World War 3: ಹೊತ್ತಿದೆ ‘ಪರಮಾಣು’ ಬಾಂಬ್ ಬೆಂಕಿ, ಮೊದಲ ಬಲಿ ಯಾರು?
ಮನುಷ್ಯ ಬುದ್ಧಿ ಕಲಿಯಲ್ಲ ಬಿಡಿ, ತಾನು ನಾಶವಾಗುವುದು ಮಾತ್ರವಲ್ಲ ಭೂಮಿ ಮೇಲೆ ನೆಮ್ಮದಿಯಾಗಿ ಬದುಕು ಕಟ್ಟಿಕೊಂಡಿರುವ ಬೇರೆ ಜೀವಿಗಳನ್ನೂ ಸರ್ವನಾಶ ಮಾಡುವುದಕ್ಕೆ ಸಿದ್ಧವಾಗಿದ್ದಾನೆ. ಈಗಾಗಲೇ ಎರಡೆರಡು ಮಹಾಯುದ್ಧ ಕಂಡಿರುವ ಜಗತ್ತಿಗೆ ಮತ್ತೊಂದು ಮಹಾಯುದ್ಧದ ರುಚಿ ತೋರಿಸಲು ಅಮೆರಿಕ ಹಾಗೂ ರಷ್ಯಾ ಸಿದ್ಧವಾದಂತೆ ಕಾಣಿಸುತ್ತಿದೆ. ಆ ಭಯಾನಕ ಯುದ್ಧ ಈಗಾಗಲೇ ಸದ್ದೇ ಇಲ್ಲದೆ ಆರಂಭ ಕೂಡ ಆಗಿದೆ ನಿಮಗೆ ಗೊತ್ತಾ?
ಅದು 1945ರ ಆಗಸ್ಟ್ 6 & ಆಗಸ್ಟ್ 9, ಮನುಷ್ಯ ತಾನು ಎಷ್ಟು ಡೆಂಜರಸ್ ಅನ್ನೋದನ್ನ ತೋರಿಸಿದ್ದ. ನೋಡ ನೋಡುತ್ತಲೆ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಪರಮಾಣು ಬಾಂಬ್ ಹಾಕಿದ್ದ. ಅಮೆರಿಕ ಮಾಡಿದ ಈ ಕೆಲಸ ಜಗತ್ತನ್ನ ಬೆಚ್ಚಿಬೀಳಿಸಿತ್ತು. ಮುಕ್ಕಾಲು ಶತಮಾನದ ಹಿಂದೆ ನಡೆದಿದ್ದ ಈ ಘಟನೆಯಿಂದ ಈವತ್ತಿಗೂ ಜಪಾನ್ ಜನರು ನರಳುತ್ತಿದ್ದಾರೆ. ಆದರೆ ಜಗತ್ತಿನ ಬೇರೆ ದೇಶಗಳು ಮಾತ್ರ ಈ ಘಟನೆಯಿಂದ ಪಾಠ ಕಲಿತಿಲ್ಲ ಅಂತಾ ಕಾಣುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಮತ್ತು ಅಮೆರಿಕ ಮಧ್ಯೆ ದಿಢೀರ್ ಪರಮಾಣು ಅಸ್ತ್ರಗಳ ಪರೀಕ್ಷೆಗೆ ರೇಸ್ ಶುರುವಾಗಿದೆ.

