ಅಮೆರಿಕದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಭಾರತೀಯರ ಕಗ್ಗೊಲೆ
ಅಯೋವಾ (ಅಮೆರಿಕ), ಜೂನ್ 17 : ಆಘಾತಕಾರಿ ಘಟನೆಯೊಂದರಲ್ಲಿ ಇಬ್ಬರು ಬಾಲಕರು ಸೇರಿದಂತೆ ಭಾರತೀಯ ಮೂಲದ ಕುಟುಂಬದ ನಾಲ್ವರನ್ನು, ವೆಸ್ಟ್ ಡೆಸ್ ಮೊಯ್ನಿಸ್ ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಈ ದುರಾದೃಷ್ಟಕರ ಘಟನೆ ಶನಿವಾರವೇ ನಡೆದಿದ್ದು, ಸತ್ತವರನ್ನು ಚಂದ್ರಶೇಖರ ಸುಂಕರ (44), ಲಾವಣ್ಯ ಸುಂಕರ (41) ಎಂದು ಗುರುತಿಸಲಾಗಿದ್ದು, 15 ಹಾಗು 10 ವರ್ಷದ ಮಕ್ಕಳನ್ನು ಕೂಡ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಮೃತರ ದೇಹದ ಮೇಲೆ ಹಲವಾರು ಗುಂಡುಗಳು ಹೊಕ್ಕಿರುವುದು ಕಂಡುಬಂದಿದೆ. ಮನೆಯಲ್ಲಿ ತಂಗಿದ್ದ ಅತಿಥಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ಕಂಡ ನಂತರ ತಕ್ಷಣ ಪೊಲೀಸರಿಗೆ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಚಂದ್ರಶೇಖರ್ ಸುಂಕರ ಅವರು ಅಯೋವಾದಲ್ಲಿ ಸಾರ್ವಜನಿಕ ಸುರಕ್ಷತೆ ಇಲಾಖೆಯ ಟೆಕ್ನಾಲಜಿ ಸರ್ವೀಸ್ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಲಾವಣ್ಯ ಸುಂಕರ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.
ಸದ್ಯಕ್ಕೆ ಯಾಕೆ ಕೊಲೆಗಳಾಗಿವೆ, ಯಾರು ಕೊಲೆ ಮಾಡಿದ್ದಾರೆ, ಇದರ ಹಿಂದಿನ ಹುನ್ನಾರವೇನು ಇತ್ಯಾದಿ ಪ್ರಶ್ನೆಗಳು ಎದ್ದಿದ್ದು, ನಾವೀಗ ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳು ದೊರಕಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತೇವೆ ಎಂದು ವೆಸ್ಟ್ ಡೆಸ್ ಮೊಯ್ನಿಸ್ ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವ ಶಂಕಿತ ವ್ಯಕ್ತಿಯನ್ನೂ ಬಂಧಿಸಲಾಗಿಲ್ಲ.
ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲಕ ಸಿಖ್ ಕುಟುಂಬದ ನಾಲ್ವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಸರಿಯಾಗಿ ಒಂದು ತಿಂಗಳ ನಂತರ ಅಂತಹುದೇ ಘಟನೆ ಅಯೋವಾದಲ್ಲಿ ನಡೆದಿದೆ.












Click it and Unblock the Notifications