ ಟ್ರಂಪ್‌ಗೆ ಎದುರಾದ ಪರಿಸ್ಥಿತಿ ಬೈಡನ್‌ಗೂ ಎದುರಾಗುವ ಸಾಧ್ಯತೆ ಇದೆ.
ಒಟ್ಟಾರೆ ಹೇಳುವುದಾದರೆ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಪದವಿ ಪಡೆಯಬಹುದಾದ ಸಂದರ್ಭ ಒದಗಿ ಬಂದಿದೆ. ಆದರೆ ಈ ಹೊತ್ತಲ್ಲಿ ಟ್ರಂಪ್ ಕಂಬಿ ಎಣಿಸೋ ಸಾಧ್ಯತೆ ದಟ್ಟವಾಗುತ್ತಿರುವುದು ದೊಡ್ಡ ಹಿನ್ನಡೆ ಉಂಟುಮಾಡಿದ್ದರೂ, ಚುನಾವಣೆ ಮೇಲೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಟ್ರಂಪ್‌ಗೆ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣದಲ್ಲಿ ಶಿಕ್ಷೆಯಾದರೆ 4 ವರ್ಷ ಕಂಬಿ ಎಣಿಸಬೇಕಾಗುತ್ತದೆ ಹಾಗೂ ಭಾರಿ ಪ್ರಮಾಣದ ದಂಡ ಕೂಡ ಕಟ್ಟಬೇಕು. ಅಕಸ್ಮಾತ್ ಟ್ರಂಪ್ ಜೈಲು ಸೇರಿ ಅಲ್ಲಿಂದಲೇ ಪ್ರಚಾರ ನಡೆಸಿ ಮತ್ತೊಮ್ಮೆ ಗೆದ್ದರೆ, ಜೈಲಿನಿಂದಲೇ ಆಡಳಿತ ನಡೆಸಿದ ದಾಖಲೆಯನ್ನೂ ಸೃಷ್ಟಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.












Click it and Unblock the Notifications