ರಕ್ತಕ್ಕೆ ರಕ್ತ.. ಸೇಡಿಗೆ ಸೇಡು..!
ಹೌದು, ಇಸ್ರೇಲ್ ಹಾಗೂ ಹಮಾಸ್ ಯುದ್ಧ ಶುರುವಾದ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಅಮೆರಿಕ ನಾಯಕರ ವಿರುದ್ಧ ಗುಡುಗಿದ್ದಾರೆ. ಇದರ ಜೊತೆಗೆ ಉಕ್ರೇನ್ ವಿಚಾರದಲ್ಲಿ ತಲೆ ಹಾಕುತ್ತಿದ್ದ ಅಮೆರಿಕ ಈಗ ಯಾಕೆ ಯುದ್ಧ ನಿಲ್ಲಿಸುವ ಮಾತನಾಡಿಲ್ಲ? ಎಂಬ ಪ್ರಶ್ನೆಯನ್ನ ಕೂಡ ಮುಂದಿಟ್ಟಿದ್ದಾರೆ. ಇಷ್ಟೆಲ್ಲಾ ಗೊಂದಲದ ನಡುವೆ ರಷ್ಯಾ ಮತ್ತೆ ಪರಮಾಣು ಅಸ್ತ್ರ ಪರೀಕ್ಷೆಗೆ ಮುಂದಾಗಿದೆ. ಹೀಗೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಎಳ್ಳು-ನೀರು ಬಿಟ್ಟು ತನ್ನ ತಾಕತ್ ತೋರಿಸಲು ಮುಂದಾಗಿದೆ ರಷ್ಯಾ. ಇದೇ ಸಮಯದಲ್ಲಿ ತಣ್ಣಗೆ ಕೂತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕಿದ್ದ ಅಮೆರಿಕ ಕೂಡ ಈಗ ಪರಮಾಣು ಪರೀಕ್ಷೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಜಗತ್ತಿನಲ್ಲಿರುವ ಪರಮಾಣು ಬಾಂಬ್ ಎಷ್ಟು?
ಅಷ್ಟಕ್ಕೂ ಈಗಿನ ಲೆಕ್ಕಾಚಾರ ಪ್ರಕಾರ ಜಗತ್ತಿನಾದ್ಯಂತ ಒಟ್ಟು 13,000 ಪರಮಾಣು ಅಸ್ತ್ರ ಶೇಖರಣೆಯಾಗಿವೆ. ಈ ಪೈಕಿ ರಷ್ಯಾ ಹಾಗೂ ಅಮೆರಿಕ ಬಳಿ ಮುಕ್ಕಾಲು ಭಾಗಕ್ಕೂ ಹೆಚ್ಚು ಅಸ್ತ್ರಗಳು ಇವೆ. ಆದ್ರೆ ಶೀತಲ ಸಮರದ ಸಮಯದಲ್ಲಿ ಈ ಸಂಖ್ಯೆ ಸುಮಾರು 60,000ಕ್ಕೂ ಹೆಚ್ಚು ಇತ್ತು. ಇದಕ್ಕೆ ಹೋಲಿಕೆ ಮಾಡಿದ್ರೆ ಪರಿಸ್ಥಿತಿ ಸುಧಾರಿಸುತ್ತಿದೆ ಬಿಡು ಎನ್ನಲಾಗಿತ್ತು. ಅಲ್ಲದೆ 2010ರ ಏಪ್ರಿಲ್ 8ರಂದು ಅಮೆರಿಕ & ರಷ್ಯಾ ಮಧ್ಯೆ ಒಪ್ಪಂದ ನಡೆದು, ಈ ಡೆಡ್ಲಿ ನ್ಯೂಕ್ಲಿಯರ್ ಬಾಂಬ್‌ಗಳನ್ನು ನಾಶ ಮಾಡಿ ಹಿಡಿತಕ್ಕೆ ತರುವ ಒಪ್ಪಂದಕ್ಕೂ ಬರಲಾಗಿತ್ತು. ಒಬಾಮಾ ಇದ್ದಾಗ ಈ ಮಹತ್ವದ ಕಾರ್ಯ ನಡೆದಿತ್ತು, ಆದರೆ ಈಗ ಎಲ್ಲವೂ ಹಾಳಾಗಿದೆ.

ದೊಡ್ಡಣ್ಣ ಅಥವಾ ದಡ್ಡಣ್ಣ?
ಅಂದಹಾಗೆ ಜಗತ್ತಿನಾದ್ಯಂತ ಅಮೆರಿಕ ವಿರುದ್ಧ ಈಗ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲ ಕಾರಣ ಪರಮಾಣು ಯುದ್ಧ. ರಷ್ಯಾ ರೊಚ್ಚಿಗೆದ್ದ ವೇಳೆ ಶಾಂತಿ ಮಾತುಕತೆ ಮಾರ್ಗವನ್ನು ಅನುಸರಿಸಬೇಕಿದ್ದ ಅಮೆರಿಕ ಈಗ ರಷ್ಯಾ ಸೇನೆಯನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪುಟಿನ್ ಕೂಡ ಈ ವಿಚಾರದಲ್ಲಿ ಜಾಣ ನಡೆ ಇಟ್ಟಿದ್ದು ಜಗತ್ತಿನ ಎದುರು ಅಮೆರಿಕ ವಿಲನ್ ಆಗುವ ರೀತಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಅಮೆರಿಕ ಮಾತ್ರ ರಷ್ಯಾ ವಿರುದ್ಧ ಗುಡುಗಲು ಇದೀಗ ತಪ್ಪು ದಾರಿ ತುಳಿದಿದೆ ಎಂಬ ಆಕ್ರೋಶ ಮೊಳಗಿದೆ.
ಒಟ್ನಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಬಿದ್ದಿರುವ ಕಿಡಿ ಜಗತ್ತನ್ನೇ ಸುಡುವುದು ಪಕ್ಕಾ. ಅತ್ತ ಉಕ್ರೇನ್ ಮತ್ತು ರಷ್ಯಾ ಬಡಿದಾಡುವಾಗ ಅಮೆರಿಕ ಮಧ್ಯಪ್ರವೇಶ ಮಾಡಿತ್ತು. ಹಾಗೇ ಉಕ್ರೇನ್‌ಗೆ ಸಹಾಯ ಮಾಡುವ ನೆಪದಲ್ಲಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನ ಅಮೆರಿಕ ನೀಡಿದ ಆರೋಪ ಇದೆ. ಮತ್ತೊಂದು ಕಡೆ ಇಸ್ರೇಲ್ ಮತ್ತು ಹಮಾಸ್ ನಡುವೆ ಬೆಂಕಿ ಬಿದ್ದಿದೆ. ಈ ಮಧ್ಯೆ ಅನುಮಾನವೇ ಇಲ್ಲದೆ 3ನೇ ಮಹಾಯುದ್ಧದ ಜ್ವಾಲೆ ಧಗಧಗಿಸುತ್ತಿದೆ. ಗೊಂದಲಕ್ಕೆ ತೆರೆ ಎಳೆಯಲು ವಿಶ್ವಸಂಸ್ಥೆ ಮುಂದಾಗಬೇಕಿದೆ.












Click it and Unblock the Notifications