ವಿಮಾನದಲ್ಲಿ ಸಿಬ್ಬಂದಿಗೆ ಬಲವಂತವಾಗಿ ಚುಂಬಿಸಿದ ಮದ್ಯಪಾನಿ
ನ್ಯೂಯಾರ್ಕ್ ಏಪ್ರಿಲ್ 22: ವಿಮಾನದಲ್ಲಿ ಅಸಭ್ಯ ವರ್ತನೆಯ ಘಟನೆಗಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಒಂದಾದ ಮೇಲೊಂದರಂತೆ ಸುದ್ದಿಗಳು ವರದಿಯಾಗುತ್ತಲೇ ಇವೆ. ಮತ್ತೊಂದು ಘಟನೆ ಈಗ ಸುದ್ದಿಯಾಗಿದ್ದು ಮದ್ಯಪಾನ ಮಾಡಿದ ಪ್ರಯಾಣಿಕನೊಬ್ಬ ಸಿಬ್ಬಂದಿಗೆ ಬಲವಂತವಾಗಿ ಚುಂಬಿಸಿದ ಘಟನೆ ನಡೆದಿದೆ.
ಲಾಸ್ ಏಂಜಲೀಸ್‌ನಿಂದ ನ್ಯಾಶ್‌ವಿಲ್ಲೆಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹಾರಾಟದ ವೇಳೆ ಅಮೆರಿಕದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಲಾಟೆ ಮಾಡಿದ್ದು ಇದಕ್ಕೆ ಕಾರಣ.
ಸಿಎನ್‌ಎನ್ ವರದಿಯ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡೇವಿಡ್ ಅಲನ್ ಬರ್ಕ್ ಎಂಬ 61 ವರ್ಷದ ಪ್ರಯಾಣಿಕ ಕೆಟ್ಟದಾಗಿ ವರ್ತಿಸಿದ್ದಾನೆ. ತನ್ನ ಪ್ರಯಾಣದ ಸಮಯದಲ್ಲಿ ಹೆಚ್ಚು ಮದ್ಯಪಾನ ಮಾಡಿ ಕ್ಯಾಬಿನ್ ಸಿಬ್ಬಂದಿಯೊಬ್ಬರಿಗೆ ಬಲವಾಂತವಾಗಿ ಚುಂಬಿಸಿದ್ದಾರೆ. ಡೆಲ್ಟಾ ಫ್ಲೈಟ್‌ನಲ್ಲಿ ಏಪ್ರಿಲ್ 10 ರಂದು ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ವರದಿಯ ಪ್ರಕಾರ, ಬರ್ಕ್ ಪ್ರಥಮ ದರ್ಜೆಯ ಪ್ರಯಾಣಿಕನಾಗಿದ್ದರಿಂದ ಮದ್ಯವನ್ನು ಸೇವಿಸಿ ಪ್ರಯಾಣಿಸಲು ಅನುಮತಿಸಲಾಗಿದೆ. ಆದಾಗ್ಯೂ, ವಿಮಾನದಲ್ಲಿನ ನಿಯಮಗಳ ಕಾರಣದಿಂದಾಗಿ ಅವರಿಗೆ ಮದ್ಯವನ್ನು ವಿಮಾನದಲ್ಲಿ ನೀಡಲಾಗಲಿಲ್ಲ. ಇದು ಅವರನ್ನು 'ಪ್ರಚೋದಿತ'ನನ್ನಾಗಿ ಮಾಡಿದೆ. ವಿಮಾನ ಟೇಕ್ ಆಫ್ ಆದ ನಂತರ, ಬರ್ಕ್‌ಗೆ ವಿಮಾನ ಸಿಬ್ಬಂದಿ ಲಭ್ಯವಿರುವ ಸೇವೆ ಸಲ್ಲಿಸಿದ್ದಾರೆ. ಆದರೂ ಅವರು ವಿಮಾನ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ.
