ಡೈನೋಸಾರ್ ಅಷ್ಟೇ ಅಲ್ಲ, 415 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಮೇಲಿತ್ತು ರಾಕ್ಷಸ ಚೇಳು! ಇದೀಗ ಸಿಕ್ಕಿದೆ ಸಾಕ್ಷ್ಯ
ಚೇಳು ಅಂದ ಕೂಡಲೇ ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತದೆ. ಎಂಟು ಕಾಲುಗಳನ್ನು ಹೊಂದಿರುವ ವಿಷಕಾರಿ ಜೀವಿ ಇದು. ಇದು ಕುಟುಕಿದರೆ ವಿಪರೀತ ಉರಿ. ಇದು ಕಚ್ಚುವ ಮೂಲಕ ಮಾನವ ದೇಹಕ್ಕೆ ವಿಷ ಹರಿಯ ಬಿಡುತ್ತದೆ. ಆ ವಿಷವೇ ಉರಿ ಎನ್ನಲಾಗಿದೆ. ಇದನ್ನು ಸಂಸ್ಕೃತದಲ್ಲಿ 'ವೃಶ್ಚಿಕ' ಎಂದೂ ಕರೆಯುತ್ತಾರೆ. ಜಗತ್ತಿನಾದ್ಯಂತ ಸುಮಾರು 2,500 ಕ್ಕೂ ಹೆಚ್ಚು ಚೇಳುಗಳ ಪ್ರಭೇದಗಳಿವೆ. ಅವುಗಳಲ್ಲಿ ಕೆಲವು ತೀವ್ರವಾದ ವಿಷವನ್ನು ಹೊಂದಿರುತ್ತವೆ.
ಭೂಮಿ ಮೇಲಿತ್ತು ರಕ್ಕಸ ಚೇಳು:
ಈ ಚೇಳುಗಳು ಬೇರೆ ಬೇರೆ ಗಾತ್ರವನ್ನು ಹೊಂದಿವೆ. ಸಾಮಾನ್ಯವಾಗಿ, ಚೇಳಿನ ಗಾತ್ರವು ೮.೫ ಮಿ.ಮೀ ನಿಂದ ಹಿಡಿದು ಗರಿಷ್ಠ ೨೩ ಸೆ.ಮೀ ವರೆಗೆ ಇರುತ್ತದೆ.

ಇಲ್ಲಿಯವರೆಗೆ ನಾವು ಭೂಮಿಯ ಮೇಲಿದ್ದ ದೈತ್ಯ ಜೀವಿ ಡೈನೋಸಾರ್ ಎನ್ನುವ ಭಾವನೆಯೇ ಹಲವರದ್ದಾಗಿತ್ತು. ಆದರೆ ಡೈನೋಸಾರ್‌ನಂತಯೇ ದೈತ್ಯ ಚೇಳುಗಳು ಕೂಡಾ ಈ ಭೂಮಿಯ ಮೇಲಿತ್ತು ಎನ್ನುವ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹೌದು, 415 ಮಿಲಿಯನ್ ವರ್ಷಗಳ ಹಿಂದೆಯೇ ದೈತ್ಯ ಚೇಳು ಈ ಭೂಮಿಯಲ್ಲಿತ್ತು. ಅದೊಂದು ಮಾಂಸ ಭಕ್ಷಕ ರಾಕ್ಷಸ ಚೇಳು. ಇದೀಗ ಅದರ ಪಳಿಯುಳಿಕೆಗಳು ಈಗ ಸಿಕ್ಕಿವೆ. ಅದು 415 ಮಿಲಿಯನ್ ವರ್ಷ ಹಳೆಯ ಪಳೆಯುಳಿಕೆಗಳು ಎಂದು ನಂಬಲಾಗಿದೆ. ಇದು ಇದುವರೆಗೆ ಸಿಕ್ಕಿದ ಅತಿದೊಡ್ಡ ಚೇಳಿನ ಪಳೆಯುಳಿಕೆಯಾಗಿದೆ.
ಬ್ರಿಟನ್‌ನಲ್ಲಿ ಸಿಕ್ಕಿರುವ ಪಳೆಯುಳಿಕೆ:
ಬ್ರಿಟನ್‌ನಲ್ಲಿ ಈ ಚೇಳಿನ ಅವಶೇಷಗಳು ಸಿಕ್ಕಿವೆ. ಈ ದೈತ್ಯ ಚೇಳಿನ ಉದ್ದ ಒಂದು ಮೀಟರ್. ಅದರ ಮುಂದಿನ ಎರಡು ಕೊಂಬುಗಳು 16 ಸೆಂಟಿಮೀಟರ್‌ನಷ್ಟು ಉದ್ದ ಇತ್ತು ಎನ್ನಲಾಗಿದೆ. ಭೂಮಿಯ ಮೇಲೆ ಮಾನವ ಜೀವಿ ಅಸ್ತಿತ್ವಕ್ಕೆ ಬರುವ ಮೊದಲೇ ಈ ದೈತ್ಯ ಚೇಳು ಜೀವಿಸುತಿತ್ತು. ಜೀವನಕ್ಕಾಗಿ ಅದು ಮಾಂಸ ಬೇಟೆ ಮಾಡುತ್ತಾ ಇತ್ತು. ಭೂಮಿಯ ಮೇಲೆ ಜೀವ ಪರಿಸರಗಳು ಅಭಿವೃದ್ದಿಗೊಳ್ಳುವ ಮೊದಲೇ ಈ ದೈತ್ಯ ಸರೀಸೃಪ ಜೀವಂತದಲ್ಲಿತ್ತು ಎನ್ನುತ್ತಾರೆ ವಿಜ್ನಾನಿಗಳು.
