Video: ಅಮೆರಿಕದಲ್ಲಿ ಕೋಟಿ ಕೋಟಿ ಬೆಲೆಯ ಬಂಗಲೆಗಳಿದ್ದರೂ ನಿರ್ಜನ ರಸ್ತೆಗಳು: ಸತ್ಯ ಬಿಚ್ಚಿಟ್ಟ NRI!
ನಮ್ಮಲ್ಲಿ ಸಂಜೆಯಾಗುತ್ತಿದ್ದ ಹಾಗೆಯೇ ಮನೆ ಮುಂದೆ ಮಕ್ಕಳು ಆಟವಾಡುವುದಕ್ಕೆ ಶುರು ಮಾಡುತ್ತಾರೆ. ಮಕ್ಕಳು ಒಂದು ಕಡೆ ಆಟವಾಡುತ್ತಿದ್ದರೆ ಮತ್ತೊಂದು ಕಡೆ ಹಿರಿಯರು ತಮ್ಮ ತಮ್ಮ ಸ್ನೇಹಿತರ ಜೊತೆ ಕೂತು ಹರಟುತ್ತಾ ಕೂತಿರುತ್ತಾರೆ. ಎಲ್ಲಾ ಕೆಲಸಗಳಿಂದ ಬಿಡುವುದು ಪಡೆದುಕೊಂಡು ಅಕ್ಕ ಪಕ್ಕದ ಮನೆಯವರು, ಸ್ನೇಹಿತರು ಎಂದು ಸ್ವಲ್ಪ ಹೊತ್ತು ಕಾಲ ಕಳೆಯಲು ಸಾಧ್ಯವಾಗುವುದು ಸಂಜೆಯ ವೇಳೆಯೇ.
ಇದು ದೊಡ್ಡ ನಗರಗಳೇ ಆಗಿರಲಿ, ಹಳ್ಳಿಗಳೇ ಆಗಿರಲಿ ಈ ವಿಚಾರದಲ್ಲಿ ಭಾರತದ ಯಾವ ಮೂಲೆಗೆ ಹೋದರೂ ಪರಿಸ್ಥಿತಿ ಒಂದೇ ರೀತಿ ಇರುತ್ತದೆ.

6 ಗಂಟೆ ಸುಮಾರಿಗೆ ರಸ್ತೆಯೆಲ್ಲಾ ಖಾಲಿ ಖಾಲಿ
ಆದರೆ ಅಮೆರಿಕದ ವಸತಿ ಪ್ರದೇಶದ ದೃಶ್ಯ ಇದಕ್ಕೆ ಸಂಪೂರ್ಣ ಭಿನ್ನವಾಗಿದೆ. ಅಮೆರಿಕದಲ್ಲಿ ವಾಸಿಸುವ ಭಾರತೀಯನೊಬ್ಬ ಸಂಜೆ 6 ಗಂಟೆ ಸುಮಾರಿಗೆ ಅಲ್ಲಿಯ ಮನೆಯ ಮುಂದಿನ ಬೀದಿಗಳು ಹೇಗಿರುತ್ತವೆ ಎನ್ನುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾವು ದೊಡ್ಡ ದೊಡ್ಡ ಮನೆಗಳನ್ನು ಕಾಣಬಹುದು. ಮನೆಯ ಮುಂದೆ ದೊಡ್ಡ ಬೀದಿಗಳೂ ಇವೆ. ಆದರೆ ಜನ ಮಾತ್ರ ಕಣ್ಣಿಗೆ ಬೀಳುವುದಿಲ್ಲ.
ಕೋಟಿ ಬಾಳುವ ಮನೆಗಳು
ಕಳೆದ ಐದು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ನಿತಿನ್ ಮಲ್ಹೋತ್ರಾ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಮನೆಯ ಪಕ್ಕದ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಾ ಅಲ್ಲಿನ ಐಷಾರಾಮಿ ಮನೆಗಳನ್ನು ತೋರಿಸುತ್ತಾರೆ. ಈ ಪ್ರದೇಶದ ಅನೇಕ ಮನೆಗಳು ಸುಮಾರು 1 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ. ಭಾರತೀಯ ಕರೆನ್ಸಿಯಲ್ಲಿ, ಹೇಳುವುದಾದರೆ ಹಲವಾರು ಕೋಟಿಗಳನ್ನು ದಾಟುತ್ತದೆ.
ಸಂಜೆಯ ಸಮಯವೂ ಅತ್ಯಂತ ಶಾಂತ
ಈ ವಿಡಿಯೋದಲ್ಲಿ ಮನೆಯ ಮುಂದಿನ ಅಗಲವಾದ ರಸ್ತೆಗಳು, ದೊಡ್ಡ ಮನೆಗಳು ಮತ್ತು ಡ್ರೈವ್‌ವೇಗಳು ಕಾಣುತ್ತವೆ. ಇಡೀ ಪ್ರದೇಶವು ತುಂಬಾ ಸಂಘಟಿತ ಮತ್ತು ಶಾಂತಿಯುತವಾಗಿ ಕಾಣುತ್ತದೆ. ಆದರೂ, ನಿತಿನ್ ಅವರ ಗಮನವನ್ನು ಸೆಳೆದದ್ದು ಬೀದಿಗಳಲ್ಲಿ ಅದು ಕೂಡಾ ಸಂಜೆಯ ಹೊತ್ತು ಒಬ್ಬರೇ ಒಬ್ಬರು ಜನರು ಇಲ್ಲದೇ ಇರುವುದು. ಅದೇ ಭಾರತದಲ್ಲಿ, ಈ ಸಮಯದಲ್ಲಿ, ಮನೆ ಮುಂದೆ ಮಕ್ಕಳ ಆಟ, ಓಡಾಟದಿಂದ ಮಾತು, ಕೇಕೆ ಸದ್ದುಗಳು ಜೋರಾಗಿರುತ್ತವೆ. ಇದರ ನಡುವೆ ಹಿರಿಯರ ಮಾತು, ಚರ್ಚೆ ಕೂಡಾ ಭರ್ಜರಿಯಾಗಿಯೇ ಇರುತ್ತದೆ. ನಿತಿನ್ ಪ್ರಕಾರ, ಈ ಪ್ರದೇಶದಲ್ಲಿ ಕೆಲವು ಮನೆಗಳು ಸುಮಾರು 5 ಕೋಟಿ, 10 ಕೋಟಿ 15 ಕೋಟಿ ರೂಪಾಯಿಗಳ ಬೆಲೆಬಾಳಬಹುದು. ಇಷ್ಟೆಲ್ಲಾ ಇದ್ದರೂ, ಸಂಜೆಯ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶಗಳು ಅತ್ಯಂತ ಶಾಂತವಾಗಿರುತ್ತವೆ.
