24 ಗಂಟೆ, 250 ಜನರ ಸಾವು, 500 ಜನ ಆಸ್ಪತ್ರೆ ಪಾಲು?
ಯುದ್ಧಕ್ಕೆ ಮೊದಲ ಬಲಿ ಬಡವ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಇಸ್ರೇಲ್ VS ಪ್ಯಾಲೆಸ್ತೀನ್ ಯದ್ಧ ತಾಜಾ ತಾಜಾ ಉದಾಹರಣೆ. ಯಾಕಂದ್ರೆ ಸುಮಾರು 80 ದಿನಗಳ ಹಿಂದೆ ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ವಾರ್ ಇನ್ನೂ ನಿಲ್ಲುತ್ತಿಲ್ಲ. ಈಗಾಗಲೇ 3ನೇ ತಿಂಗಳಿಗೆ ಕಾಲಿಟ್ಟಿರುವ ಈ ಯುದ್ಧ ಸಾಕಷ್ಟು ಭೀಕರವಾಗಿದೆ. ತಿನ್ನೋದಕ್ಕೆ ಹಿಡಿ ಅನ್ನ ಇಲ್ಲದೆ ಪ್ಯಾಲೆಸ್ತೀನ್ ಜನ ಸಾಯುವಾಗ ಇಸ್ರೇಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಅದ್ಯಾವ ಘಳಿಗೆಯಲ್ಲಿ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ದಾಳಿ ಮಾಡಿದ್ದರೋ ಗೊತ್ತಿಲ್ಲ. ಆ ದಿನದಿಂದ ಇಲ್ಲಿಯವರೆಗೂ ಸುಮಾರು 80 ದಿನದಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನರ ಪ್ರಾಣಪಕ್ಷಿ ಹಾರಿಹೋಗಿರುವ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಇಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಜನರನ್ನು ಉದ್ದೇಶಿಸಿ ಭಾಷಣ ಮಾಡಿ, ಹಮಾಸ್ ಉಗ್ರರ ವಿರುದ್ಧದ ಯುದ್ಧದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಯುದ್ಧ ನಿಲ್ಲಿಸುತ್ತಾ ಇಸ್ರೇಲ್? ಪ್ಯಾಲೆಸ್ತೀನ್ ಮೇಲಿನ ದಾಳಿಗೆ ಅಂತ್ಯ ಹಾಡುತ್ತಾರಾ? ಇಸ್ರೇಲ್ ಪ್ರಧಾನಿ ಮಾತನಾಡಿರುವ ಹೇಳಿಕೆಯ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಯುದ್ಧ ಭವಿಷ್ಯ ಏನ್ ಆಗುತ್ತೆ?
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಮೊದಲಿಗೆ ಸುಮಾರು 5000ಕ್ಕೂ ರಾಕೆಟ್‌ಗಳ ಮೂಲಕ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ಕೂಡ ಪ್ರತಿ ದಾಳಿ ಆರಂಭ ಮಾಡಿತ್ತು. ಹೀಗೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ಸುಮಾರು ಕಳೆದ 80 ದಿನದಿಂದ ತಿಕ್ಕಾಟ ನಡೆಯುತ್ತಿದೆ. ಹೀಗಿದ್ದಾಗ ಇಬ್ಬರ ನಡುವೆ ಯುದ್ಧ ನಿಲ್ಲಿಸೋದಕ್ಕೆ ವಿಶ್ವಸಂಸ್ಥೆ ಸೇರಿದಂತೆ ಇಡೀ ಜಗತ್ತೇ ಪ್ರಯತ್ನ ನಡೆಸಿದೆ. ಆದರೆ ಅದ್ಯಾವುದೂ ವರ್ಕೌಟ್ ಆಗಿಲ್ಲ. ಹೀಗಿದ್ದಾಗ ಇಸ್ರೇಲ್ ಪ್ರಧಾನಿ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿ, ಯುದ್ಧ ನಿಲ್ಲೋದಿಲ್ಲ ಎಂದಿದ್ದಾರೆ. ಹಾಗೇ ಇನ್ನೊಂದು ಕಡೆ ಕಳೆದ 24 ಗಂಟೆ ಸಮಯದಲ್ಲಿ 250 ಪ್ಯಾಲೆಸ್ತೀನ್ ಪ್ರಜೆಗಳನ್ನ ಹತ್ಯೆ ಮಾಡಿರುವ ಆರೋಪ, ಇಸ್ರೇಲ್ ಸೇನೆ ವಿರುದ್ಧ ಕೇಳಿಬಂದಿದೆ.
