ಡೊನಾಲ್ಡ್ ಟ್ರಂಪ್ ಹೋಲಿಕೆಯಿಂದಲೇ ಬಚಾವಾದ ವೈರಲ್ ಎಮ್ಮೆ! ಬಕ್ರೀದ್‌ಗೆ ಬಲಿಯಾಗುವುದನ್ನು ಕೊನೆ ಕ್ಷಣಕ್ಕೆ ತಡೆದ ಬಾಂಗ್ಲಾ ಸರ್ಕಾರ
ಸಾವು ಯಾವಾಗ ಹೇಗೆ ಬೇಕಾದರೂ ಬರಬಹುದು. ಹಾಗೆಯೇ ಹಣೆಬರಹ ಗಟ್ಟಿಯಾಗಿದ್ದರೆ ಕೊನೆ ಕ್ಷಣದಲ್ಲಿ ಸಾವು ದೂರ ಹೋಗಲೂ ಬಹುದು. ಡೊನಾಲ್ಡ್ ಟ್ರಂಪ್ ಅವರನ್ನು ಹೋಲುತ್ತಿರುವುದೇ ಈ ಎಮ್ಮೆ ಸಾವಿನ ದವಡೆಯಿಂದ ಹೊರ ಬರುವುದಕ್ಕೆ ಕಾರಣವಾಗಿದೆ. ಹೌದು, ಡೊನಾಲ್ಡ್ ಟ್ರಂಪ್‌ನಂತೆ ಕಾಣಿಸುತ್ತಿದೆ ಎನ್ನುವ ಕಾರಣಕ್ಕೆ ವೈರಲ್ ಆಗಿರುವ ಆಲ್ಬಿನೋ ಎಮ್ಮೆ ನೆನಪಿದೆಯೇ? ಇದೀಗ ಈ ಎಮ್ಮೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಎಮ್ಮೆಯನ್ನು ಬಕ್ರೀದ್ ಸಲುವಾಗಿ ಬಲಿ ಕೊಡಲು ಸಿದ್ದತೆ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಎಮ್ಮೆಯನ್ನು ರಕ್ಷಿಸಿದ್ದು ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಕಳುಹಿಸಲಾಗಿದೆ.
ಬಕ್ರೀದ್ ಹಿನ್ನೆಲೆಯಲ್ಲಿ ಬಲಿ ಕೊಡುವ ಉದ್ದೇಶದಿಂದಲೇ ಈ ಎಮ್ಮೆಯನ್ನು ಅದರ ಮಾಲೀಕ 38 ವರ್ಷದ ಜಿಯಾ ಉದ್ದೀನ್ ಮೃಧಾ ಮಾರಾಟ ಮಾಡಿದ್ದರು. ಆದರೆ, ಹೆಚ್ಚುತ್ತಿರುವ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ, ಸರ್ಕಾರ ಇದನ್ನು ಕಡಿಯುವುದಕ್ಕೆ ತಡೆ ನೀಡಿದೆ. ಮಾತ್ರವಲ್ಲ, ಸರ್ಕಾರಿ ಅಧಿಕಾರಿಗಳು ಈ ಎಮ್ಮೆಯನ್ನು ಖರೀದಿಸಿದ್ದು, ಈ ಎಮ್ಮೆಯನ್ನು ಬಲಿ ನೀಡುವ ಬದಲು ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಅಲ್ಲದೆ, ಈ ಎಮ್ಮೆಯನ್ನು ಮೊದಲೇ ಖರೀದಿಸಿದವರಿಗೆ ಹಣವನ್ನು ಮರುಪಾವತಿ ಮಾಡುವುದಾಗಿ ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಈ ಎಮ್ಮೆಯನ್ನು ಬಲಿ ನೀಡಲಾಗುವುದಿಲ್ಲ ಎಂದು ಘೋಷಿಸಿದ್ದಾರೆ.
ಭದ್ರತಾ ಕಾಳಜಿಯಿಂದಾಗಿ ಈ ಪ್ರಾಣಿಯನ್ನು ರಕ್ಷಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊನೆಯ ಕ್ಷಣದಲ್ಲಿ, ಭದ್ರತಾ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ಎಮ್ಮೆಯನ್ನು ಬಲಿ ನೀಡದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಈ ಪ್ರಾಣಿ ಭಾರೀ ಜನಪ್ರಿಯತೆ ಪಡೆದಿತ್ತು. ಈ ಎಮ್ಮೆಯ ತಲೆಯ ಮೇಲಿನ ಕೂದಲನ್ನು ನೋಡಿ ತಮಾಷೆಯಾಗಿ ಇದಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿತ್ತು. ಅದನ್ನು ನೇರವಾಗಿ ನೋಡಿದವರು ಕೂಡಾ ಈ ಹೋಲಿಕೆಯನ್ನು ಒಪ್ಪಿಕೊಂಡಿದ್ದರು. ಅದರ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ನೋಡಿದವರು ಸಹಾ ಈ ಎಮ್ಮೆ ಡೊನಾಲ್ಡ್ ಟ್ರಂಪ್‌ನಂತೆಯೇ ಕಾಣಿಸುತ್ತದೆ ಎನ್ನುವ ಮಾತನ್ನು ಒಪ್ಪಿದ್ದಾರೆ. ಈ ಎಮ್ಮೆಯ ಮುಖದ ರಚನೆ ಮತ್ತು ಕೇಶವಿನ್ಯಾಸ ಕೂಡಾ ಟ್ರಂಪ್‌ಗೆ ಹೋಲಿಕೆಯಾಗುತ್ತದೆ ಎನ್ನುವ ಅಭಿಪ್ರಾಯವೇ ಎಲ್ಲೆಡೆ ವ್ಯಕ್ತವಾಯಿತು.
ಈ ಎಮ್ಮೆ ಅಪರೂಪ ಏಕೆ?:
ಆಲ್ಬಿನೋ ಎಮ್ಮೆಗಳು ದಕ್ಷಿಣ ಏಷ್ಯಾದಲ್ಲಿ ಅಪರೂಪ ಮತ್ತು ಸಾಮಾನ್ಯವಾಗಿ ಅವುಗಳ ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತವೆ. ಎಮ್ಮೆಗೆ ಜೋಳ, ಸೋಯಾಬೀನ್ ಮತ್ತು ಹೊಟ್ಟುಗಳ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಅಲ್ಬಿನೋ ಎಮ್ಮೆಗಳು ಬಹಳ ಶಾಂತ ಸ್ವಭಾವದ್ದಾಗಿದೆ. ಇದು ಪ್ರಚೋದನೆಯಿಲ್ಲದೆ ಆಕ್ರಮಣಕಾರಿಯಾಗುವುದಿಲ್ಲ ಎನ್ನಲಾಗಿದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications