Donald Trump: ‘ಗೋಲ್ಡ್ ಕಾರ್ಡ್’ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಸ್ತಾಪ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಹಠ ಹಿಡಿದರೆ ಅದನ್ನು ಸಾಧಿಸುವ ತನಕವೂ ಸುಮ್ಮನೆ ಕೂರುವುದಿಲ್ಲ. ಹೇಗಾದರೂ ಮಾಡಿ ಟ್ರಂಪ್ ತಾವು ಕೈಗೊಂಡ ನಿರ್ಧಾರ ಜಾರಿಗೆ ತಂದೇ ತರುತ್ತಾರೆ. ಅದೇ ರೀತಿ ಇದೀಗ 'ಗೋಲ್ಡ್ ಕಾರ್ಡ್' ಬಗ್ಗೆ ಹಠ ಹಿಡಿದಿರುವ ಟ್ರಂಪ್, ತಮ್ಮ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಪ್ರಸ್ತಾಪ ಮಾಡಿ ಇದನ್ನು ಸರಿಯಾಗಿ ಜಾರಿಗೆ ತರಲು ಆದೇಶ ಹೊರಡಿಸಿದ್ದಾರೆ.
2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಪ್ರಮುಖವಾಗಿ ಅಕ್ರಮ ವಲಸಿಗರ ವಿರುದ್ಧ ಯುದ್ಧವನ್ನೇ ಸಾರಿರುವ ಇದೇ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಅಲ್ಲದೆ ಅಮೆರಿಕ ನೆಲಕ್ಕೆ ಬರಲು ವಲಸಿಗರಿಗೆ ಹೊಸ ಹೊಸ ನಿಯಮ ಹೇರುತ್ತಿದ್ದಾರೆ. ಇಂತಹ ಸಮಯದಲ್ಲೇ ದುಡ್ಡು ಕೊಳೆಯುತ್ತಿರುವ ಶ್ರೀಮಂತರಿಗೆ ನೆರವಾಗಲು ಇದೀಗ 'ಗೋಲ್ಡ್ ಕಾರ್ಡ್' ಘೋಷಣೆ ಮಾಡಿದ್ದಾರೆ. ಹೀಗೆ ತಮ್ಮ ಹೊಸ ಯೋಜನೆ ಜಾರಿಗೆ ತರಲು ಈಗ ಟ್ರಂಪ್ ಮುಂದಾಗಿದ್ದಾರೆ.

43 ಕೋಟಿ ರೂಪಾಯಿ ಡೀಲ್!
ಹೌದು, ಡೊನಾಲ್ಡ್ ಟ್ರಂಪ್ ಅವರು ಇದೀಗ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕ್ಯಾಬಿನೆಟ್ ಮೀಟಿಂಗ್ ಮಾಡಿದರು. ಈ ವೇಳೆ ತಮ್ಮ 'ಗೋಲ್ಡ್ ಕಾರ್ಡ್' ಬಗ್ಗೆ ಪ್ರಸ್ತಾಪ ಮಾಡಿ, 5 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಯೋಜನೆ ಕುರಿತಾಗಿ ವಿವರಣೆ ನೀಡಿದರು. ಭಾರತವೂ ಸೇರಿ ಜಗತ್ತಿನ ಎಲ್ಲಾ ದೇಶಗಳಿಂದ ಪ್ರಜೆಗಳು, ಅದರಲ್ಲೂ ಪ್ರಮುಖವಾಗಿ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಗೆ ಭಾರಿ ಉಪಯೋಗ ಆಗಲಿದೆ. ಹೀಗಾಗಿ, ಇದನ್ನು ಅಚ್ಚುಕಟ್ಟಾಗಿ ಜಾರಿಗೆ ತನ್ನಿ ಎಂದು ಕ್ಯಾಬಿನೆಟ್ ಸಭೆಯಲ್ಲಿ ಟ್ರಂಪ್ ಸೂಚಿಸಿದರು.
ಏನಿದು ಡೊನಾಲ್ಡ್ ಟ್ರಂಪ್ ಪ್ಲಾನ್?
ಡೊನಾಲ್ಡ್ ಟ್ರಂಪ್ ಇದೀಗ ಪ್ರಸ್ತಾಪ ಮಾಡಿರುವ ಹೊಸ ನಿಯಮದ ಪ್ರಕಾರ, ಜಗತ್ತಿನ ಅತಿ ಶ್ರೀಮಂತರು ಅಮೆರಿಕದ ಪೌರತ್ವ ಪಡೆಯಲು ಸಹಕಾರಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಶ್ರೀಮಂತ ವಲಸಿಗರಿಗೆ ಗೋಲ್ಡ್ ಕಾರ್ಡ್ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಅಮೆರಿಕದ ಪೌರತ್ವ ನೀಡಲು ಮುಂದಾಗಿದ್ದಾರೆ. ಶ್ರೀಮಂತ ವಲಸಿಗರು ಈ ಹೊಸ ಕಾರ್ಡ್‌ನ 5 ಮಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಬೇಕು, ಅಂದ್ರೆ ಇದು ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 43 ಕೋಟಿ ರೂಪಾಯಿ ಆಗಲಿದೆ.
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಈ ರೀತಿ ಹಣ ಸಂಗ್ರಹ ಮಾಡಿ, ಅಮೆರಿಕದ ಸಾಲ ತೀರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಈ ರೀತಿಯ ನಿಯಮಗಳ ವಿರುದ್ಧ ಭಾರಿ ಆಕ್ರೋಶ ಇದೀಗ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಲಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಈಗಾಗಲೇ ಸಾಲದ ಸುಳಿಯಲ್ಲಿ ವಿಲವಿಲ ಒದ್ದಾಡುತ್ತಿರುವ ಅಮೆರಿಕಗೆ ಇನ್ನಷ್ಟು ಸಂಕಷ್ಟ ಎದುರಾದರೂ ಅಚ್ಚರಿ ಇಲ್ಲ.












Click it and Unblock the Notifications