20,000 ತಲುಪಿದ ಸಾವಿನ ಸಂಖ್ಯೆ?
ಇಷ್ಟೆಲ್ಲದರ ನಡುವೆ ಗಾಜಾಪಟ್ಟಿ ಸೇರಿದಂತೆ, ಪ್ಯಾಲೆಸ್ತೀನ್ ನೆಲದಲ್ಲಿ ಈವರೆಗೂ 20,000 ನಾಗರಿಕರು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಅದ್ರಲ್ಲೂ ಈ ಪೈಕಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಇನ್ನೊಂದು ಕಡೆ ಕೇವಲ 24 ಗಂಟೆ ಸಮಯದಲ್ಲಿ 250 ಪ್ಯಾಲೆಸ್ತೀನ್ ಪ್ರಜೆಗಳನ್ನ ಇಸ್ರೇಲ್ ಸೇನೆ ಹತ್ಯೆ ಮಾಡಿದ ಆರೋಪ ಕೇಳಿಬಂದಿದ್ದು, ಇದರ ಜೊತೆಗೆ ಸುಮಾರು 500 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಿದೆ ಹಮಾಸ್ ಆಡಳಿತ.

ಅಮೆರಿಕ ವಿರುದ್ಧ ಗಂಭೀರ ಆರೋಪ
ಒಟ್ನಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಶುರುವಾಗಿರುವ ಯುದ್ಧ ಯಾವುದೇ ಕಾರಣಕ್ಕೂ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಕಷ್ಟು ಪ್ರಯತ್ನ ಮಾಡುತ್ತಾ ಈ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಎಫರ್ಟ್ ಹಾಕಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯುದ್ಧ ನಿಲ್ಲಿಸಲು ಮುಂದಾದ ಸಮಯದಲ್ಲಿ, ಅಮೆರಿಕ ತನ್ನ 'ವೀಟೋ' ಪವರ್ ಬಳಸಿ ಅಡ್ಡಿ ಮಾಡಿರುವ ಆರೋಪ ಇದೆ. ಇಷ್ಟೆಲ್ಲದರ ನಡುವೆ ಇಸ್ರೇಲ್ ತನ್ನ ದಾಳಿ ಮತ್ತಷ್ಟು, ಭೀಕರಗೊಳಿಸಿದ್ದು ಪ್ಯಾಲೆಸ್ತೀನ್ ಜನರಲ್ಲಿ ಭಯ ಹುಟ್ಟಿಸುತ್ತಿದೆ.
ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧದ ಜೊತೆಗೆ ಇಸ್ರೇಲ್ & ಹಮಾಸ್ ಯುದ್ಧ ಕೂಡ ಭಯ ಹುಟ್ಟಿಸುತ್ತಿದೆ. ಪರಿಸ್ಥಿತಿಯು ಇದೇ ರೀತಿಯಾಗಿ ಮುಂದುವರಿದರೆ ಈ ಯುದ್ಧ ಕೂಡ 3ನೇ ಮಹಾಯುದ್ಧಕ್ಕೆ ಕಾರಣವಾಗಿ, ದೊಡ್ಡ ಅನಾಹುತವನ್ನೇ ಸೃಷ್ಟಿಸುವ ಭಯ ಆವರಿಸಿದೆ.












Click it and Unblock the Notifications