ಚುಂಬನಕ್ಕೂ ಮುನ್ನ ವಿಮಾನ ಸಿಬ್ಬಂದಿಯನ್ನು ಬರ್ಕ್ ಹೊಗಳಿದ್ದಾರೆ. ಬಳಿಕ ನಿಂದಿಸಲು ಪ್ರಾರಂಭಿಸಿದ್ದಾರೆ. ಬಳಿಕ ಬರ್ಕ್ ವಿಮಾನ ಸಿಬ್ಬಂದಿಯ ಕುತ್ತಿಗೆಯನ್ನು ಹಿಡಿದು, ತಮ್ಮ ಕಡೆಗೆ ಎಳೆದುಕೊಂಡು ಅವನ ಕುತ್ತಿಗೆಗೆ ಮುತ್ತಿಟ್ಟಿದ್ದಾರೆ.
ಪ್ರಯಾಣಿಕ ಬರ್ಕ್ ವರ್ತನೆಯನ್ನು ಕಂಡು ಗಾಬರಿಯಾದ ವಿಮಾನ ಸಿಬ್ಬಂದಿಯ ಡೆಲ್ಟಾ ಏರ್ಲೈನ್ಸ್ ವಿಮಾನದ ಕ್ಯಾಬಿನ್ ಹಿಂಭಾಗದಲ್ಲಿ ಬಚ್ಚಿಕೊಂಡಿದ್ದಾರೆ. ವಾಗ್ವಾದದ ಸಮಯದಲ್ಲಿ ಬುರ್ಕ್ ಆಹಾರವನ್ನು ತೋರಾಡಿದ್ದಾರೆ. ಕೆಲ ವಸ್ತುಗಳನ್ನು ಚೆಲ್ಲಾಡಿ ಹಾನಿಗೊಳಿಸಿದ್ದಾರೆ.

ಲ್ಯಾಂಡಿಂಗ್ ನಂತರ, ಪೈಲಟ್ ಘಟನೆಯನ್ನು ವರದಿ ಮಾಡಿ ದೂರು ನೀಡಿದ್ದಾರೆ. ವಿಚಾರಣೆಯ ಸಮಯದಲ್ಲಿ ಬರ್ಕ್ ಎಫ್‌ಬಿಐ ಅಧಿಕಾರಿಗಳಿಗೆ 'ತಾನು ಆಹಾರವನ್ನು ಬೀಸಾಡಲಿಲ್ಲ. ಫ್ಲೈಟ್ ಅಟೆಂಡೆಂಟ್ ಅನ್ನು ಚುಂಬಿಸಲಿಲ್ಲ' ಎಂದು ಹೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬರ್ಕ್‌ಗೆ ಏಪ್ರಿಲ್ 27 ರಂದು ಹಲ್ಲೆ ಮತ್ತು ಕ್ರಿಮಿನಲ್ ಕಿಡಿಗೇಡಿತನದ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಇಂತಹ ಅಸಭ್ಯ ವರ್ತನೆಯ ಘಟನೆ ವಿಮಾನದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮದ್ಯಪಾನ ಮಾಡಿದ ಭಾರತೀಯ ಪ್ರಯಾಣಿಕ ಮಹಿಳಾ ಸೀಟ್ ಮೇಲೆ ಮೂತ್ರವಿರ್ಸಜನೆ ಮಾಡಿದ್ದನು. ಈತನ ವಿರುದ್ಧ ದೂರು ಕೂಡ ದಾಖಲಿಸಲಾಗಿತ್ತು.
ಜೊತೆಗೆ ಈ ಹಿಂದೆ ಗಗನಸಖಿಯೊಂದಿಗೆ ಗಲಾಟೆ, ಹೊಡೆದಾಟ, ಬೆದರಿಕೆ ಹಾಕಿದಂತಹ ಘಟನೆಗಳು ವಿಮಾನದಲ್ಲಿ ನಡೆದಿವೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮತೆಗೆದುಕೊಂಡರೂ ಒಂದಲ್ಲಾ ಒಂದು ರೀತಿ ಘಟನೆಗಳು ನಡೆಯುತ್ತಲೇ ಇವೆ.












Click it and Unblock the Notifications