
ವಿಶ್ವಕಪ್ : ಡಚ್ಚರಿಗೆ ಮತ್ತೆ ಡಿಚ್ಚಿ ಕೊಡಲು ಗೂಳಿಗಳು ಸಿದ್ಧ
ಬೆಂಗಳೂರು, ಜೂ.13: ದಕ್ಷಿಣ ಆಫ್ರಿಕದಲ್ಲಿ ಹಾಲೆಂಡ್‌ನ್ನು ಮಣಿಸಿ ಪ್ರಶಸ್ತಿ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದ ಸ್ಪೇನ್ ಈ ಬಾರಿ ತನ್ನ ಮೊದಲ ಪಂದ್ಯದಲ್ಲೆ ಡಚ್ಚರಿಗೆ ಡಿಚ್ಚಿ ಕೊಡಲು ಸ್ಪೇನ್ ಗೂಳಿಗಳು ಸಿದ್ಧವಾಗಿದ್ದಾರೆ. ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಡಚ್ಚರು ಸಜ್ಜಾಗಿದ್ದಾರೆ. ಒಟ್ಟಾರೆ ಮಧ್ಯರಾತ್ರಿ ರೋಚಕ ಪಂದ್ಯದ ನಿರೀಕ್ಷೆಯಿದೆ.
ಇಪ್ಪತ್ತನೇ ವಿಶ್ವಕಪ್ ಫುಟ್ಬಾಲ್‌ನ 'ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಸ್ಪೇನ್ ತಂಡ ಹಾಲೆಂಡ್‌ನ್ನು ಎದುರಿಸಲಿದೆ.(ಜೂ.14, 12.30 AM IST), ಎರಡನೇ ಪಂದ್ಯದಲ್ಲಿ ಚಿಲಿ ಹಾಗೂ ಆಸ್ಟ್ರೇಲಿಯಾ ಕಾದಾಡಲಿವೆ(ಜೂ.14, 3.30 AM IST). ಎ ಗುಂಪಿನ ಇನ್ನೊಂದು ಪಂದ್ಯ ಮೆಕ್ಸಿಕೊ vs ಕ್ಯಾಮರೂನ್( ಜೂ.13, 9.30 PM IST) ನಡೆಯಲಿದೆ. [ಎಲ್ಲಿ ನೋಡುವುದು ಇಲ್ಲಿ ತಿಳಿಯಿರಿ]
ಹಾಲೆಂಡ್ ನ ಸ್ಟಾರ್ ಅಟಗಾರ ವೆಸ್ಲೆ ಸ್ನೇಡರ್ ಅವರು ಹಾಲೆಂಡ್ ಪರ 100ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. ಎರಡು ತಂಡಗಳು ಮೊದಲ ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ಆಕ್ರಮಣಕಾರಿ ಆಟವಾಡುವ ನಿರೀಕ್ಷೆಯಿದೆ. ಸ್ಪೇನ್ ಎಂದಿನಂತೆ ಪಾಸ್, ಪಾಸ್, ಪಾಸ್ ಅತಿ ಹೆಚ್ಚು ಹೊತ್ತು ಚೆಂಡನ್ನು ತಮ್ಮ ಸುಪರ್ದಿಯನ್ನು ಇಟ್ಟುಕೊಂಡು ಎದುರಾಳಿಯ ತಾಳ್ಮೆ ಪರೀಕ್ಷಿಸಿ ಸಮಯ ನೋಡಿ ಗೋಲು ಗಳಿಸುವ ತಂತ್ರಗಾರಿಕೆ ಮುಂದುವರೆಸಲಿದೆ.['ಬಿ ' ಗುಂಪಿನ ವೇಳಾಪಟ್ಟಿ]
ಬೆಟ್ಟಿಂಗ್: ಸ್ಪೇನ್ 5-6, ಹಾಲೆಂಡ್ 19-5, ಡ್ರಾ 23-10
ಯಾರು ಗೆಲ್ಲಬಹುದು: ಸ್ಪೇನ್ 3, ಹಾಲೆಂಡ್ 2.