ಬ್ರಿಟನ್‌ನ ಆಂಗ್ಲೋ ವೇಲ್ಸ್ ಜಲಾನಯನ ಪ್ರದೇಶದಲ್ಲಿ ಈ ಚೇಳಿನ ಪಳೆಯುಳಿಕೆ ಸಿಕ್ಕಿದೆ. ಭೂಮಿಯ ಮೇಲೆ ಮಹಾಅರಣ್ಯಗಳು, ದೈತ್ಯ ಮರಗಳು ಸೃಷ್ಟಿಯಾಗುವ ಮೊದಲೇ ಈ ರಾಕ್ಷಸ ಚೇಳುಗಳು ಅಸ್ತಿತ್ವದಲ್ಲಿದ್ದವು ಎಂದು ನಂಬಲಾಗಿದೆ. ಅಂದರೆ, ಸಣ್ಣ ಸಣ್ಣ ಕುರುಚಲು ಸಸ್ಯಗಳು ಬೆಳೆಯುತ್ತಿದ್ದ ಹೊತ್ತಿನಲ್ಲೇ ದೈತ್ಯ ಚೇಳುಗಳು ಜೀವಪರಿಸರದಲ್ಲಿ ತಲೆ ಎತ್ತಿದ್ದವು ಎಂದು ವಿಜ್ನಾನಿಗಳ ಹೇಳುತ್ತಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ದೈತ್ಯ ಜೀವಿಗಳು ಭೂಮಿ ಮೇಲೆ ಇದ್ದವು ಎಂದು ಹೇಳಲಾಗಿದೆ.
ಸಿಕ್ಕಿದ ಪಳೆಯುಳಿಕೆ ಬಗ್ಗೆ ವಿಜ್ನಾನಿಗಳಲ್ಲೇ ಗೊಂದಲಗಳಿದ್ದವು. ಇವು ಚೇಳಿನ ಪಳೆಯುಳಿಕೆ ಹೌದಾ ಅಲ್ಲವಾ ಎಂಬ ಜಿಜ್ನಾಸೆ ಎದ್ದಿತ್ತು. ಚೇಳಿನ ಮುಂಭಾಗದ ಪಳೆಯುಳಿಕೆಗಳು ಮೊದಲು ಸಿಕ್ಕಿತ್ತು. ಆದರೆ ಬಾಲ, ಮತ್ತು ಕುಟುಕುವ ಹಿಂಭಾಗದ ಅಂಗ ಪಳೆಯುಳಿಕೆಯಲ್ಲಿ ಸಿಕ್ಕಿರಲಿಲ್ಲ. ಇದೀಗ ಕೊನೆಗೆ ವಿವರವಾಗಿ ಪರಿಶೀಲಿಸಿದಾಗ ಅದು ಚೇಳಿನದ್ದೇ ಒಂದು ಪಳೆಯುಳಿಕೆ ಎಂದು ನಿಷ್ಕರ್ಷೆಗೆ ಬರಲಾಗಿದೆ.
ಚೇಳಿನ ವಿಷವು ಭಯಾನಕವಾಗಿರುತ್ತವೆ.ಆದರೆ ಕುತೂಹಲಕಾರಿ ಸಂಗತಿ ಎಂದರೆ ಈ ವಿಷ ಕೆಲವು ಮಾರಕ ಕಾಯಿಲೆಗೂ ಮದ್ದು. ಚೇಳಿನ ವಿಷವನ್ನು ಕ್ಯಾನ್ಸರ್, ನೋವು ನಿವಾರಕಗಳು, ಪ್ರತಿಜೀವಕಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಎನ್ನಲಾಗಿದೆ. ಚೇಳಿನ ವಿಷದಲ್ಲಿರುವ ಕ್ಲೋರೊಟಾಕ್ಸಿನ್ ಎಂಬ ಪ್ರೋಟೀನ್ ಮನುಷ್ಯನ ಮೆದುಳಿನಲ್ಲಿನ ಗೆಡ್ಡೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಚೇಳಿನ ವಿಷವನ್ನು ಸೌಂದರ್ಯ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕಗಳಲ್ಲಿಯೂ ಬಳಸಲಾಗುತ್ತದೆ.ವಿಜ್ಞಾನಿಗಳ ಪ್ರಕಾರ, ದೊಡ್ಡ ಗಾತ್ರದ ಚೇಳುಗಳು ಕಡಿಮೆ ಪ್ರಬಲವಾದ ವಿಷವನ್ನು ಹೊಂದಿದ್ದರೆ, ಚಿಕ್ಕ ಗಾತ್ರದ ಚೇಳುಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications