ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಮಗ
ಹಾಂಗ್ ಕಾಂಗ್, ಅ. 30: ಯಥಾ ಪಿತಾ ತಥಾ ಸುತಃ ಸ್ಟೀವ್ ಇರ್ವಿನ್ ಗೊತ್ತಲ್ಲಾ. ಅದೇ ಬೃಹದಾಕಾರದ ಮೊಸಳೆಗಳನ್ನು ಪಳಗಿಸುತ್ತಾ, ಸಾಕು ಪ್ರಾಣಿಗಳನ್ನಾಗಿ ಮಾಡಿಕೊಳ್ಳುತ್ತಿದ್ದ ಭಂಡ ಧೈರ್ಯಶಾಲಿ. 'Crocodile Hunter' ಖ್ಯಾತಿಯ ಸ್ಟೀವ್ ಇರ್ವಿನ್.
'ದಿ ಕ್ರೊಕಾಡೈಲ್ ಹಂಟರ್' ಟಿವಿ ಷೋ ಮೂಲಕ ವಿಶ್ವವಿಖ್ಯಾತಿ ಗಳಿಸಿದ್ದ ಸ್ಟೀವ್ ಇರ್ವಿನ್ ಅವರನ್ನು ಕೊನೆಗೆ ಮೀನೊಂದು ಆಹುತಿ ತೆಗೆದುಕೊಂಡಿದ್ದೂ ಇನ್ನೂ ನೆನಪಿನಲ್ಲಿದೆ. ಈ ಮಧ್ಯೆ, ಅಪ್ಪನ ಸಾವಿನಿಂದ ಧೃತಿಗೆಡದೆ ಆತನ ಪುತ್ರ 9 ವರ್ಷದ ರಾಬರ್ಟ್ ಇರ್ವಿನ್ ಸಹ ಅಪ್ಪನ ಹಾದಿಯಲ್ಲೇ ಸಾಗಿದ್ದಾನೆ. ಅಪ್ಪ ಸತ್ತಾಗ ನಾನು 3 ವರ್ಷದ ಮಗು. ಆದರೆ ಅಪ್ಪ ನನ್ನ ನೆನಪಲ್ಲಿ ಶಾಶ್ವತವಾಗಿ ದಾಖಲಾಗಿದ್ದಾರೆ ಎನ್ನುತ್ತಾನೆ ಪುಟ್ಟಪೋರ ರಾಬರ್ಟ್.

ಸ್ಟೀವ್ ಇರ್ವಿನ್ ಅವರ ಮಗ ರಾಬರ್ಟ್ ಇರ್ವಿನ್, ತಂದೆಯಿಂದ ಪ್ರೇರಣೆ ಪಡೆದು ಮಕ್ಕಳಿಗಾಗಿ ಅಂತಹುದೇ ಕಾರ್ಯಕ್ರಮ ನಡೆಸಿ ಕೊಡಲಿದ್ದಾನೆ. Discovery Kids Asia ಚಾನಲ್ ನಲ್ಲಿ ಪ್ರಸಾರವಾಗುವ 'Wild But True' ಕಾರ್ಯಕ್ರಮವನ್ನು ರಾಬರ್ಟ್ ಆಯೋಜಿಸಲಿದ್ದಾನೆ.
ಪ್ರಕೃತಿಯಿಂದ ವಿಜ್ಞಾನ ಹೇಗೆ ಪ್ರಭಾವಿತವಾಯಿತು ಎನ್ನುವುದನ್ನು ಕಾರ್ಯಕ್ರಮ ಮಕ್ಕಳಿಗೆ ತಿಳಿಸಿಕೊಡಲಿದೆ. ಮುಂದಿನ ವರ್ಷಾಂತ್ಯಕ್ಕೆ ಏಷ್ಯಾದಲ್ಲಿ ಈ ಟಿವಿ ಷೋ ಬಿತ್ತರವಾಗಲಿದೆ.
ಈ ನಿಟ್ಟಿನಲ್ಲಿ, ಸ್ಟೀವ್ ಇರ್ವಿನ್ ಅವರ ಪತ್ನಿ ಟೆರ್ರಿ ಇರ್ವಿನ್ ಅವರದ್ದು ಬಹುದೊಡ್ಡ ಪಾತ್ರವಿದೆ. ಪತಿ ಸ್ಟೀವ್ ಸಾವಿನಿಂದ ಧೃತಿಗೆಡದ ಟೆರ್ರಿ ತಮ್ಮ ಇಬ್ಬರು ಮಕ್ಕಳಾದ ಬಿಂದಿ ಇರ್ವಿನ್ ಮತ್ತು ರಾಬರ್ಟ್ ಇರ್ವಿನ್ ಅವರಿಬ್ಬರನ್ನೂ ನೀರಿಗಿಳಿಸಿದ್ದು, ಮತ್ತೆ ವಿಷ ಜಂತುಗಳ ಜತೆ ಸಾಹಸ ಮೆರೆಯಲು ಪ್ರೇರಕ ಶಕ್ತಿಯಾಗಿದ್ದಾರೆ. ದೊಡ್ಡ ಮಗಳಾದ ಬಿಂದಿ ಸಹ ಅಪ್ಪನ ಮಾದರಿ ಟಿವಿ ಷೋಗಳನ್ನು ನಡೆಸಿಕೊಡುತ್ತಿದ್ದಾರೆ.
ಸ್ಟೀವ್ ಇರ್ವಿನ್ 2006ರಲ್ಲಿ ಸಾಕ್ಷ್ಯ ಚಿತ್ರ ನಿರ್ಮಾಣದ ವೇಳೆ ಪೊರಪಾಟು ಬಿದ್ದು sting ray ಮೀನಿನ ಕಡಿತಕ್ಕೆ ಒಳಗಾಗಿ, ಸಾವನ್ನಪ್ಪಿದರು.












Click it and Unblock the Notifications