Donald Trump: ಅಧ್ಯಕ್ಷ ಸ್ಥಾನದಿಂದ ಜೈಲು ಕಂಬಿ ಎಣಿಸುವ ಭೀತಿಯವರೆಗೆ ಟ್ರಂಪ್ ಎಡವಟ್ಟುಗಳ ಪಟ್ಟಿ!
ಯಾವುದೇ ದೇಶದ ಅಧ್ಯಕ್ಷನಿಗೆ ದೇಶದ ಗೌರವ ಕಾಪಾಡುವ ಮಹತ್ವದ ಜವಾಬ್ದಾರಿ ಇರುತ್ತದೆ. ಅದರಲ್ಲೂ ಅಮೆರಿಕದಂತಹ ರಾಷ್ಟ್ರಗಳಿಗೆ ಜಗತ್ತನ್ನೇ ಕಂಟ್ರೋಲ್ ಮಾಡಲು ಈ ವಿಚಾರ ಬಹುಮುಖ್ಯ. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇದೆಲ್ಲವೂ ಉಲ್ಟಾ.
ಯಾವುದೇ ದೇಶದ ಅಧ್ಯಕ್ಷನಿಗೆ ದೇಶದ ಗೌರವ ಕಾಪಾಡುವ ಮಹತ್ವದ ಜವಾಬ್ದಾರಿ ಇರುತ್ತದೆ. ಅದರಲ್ಲೂ ಅಮೆರಿಕದಂತಹ ರಾಷ್ಟ್ರಗಳಿಗೆ ಜಗತ್ತನ್ನೇ ಕಂಟ್ರೋಲ್ ಮಾಡಲು ಈ ವಿಚಾರ ಬಹುಮುಖ್ಯ. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಕಾಲಘಟ್ಟದಲ್ಲಿ ಇದೆಲ್ಲವೂ ಉಲ್ಟಾ ಆಗಿತ್ತು. ಏನೇನೋ ಮಾತನಾಡಿ, ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾ ಟ್ರಂಪ್ ಅಮೆರಿಕದ ಮಾನ ಕಳೆಯುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದವು.
ಅದರಲ್ಲೂ ಟ್ರಂಪ್ ಲೈಂಗಿಕ ಸಂಬಂಧದ ವಿಚಾರಗಳು ಭಾರಿ ಸದ್ದು ಮಾಡಿದ್ದವು. ಇದೀಗ ಅದೇ ಕಾರಣಕ್ಕೆ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಜೈಲು ಕಂಬಿ ಎಣಿಸುವ ಭೀತಿ ಶುರುವಾಗಿದೆ. ಇದನ್ನ ಸ್ವತಃ ಟ್ರಂಪ್ ಜಗತ್ತಿಗೇ ಸಾರಿ ಹೇಳಿದ್ದು, ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಕ್ರಿಮಿನಲ್ ಕೇಸ್ ಎದುರಿಸುವಂತಾಗಿದೆ.

ಇಷ್ಟೆಲ್ಲದರ ನಡುವೆ ತಮ್ಮ ಬೆಂಬಲಿಗರಿಗೆ ಪ್ರತಿಭಟನೆ ನಡೆಸುವಂತೆ ಟ್ರಂಪ್ ಕರೆ ನೀಡಿರುವುದು 2021ರ ಕ್ಯಾಪಿಟಲ್ ಹಿಲ್ ಹಿಂಸಾಚಾರವನ್ನು ಕಣ್ಣಿಗೆ ರಾಚಿಸುವಂತೆ ಮಾಡಿದೆ. 'ವಿಶ್ವದ ದೊಡ್ಡಣ್ಣ' ಎಂದು ಕರೆಸಿಕೊಳ್ಳುವ ದೇಶದಲ್ಲೀಗ ಭಯದ ವಾತಾವರಣ ಸೃಷ್ಟಿಯಾಗಿದೆ. ಮೊದಲೇ ಹೇಳಿದಂತೆ ಟ್ರಂಪ್ ತಮ್ಮ ಮಾತಿನ ಮೇಲೆ ಹಿಡಿತ ಇಲ್ಲದವರಂತೆ ವರ್ತಿಸುವ ಮೂಲಕ ಏನಾದರೂ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡವರಂತೆ ವರ್ತಿಸುವ ಟ್ರಂಪ್ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಹೀಗಾಗಿಯೇ ತಮ್ಮ ಶ್ರೀಮಂತಿಕೆಯ ಅಮಲಿನಲ್ಲಿ ಏನೇನೋ ಮಾತನಾಡಿ ವಿವಾದ ಸೃಷ್ಟಿ ಮಾಡುತ್ತಾರೆ ಅನ್ನೋದು ಅವರ ವಿರೋಧಿಗಳ ಮಾತು. ಈ ಆರೋಪಕ್ಕೆ ಬಲ ನೀಡುವಂತೆ ಟ್ರಂಪ್ ಸಾಕಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಇದರಲ್ಲಿ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜೊತೆಗಿನ ಲೈಂಗಿಕ ಸಂಪರ್ಕದ ಆರೋಪ ಕೂಡ ಒಂದು.