ಉಭಯ ತಂಡಗಳ ಬಲಾಬಲ, ಸಂಭಾವ್ಯ ರಕ್ಷಣಾ ತಂತ್ರ, ಅಂತಿಮ XI ಆಟಗಾರರ ಬಗ್ಗೆ ವಿವರ ಮುಂದಿದೆ ಓದಿ

ಸ್ಪೇನ್ vs ನೆದರ್ಲೆಂಡ್ ಮುಖಾಮುಖಿ
2010ರ ವಿಶ್ವಕಪ್ ಫೈನಲ್ ನಲ್ಲಿ ಇನಿಯಸ್ಟಾ ಹೊಡೆದ ಏಕೈಕ ಗೋಲಿನಿಂದ ಹಾಲೆಂಡ್ ಮಣಿಸಿ ಸ್ಪೇನ್ ಕಪ್ ಎತ್ತಿತ್ತು. ಕಳೆದ 6 ಪಂದ್ಯಗಳಲ್ಲಿ 5 ಗೆದ್ದು ಸ್ಪೇನ್ ಉತ್ತಮ ಲಯದಲ್ಲಿದೆ. ಈಗಷ್ಟೇ ಚಾಂಪಿಯನ್ಸ್ ಲೀಗ್ ನಲ್ಲಿ ಆಡಿದ ಆಟಗಾರರಿದ್ದಾರೆ.
ನೆದರ್ಲೆಂಡ್ ಕಳೆದ 6 ಪಂದ್ಯಗಳಲ್ಲಿ ಮೂರು ಗೆದ್ದು ಮೂರು ಡ್ರಾ ಮಾಡಿಕೊಂಡಿದೆ. ಇಂಗ್ಲೀಷ್ ಲೀಗ್ ನಲ್ಲಿ ಆಡಿದ ಆಟಗಾರರ ಮೇಲೆ ಭರವಸೆ ಇಟ್ಟುಕೊಂಡಿದೆ. ಎರಡು ತಂಡಗಳು 9 ಬಾರಿ ಪರಸ್ಪರ ಕಾದಾಡಿದ್ದು ತಲಾ ನಾಲ್ಕು ಬಾರಿ ಗೆಲುವು ಸಾಧಿಸಿವೆ ಒಂದು ಪಂದ್ಯ ಡ್ರಾ ಆಗಿದೆ.
ರಕ್ಷಣಾ ತಂತ್ರಗಾರಿಕೆ, ತಂಡ
ಸ್ಪೇನ್ (4-2-1-3)
ಡಿಫೆನ್ಸ್ : ಅಪಿಲಿಕ್ಯೂಟ, ರಮೋಸ್, ಪಿಕ್ಯೂ, ಅಲ್ಬಾ
ಮಿಡ್ ಫೀಲ್ಡ್: ಅಲಾನ್ಸೊ, ಬುಸ್ಕ್ಯೂಟ್, ಕ್ಸಾವಿ
ಸೆಂಟರ್ ಫಾರ್ವರ್ಡ್: ಕೋಸ್ಟಾ, ಫ್ರಾಬ್ರಿಗ್ರೇಸ್, ಇನಿಯಾಸ್ಟಾ
ಗೋಲ್ ಕೀಪರ್: ಕ್ಯಾಸಿಲಾಸ್
ಕೋಚ್ : ವಿನ್ಸೆಂಟ್ ಡೆಲ್ ಬಾಸ್ಕೊ
ಡಿಫೆನ್ಸ್ : ಜಾನ್ಮಾತ್, ಡಿ ವ್ರಿಜ್, ವ್ಲಾರ್, ಮಾರ್ಟಿನ್ಸ್ ಇಂಡಿ, ಬ್ಲಿಂಡ್
ಮಿಡ್ ಫೀಲ್ಡ್: ಕ್ಲಸೆ, ಡಿ ಗುಜ್ಮನ್,
ಸೆಂಟರ್ ಫಾರ್ವರ್ಡ್: ಸ್ನೈಡರ್
ಫಾರ್ವರ್ಡ್: ರಾಬೆನ್, ವಾನ್ ಪರ್ಸಿ
ಗೋಲ್ ಕೀಪರ್: ವೊರ್ಮ್
ಕೋಚ್ : ಲೂಯಿಸ್ ವ್ಯಾನ್ ಗಾಲ್

ತಂಡದಿಂದ ಬಂದ ಸುದ್ದಿ
ಹಾಲೆಂಡ್‌ನ ಕೋಚ್ ಲೂಯಿಸ್ ವ್ಯಾನ್ ಗಾಲ್ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ತಂಡದ ನಾಯಕತ್ವದಲ್ಲೂ ಬದಲಾವಣೆಯಾಗಿದೆ. ವೆಸ್ಲೀ ಸ್ನೈಡರ್ ನಾಯಕತ್ವ ಕಳೆದುಕೊಂಡಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ರಾಬೆನ್ ವ್ಯಾನ್ ಪರ್ಸೇ ಡಚ್ ತಂಡವನ್ನು ವಿಶ್ವಕಪ್‌ನಲ್ಲಿ ನಾಯಕರಾಗಿ ಮುನ್ನಡೆಸಲಿದ್ದಾರೆ.