ಅನುಭವ ಹಂಚಿಕೊಂಡ ನಿತಿನ್
ನಿತಿನ್ ತಮ್ಮ ಅಮೆರಿಕಾದ ಅನುಭವವನ್ನು ಭಾರತದ ದೈನಂದಿನ ಜೀವನದೊಂದಿಗೆ ಹೋಲಿಸಿದ್ದಾರೆ. ಭಾರತದಲ್ಲಿ, ಜನರು ಹೆಚ್ಚಾಗಿ ಸಂಜೆ ತಮ್ಮ ಮನೆಗಳಿಂದ ಹೊರಬರುತ್ತಾರೆ. ಮಕ್ಕಳು ಆಟವಾಡುತ್ತಾರೆ, ಜನರು ಅಕ್ಕಪಕ್ಕದ ಮನೆಯವರನ್ನು ಭೇಟಿಯಾಗುತ್ತಾರೆ ಮತ್ತು ಹತ್ತಿರದ ಅಂಗಡಿಗಳು ಕಿಕ್ಕಿರಿದು ತುಂಬಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ಉಪನಗರಗಳಲ್ಲಿ, ಜನರು ತಮ್ಮ ಹೆಚ್ಚಿನ ಸಮಯವನ್ನು ಮನೆಯೊಳಗೆ ಅಥವಾ ತಮ್ಮ ಸ್ವಂತ ಖಾಸಗಿ ಜೀವನದಲ್ಲಿ ಕಳೆಯಬಹುದು. ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್‌ನ ಕೆಲವು ಪ್ರದೇಶಗಳಲ್ಲಿ ಇದೇ ರೀತಿಯ ವಾತಾವರಣ ಇದೆ ಎನ್ನುತ್ತಾರೆ ನಿತಿನ್. ಆದರೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶ ಅಥವಾ ಇತರ ವಲಸಿಗ ಸಮುದಾಯಗಳು ಇರುವ ಪ್ರದೇಶಗಳಲ್ಲಿ ವಾತಾವರಣವು ಬೇರೆಯಾಗಿರಬಹುದು ಎನ್ನುವುದನ್ನು ಕೂಡಾ ನಿತಿನ್ ಒಪ್ಪಿಕೊಳ್ಳುತ್ತಾರೆ.
ಅಮೆರಿಕದ ಉಪನಗರಗಳು ಏಕೆ ಶಾಂತವಾಗಿವೆ?
ವೀಡಿಯೊದಲ್ಲಿ ತೋರಿಸಿರುವ ಪ್ರದೇಶವು ಇಡೀ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವುದಿಲ್ಲ. ಇದು ಪ್ರಾಥಮಿಕವಾಗಿ ಅಮೆರಿಕದ ಉಪನಗರ ಪ್ರದೇಶಗಳ ಜೀವನಶೈಲಿಯ ಒಂದು ನೋಟವಾಗಿದೆ. ಅಂತಹ ಅನೇಕ ಪ್ರದೇಶಗಳಲ್ಲಿ, ಮನೆಗಳು ಬಹಳ ದೂರದಲ್ಲಿರತ್ತವೆ. ದೈನಂದಿನ ಅಗತ್ಯ ವಸ್ತುಗಳಿಗಾಗಿಯೂ ದೂರ ಹೋಗಬೇಕಾಗುತ್ತದೆ. ಹಾಗಾಗಿ ಜನರು ಕೆಲಸ, ಶಾಪಿಂಗ್ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಲು ಕಾರುಗಳನ್ನು ಬಳಸುತ್ತಾರೆ. ಪರಿಣಾಮವಾಗಿ, ಬೀದಿಗಳಲ್ಲಿ ನಡೆಯುವ ಅಥವಾ ಕುಳಿತು ಮಾತನಾಡುವ ಜನರು ಕಡಿಮೆಯಾಗಬಹುದು.
ಆದರೆ ನಿತಿನ್ ಅವರ ವೀಡಿಯೊಗೆ ವಿಭಿನ್ನ ಪ್ರತಿಕ್ರಿಯೆಗಳು ಹರಿದು ಬಂದಿವೆ. ಕೆಲವು ಬಳಕೆದಾರರು ಖಾಲಿ ಮತ್ತು ನಿಶ್ಯಬ್ದ ಬೀದಿಗಳು ನಂಬಲಾಗದಷ್ಟು ಶಾಂತವಾಗಿವೆ ಎಂದಿದ್ದಾರೆ. ಇನ್ನು ಕೆಲವರು ಮೌನದಲ್ಲಿ ಒಂಟಿತನದ ಭಾವವನ್ನು ಗುರತಿಸಿದ್ದಾರೆ.


Click it and Unblock the Notifications
