Israel & Gaza: ಕದನ ವಿರಾಮ ಘೋಷಣೆ ಮಾಡಿದ್ದರೂ 72 ಜನರ ಸಾವು?
ಗಾಜಾ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಂತು ಹೋಗಿದೆ ಬಿಡು ಅಂತಾ ಎಲ್ಲ ನಿಟ್ಟುಸಿರು ಬಿಡುವ ಸಮಯದಲ್ಲೇ, ಮತ್ತೊಂದು ಸ್ಫೋಟಕ ವಿಚಾರ ಇದೀಗ ಸಂಚಲನ ಸೃಷ್ಟಿ ಮಾಡಿದೆ. 2023ರ ಅಕ್ಟೋಬರ್ 7 ರಿಂದ ಸುಮಾರು 15 ತಿಂಗಳ ಕಾಲ ಈ ಬಡಿದಾಟ ನಡೆದು ದೊಡ್ಡ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಿದ್ದಾಗಲೇ ಗಾಜಾ & ಇಸ್ರೇಲ್ ನಡುವಿನ ಯುದ್ಧಕ್ಕೆ ಬ್ರೇಕ್ ಬಿದ್ದು, ಶಾಂತಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲದರ ನಡುವೆ ಕೂಡ ಹಿಂಸೆ ನಿಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇಸ್ರೇಲ್ & ಹಮಾಸ್ ನಡುವೆ ಶುರುವಾಗಿದ್ದ ಜಗಳದಲ್ಲಿ ಗಾಜಾ ಪಟ್ಟಿ ಥೇಟ್ ನರಕದ ರೀತಿ ಆಗಿ ಹೋಗಿತ್ತು. ಗಾಜಾ ಪಟ್ಟಿ ಪರಿಸ್ಥಿತಿ ಅದೆಷ್ಟು ಕೈಮೀರಿ ಹೋಗಿತ್ತು ಅಂದ್ರೆ, ತುತ್ತು ಅನ್ನ ಕೂಡ ಸಿಗದೆ ಗಾಜಾ ಜನ ನರಳಾಡುವಂತೆ ಆಗಿತ್ತು. ಊಟ & ನೀರು ಅಂತಾ ಜನ ಪರದಾಡುತ್ತಿದ್ದರು & ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಹೀಗಿದ್ದಾಗ ಕಳೆದ 1 ವಾರದಿಂದ ನಿರಂತರ ಸಭೆ & ಚರ್ಚೆಗಳ ನಂತರ ಇಂದು ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಹೀಗೆ ಕದನ ವಿರಾಮ ಘೋಷಣೆ ಮಾಡಿದ ನಂತರ ಕೂಡ ಇಸ್ರೇಲ್ ಸೇನೆಯಿಂದ ದಾಳಿ ನಡೆದಿರುವ ಆರೋಪ ಈಗ ಕೇಳಿ ಬಂದಿದೆ.

ಕದನ ವಿರಾಮದಲ್ಲೂ 72 ಜನರ ಸಾವು?
ಗಾಜಾ ಪಟ್ಟಿ ಆರೋಗ್ಯ ಸಚಿವಾಲಯ ಇದೀಗ ನೀಡಿರುವ ಮಾಹಿತಿ ಪ್ರಕಾರ ಹಮಾಸ್ & ಇಸ್ರೇಲ್ ಸರ್ಕಾರದ ನಡುವೆ ಮಾತುಕತೆ ನಡೆದು, ಕದನ ವಿರಾಮ ಘೋಷಣೆ ಮಾಡಿದ ನಂತರ ಕೂಡ ವಾಯುದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ರೀತಿ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಕದನ ವಿರಾಮ ಸಮಯದಲ್ಲಿ ಕೂಡ ದಾಳಿ ನಡೆಸಿರುವ ಪರಿಣಾಮ ಸುಮಾರು 72 ಜನ ಮೃತಪಟ್ಟಿದ್ದಾರೆ ಅಂತಾ ಆರೋಪ ಮಾಡಲಾಗಿದೆ. ಈ ವಿಚಾರ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡುವ ಜೊತೆ ಕದನ ವಿರಾಮದ ಬಗ್ಗೆ ಕೂಡ ಚರ್ಚೆ ಹುಟ್ಟುಹಾಕಿದೆ.
ಘೋರ ಯುದ್ಧ ಶುರುವಾಗಿದ್ದು ಯಾವಾಗ?
2023ರ ಕೊನೇ ಹಂತದಲ್ಲಿ ದಿಢೀರ್ ಇಸ್ರೇಲ್ & ಹಮಾಸ್ ನಡುವೆ ಯುದ್ಧ ಶುರುವಾಗಿತ್ತು. ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ಸುಮಾರು 5000 ರಾಕೆಟ್ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿಬಿಟ್ಟರು. ಆ ನಂತರ, ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು.
ಭೀಕರ ಘಟನೆ ನಡೆದು ಹತ್ತಿರ ಹತ್ತಿರ 15 ತಿಂಗಳೇ ಕಳೆದಿದ್ದು, ಈ 15 ತಿಂಗಳ ಅವಧಿಯಲ್ಲಿ ತನ್ನ ಶತ್ರು ನಾಶ ಮಾಡಲು ಇಸ್ರೇಲ್ ಬಳಸಿರುವುದು ಸಾವಿರಾರು ಟನ್ ಬಾಂಬ್ ಹಾಗೂ ಲಕ್ಷಾಂತರ ಬುಲೆಟ್. ಹೀಗಿದ್ದಾಗಲೇ ಕದನ ವಿರಾಮ ಘೋಷಣೆ ಆಗಿದ್ದರೂ ದಾಳಿಯು ನಿಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications