Gaza Peace: ಗಾಜಾ ಭವಿಷ್ಯದ ಬಗ್ಗೆ ಇಸ್ರೇಲ್ ಮತ್ತು ಮಿತ್ರರ ಜೊತೆಗೆ ಅಮೆರಿಕ ಮಹತ್ವದ ಚರ್ಚೆ
ಗಾಜಾ ಪಟ್ಟಿಯಲ್ಲಿ ಭೀಕರ ಕದನ ನಡೆದು, ಇಡೀ ಗಾಜಾ ಪಟ್ಟಿಯೇ ಹಾಳಾಗಿ ಹೋಗಿದೆ. ಹಮಾಸ್ ಮಾಡಿದ ಕೃತ್ಯಕ್ಕೆ ಇಸ್ರೇಲ್ ನುಗ್ಗಿ ಬಂದು ಯುದ್ಧ ಮಾಡಿ, ಇಡೀ ಗಾಜಾ ಪಟ್ಟಿಯನ್ನೇ ಧ್ವಂಸ ಮಾಡಿ ಹಾಕಿದೆ ಎಂದು ಪಾಶ್ಚಿಮಾತ್ಯ ದೇಶಗಳು ಹೇಳುತ್ತಿವೆ. ಆದರೆ ಇಸ್ರೇಲ್ ಮಾಡಿದ್ದು ತಪ್ಪು ಎಂದು ಅತ್ತ ಪಾಶ್ಚಿಮಾತ್ಯ ದೇಶಗಳ ಎದುರಾಳಿ ದೇಶಗಳು ಆರೋಪ ಮಾಡುತ್ತಿವೆ. ಅದೆಲ್ಲಾ ಏನೇ ಇರಲಿ, ಆದರೆ ಗಾಜಾ ಮಾತ್ರ ಹತ್ತಾರು ವರ್ಷಗಳ ಕಾಲ ಮತ್ತೆ ಸರಿ ಹೋಗದ ಪರಿಸ್ಥಿತಿಗೆ ಬಂದು ತಲುಪಿದೆ. ಇಂತಹ ಸಮಯದಲ್ಲಿ ಗಾಜಾ ನೆಲದಲ್ಲಿ ಶಾಂತಿ ಸ್ಥಾಪನೆ ಬಗ್ಗೆ ತಲೆ ಕೆಡಸಿಕೊಂಡು ಕೂತಿರುವ ಅಮೆರಿಕ ಅಧ್ಯಕ್ಷರ ನೇತೃತ್ವದ ಗಾಜಾ ಶಾಂತಿ ಮಂಡಳಿ, ಅಲ್ಲಿನ ಭವಿಷ್ಯದ ಬಗ್ಗೆ ಚರ್ಚೆ ಶುರು ಮಾಡಿದೆ.
ಮಧ್ಯಪ್ರಾಚ್ಯ ಭಾಗದಲ್ಲಿ ಗಾಜಾ ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ ಎಂದರೆ, ಅದಕ್ಕೆ ಪ್ರಮುಖ ಕಾರಣ ಇಸ್ರೇಲ್ ಮತ್ತು ಹಮಾಸ್ ನಡುವೆ ಹಲವು ದಶಕಗಳಿಂದ ನಡೆಯುತ್ತಿರುವ ತಿಕ್ಕಾಟ. ಹೀಗೆಲ್ಲಾ ಇದ್ದಾಗ ಹೇಗಾದರೂ ಮಾಡಿ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಇಡೀ ಜಗತ್ತಿನ ಆಸೆಯಾಗಿದೆ. ಹೀಗಿದ್ದರೂ ಪದೇ ಪದೇ ಗಾಜಾ ಪಟ್ಟಿಯಲ್ಲಿ ಹೋರಾಟ ಮತ್ತು ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೆ ಯಾವಾಗ ಹಮಾಸ್ ನೇರವಾಗಿ ಇಸ್ರೇಲ್ ಮೇಲೆ ದಾಳಿ ಮಾಡುವ ದೊಡ್ಡ ತಪ್ಪು ಮಾಡಿತ್ತೋ ಅಲ್ಲಿಂದಲೇ ನಡೆಯಬಾರದ ಘಟನೆಗಳು ನಡೆದು ಹೋದವು. ಇಂತಹ ಸೂಕ್ಷ್ಮ & ಕೈಮೀರುವ ಪರಿಸ್ಥಿತಿಗಳ ನಡುವೆ ಟ್ರಂಪ್ ಅವರು ಮಹತ್ವದ ಯೋಜನೆ ಜಾರಿಗೆ ತರಲು ಸಜ್ಜಾಗಿದ್ದಾರೆ.

ಯುದ್ಧದ ನಂತರ ಮುಂದೆ ಏನು?
ಗಾಜಾ ಪಟ್ಟಿಯಲ್ಲಿ ಯುದ್ಧ ನಿಲ್ಲಿಸಲು ದಿನಗಣನೆ ಆರಂಭ ಆಗಿದ್ದು, ಗಾಜಾ ಶಾಂತಿ ಮಂಡಳಿಯನ್ನ ಸ್ಥಾಪನೆ ಮಾಡುತ್ತಿರುವ ಉದ್ದೇಶವೇ ಯುದ್ಧ ನಿಲ್ಲಿಸುವುದಾಗಿದೆ. ಹೀಗಿದ್ದಾಗ ಯುದ್ಧ ನಿಂತ ನಂತರದಲ್ಲಿ ಗಾಜಾ ಕಥೆ ಏನು? ಎಂಬ ಚರ್ಚೆ ಜೋರಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಹುಡುಕಲು ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಅಧಿಕಾರಿಗಳು ಸಜ್ಜಾಗಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಸ್ನೇಹಿತರು ಹಾಗೂ ಆಪ್ತ ದೇಶಗಳ ಜೊತೆಗೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ.
ಪ್ರಮುಖವಾಗಿ ಇಸ್ರೇಲ್ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ? ಎಂಬುದೇ ಕುತೂಹಲದ ವಿಚಾರವಾಗಿದೆ. ಗಾಜಾದ ಜನರಿಗೆ ಇದೀಗ ಪುನರ್ವಸತಿ ಸೇರಿದಂತೆ, ಭವಿಷ್ಯ ಕಟ್ಟಿಕೊಳ್ಳಲು ಹಲವು ಅಗತ್ಯತೆ ಇದೆ. ಹಮಾಸ್‌ನ ಮೇಲೆ ದಾಳಿ ಮಾಡಿದ ನಂತರ ಇಡೀ ಗಾಜಾ ಪಟ್ಟಿ ಘೋರ ವಿನಾಶಕ್ಕೆ ಸಿಲುಕಿದೆ. ಹೀಗಾಗಿ ಗಾಜಾ ಪಟ್ಟಿಯಲ್ಲಿ ಪುನರ್ವಸತಿಗೆ ಕಾರ್ಯಾಚರಣೆ ಕೈಗೊಳ್ಳಿ ಎಂಬ ಆಗ್ರಹವನ್ನ ಜಗತ್ತಿನಾದ್ಯಂತ ಮಾಡಲಾಗುತ್ತಿದೆ.












Click it and Unblock the Notifications