ಸ್ಪೇನ್ ತಂಡದಲ್ಲಿ ಬ್ರೆಜಿಲ್ಲಿನಲ್ಲಿ ಹುಟ್ಟಿರುವ ಡಿಯಾಗೋ ಕೋಸ್ಟಾ ಹ್ಯಾಮ್ ಸ್ಟ್ರಿಂಗ್ ಗಾಯದಿಂದ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಡೇವಿಡ್ ವಿಲ್ಲಾ ಅಥವಾ ಟೊರೆಸ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗಲಿದೆ. ಪಿಕ್ಯೂ ಬದಲಿಗೆ ಮಾರ್ಟಿನೇಜ್ ಗೆ ಸ್ಥಾನ ಸಿಕ್ಕರೂ ಸಿಗಬಹುದು.

ಸ್ಪೇನ್ ಪಾಸಿಂಗ್ vs ಡಚ್ ಅಟ್ಯಾಕ್
2008 ಮತ್ತು 2012ರ ಯುರೋ ಚಾಂಪಿಯನ್ ಸ್ಪೇನ್ ವಿಶ್ವಕಪ್ ಜಯಿಸಿದ ತಂಡದಲ್ಲಿದ್ದ 16 ಮಂದಿ ಆಟಗಾರರನ್ನು ಈ ವಿಶ್ವಕಪ್‌ಗೂ ಉಳಿಸಿಕೊಂಡಿದೆ. ಇದೊಂದು ಸಾರ್ವಕಾಲಿಕ ದಾಖಲೆ. ಯಾಕೆಂದರೆ ಈ ಹಿಂದೆ ವಿಶ್ವಕಪ್ ಜಯಿಸಿದ ಯಾವುದೇ ತಂಡ ಮುಂದಿನ ವಿಶ್ವಕಪ್‌ಗೆ ಚಾಂಪಿಯನ್ ತಂಡದ ಆಟಗಾರರಿಗೆ ಅವಕಾಶ ನೀಡಿರಲಿಲ್ಲ.
ಸ್ಪೇನ್‌ನ ಕ್ಸೇವಿ, ಅಂಡ್ರೆಸ್ ಇನಿಯೆಸ್ತ, ಡೇವಿಡ್ ಸಿಲ್ವ ದಾಳಿಯನ್ನು ಎದುರಿಸಲು ಡಚ್ ತಂಡದ ಅರ್ಜೆನ್ ರಾಬೇನ್ ಮತ್ತು ರಾಬಿನ್ ವ್ಯಾನ್ ಪರ್ಸೇ ಸಜ್ಜಾಗಿದ್ದಾರೆ.
ಸ್ಪೇನ್ vs ನೆದರ್ಲೆಂಡ್ ಅಂಕಿ ಅಂಶ
* 2010ರ ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಸೋಲು ಕಂಡ ಸ್ಪೇನ್ ಕೊನೆಯಲ್ಲಿ ಕಪ್ ಗೆದ್ದು ಇತಿಹಾಸ ರಚಿಸಿತ್ತು.
* ಸ್ಪೇನ್ ಮುಖ್ಯ ಕೋಚ್ ವಿನ್ಸೆಂಟ್ ಡೆಲ್ ಬಾಸ್ಕೊ 25 ವಿಶ್ವಕಪ್ ಪಂದ್ಯಗಳಲ್ಲಿ ಒಂದು ಮಾತ್ರ ಸೋತಿದ್ದಾರೆ.
* ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನಿನ ಡೇವಿಡ್ ವಿಲ್ಲಾ(8) ಅತಿ ಹೆಚ್ಚು ಗೋಲು ಗಳಿಸಿದ್ದಾರೆ. ಕಳೆದ 9 ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದಾರೆ.
* ರಾಬಿನ್ ವಾನ್ ಪರ್ಸಿ 2014 ರ ಯುರೋಪಿಯನ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 11 ಗೋಲುಗಳಿಸಿ ಉತ್ತಮ ಲಯದಲ್ಲಿದ್ದಾರೆ.
* ನೆದರ್ಲೆಂಡ್ ಲೀಗ್ ಹಂತವನ್ನು ಕಳೆದ ಏಳು ಬಾರಿ ಸುಲಭವಾಗಿ ದಾಟಿದೆ.