ಟ್ರಂಪ್-ಸ್ಟಾರ್ಮಿ ಲವ್ವಿಡವ್ವಿ?
ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಹಿಂದೆ ಅಂದರೆ 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಟ್ರಂಪ್ ವಿರುದ್ಧದ ಈ ಆರೋಪ ಅವರಿಗೆ 2016ರ ಚುನಾವಣೆ ಹೊತ್ತಲ್ಲಿ ಮುಳುವಾಗುವ ಸಾಧ್ಯತೆ ದಟ್ಟವಾಗಿತ್ತು. ಆಗ ಸ್ಟಾರ್ಮಿ ಡೇನಿಯಲ್ಸ್ ಬಾಯಿ ಮುಚ್ಚಿಸೋದಕ್ಕೆ ಟ್ರಂಪ್ ಸುಮಾರು 1 ಲಕ್ಷ 30 ಸಾವಿರ ಡಾಲರ್ ಅಂದರೆ 1 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಿದ್ದರು ಎನ್ನಲಾಗಿದೆ.
ಅಮೆರಿಕದ ಕಾನೂನಿನಲ್ಲಿ ಈ ರೀತಿ ಹಣ ಪಾವತಿ ಮಾಡುವುದು ಕಾನೂನು ಬದ್ಧ ಎನ್ನಲಾಗಿದೆಯಾದರೂ, ಟ್ರಂಪ್ ಹಣ ಪಾವತಿ ಮಾಡಿರುವ ರೀತಿ ಕಾನೂನು ಬದ್ಧವಲ್ಲ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ. ಹೀಗಾಗಿ ಟ್ರಂಪ್ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಇದೀಗ ಅವರಿಗೆ ಬಂಧನದ ಭೀತಿ ಎದುರಾಗಿದೆ.
2021ರ ಘೋರ ಹಿಂಸಾಚಾರ
ಇಡೀ ಜಗತ್ತು 2021ರ ಕ್ಯಾಪಿಟಲ್ ಹಿಲ್ ಹಿಂಸಾಚಾರವನ್ನು ಮರೆಯಲು ಸಾಧ್ಯವಿಲ್ಲ. ಟ್ರಂಪ್ ಬೆಂಬಲಿಗರು ದಿಢೀರ್ ಅಮೆರಿಕದ ಸಂಸತ್ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ್ದರು. ಸ್ವತಃ ಟ್ರಂಪ್ ಇದಕ್ಕೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ತಮ್ಮ ಬಂಧನದ ಸಾಧ್ಯತೆ ಇದ್ದು, ನೀವು ಪ್ರತಿಭಟನೆ ನಡೆಸಿ ಎಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆನೀಡಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಟ್ರಂಪ್ ವಿರುದ್ಧ ಆಡಳಿತ ಪಕ್ಷದ ನಾಯಕರು ತಿರುಗಿಬಿದ್ದಿದ್ದಾರೆ.
ಗಿಫ್ಟ್ ವಿಚಾರ ಮುಚ್ಚಿಟ್ಟ ಟ್ರಂಪ್?
ಒಂದು ಕಡೆ ಸ್ಟಾರ್ಮಿ ಡೇನಿಯಲ್ಸ್ ವಿಚಾರದಲ್ಲಿ ಟ್ರಂಪ್ ಕಂಬಿ ಎಣಿಸುವ ಭೀತಿ ಎದುರಾಗಿದ್ದರೆ, ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ದುಬಾರಿ ಗಿಫ್ಟ್ಗಳ ವಿಚಾರ ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಭಾರತ ಸೇರಿದಂತೆ ವಿದೇಶಿ ನಾಯಕರಿಂದ ಪಡೆದ 250 ಸಾವಿರ ಡಾಲರ್ ಮೌಲ್ಯದ ಗಿಫ್ಟ್ ಬಹಿರಂಗಪಡಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿ ಪ್ರಕಾರ ಟ್ರಂಪ್ಗೆ ಕೊಟ್ಟ ಗಿಫ್ಟ್ ಪೈಕಿ ಭಾರತದಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದ 8,500 ಡಾಲರ್ ಬೆಲೆಯ ಗಿಫ್ಟ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ 6,600 ಡಾಲರ್ ಬೆಲೆಬಾಳುವ ಗಿಫ್ಟ್ ಹಾಗೂ ಪ್ರಧಾನಿ ಮೋದಿ ಅವರು ನೀಡಿದ್ದ 1,900 ಡಾಲರ್ ಬೆಲೆಯ ಗಿಫ್ಟ್ಗಳು ಸೇರಿವೆ ಎಂದು ಆರೋಪ ಮಾಡಲಾಗಿದೆ.
ಒಂದು ಕಡೆ ಟ್ರಂಪ್ ಬೆಂಬಲಿಗರು 'ಮತ್ತೊಮ್ಮೆ ಟ್ರಂಪ್' ಎಂಬ ಘೋಷವಾಕ್ಯದ ಮೂಲಕ, ಮತ್ತೆ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಧಿಕಾರಕ್ಕೆ ಬರಲಿ ಎಂದು ಬೃಹತ್ ಕ್ಯಾಂಪೇನ್ ಶುರು ಮಾಡಿದ್ದರು. ಆದರೆ ಮತ್ತೊಂದು ಕಡೆ ಇಡೀ ಅಮೆರಿಕದ ಇತಿಹಾಸದಲ್ಲೇ ಮಾಜಿ ಅಧ್ಯಕ್ಷರಿಗೆ ಭಾರಿ ಕಠಿಣ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ.
ಇಷ್ಟೆಲ್ಲದರ ನಡುವೆ ಟ್ರಂಪ್ ತಮ್ಮ ಬೆಂಬಲಿಗರಿಗೆ ಸೋಷಿಯಲ್ ಮೀಡಿಯಾಗಳ ಮೂಲಕ ನೀಡಿರುವ ಪ್ರತಿಭಟನೆಯ ಕರೆ ಉರಿಯುವ ಬೆಂಕಿಗೆ ತುಪ್ಪ ಸುರಿದಿರುವುದು ಸುಳ್ಳಲ್ಲ.












Click it and Unblock the Notifications