'ಇದು ಸ್ವೀಕಾರಾರ್ಹವಲ್ಲ,' ಎಂದು ಮೋದಿ ಜೊತೆ ಮಾತುಕತೆಗೆ ನಿಂತ ಟ್ರಂಪ್
ಒಸಾಕಾ, ಜೂನ್ 27: 'ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನಿಲ್ಲಿ ಹೇಳಿದರು.
ಅಮೆರಿಕದ ಮೋಟಾರ್ ಸೈಕಲ್ ಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕದ ಪ್ರಮಾಣ ಅತಿಯಾಗಿದೆ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ.
ಹಾರ್ಲೆ ಡೆವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ ಎಂದು ಟ್ರಂಪ್ ದೂರಿದ್ದಾರೆ.

ಜಪಾನಿನ ಒಸಾಕಾದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿ-20 ಶೃಂಗಸಭೆಯ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸುವುದಾಗಿ ಟ್ರಂಪ್ ಹೇಳಿದ್ದಾರೆ.
ಭಾರತ ಅಮೆರಿಕದ ಮೇಲೆ ಹೇರುತ್ತಿರುವ ಅತಿಯಾದ ಆಮದು ಸುಂಕವನ್ನು ಹಿಂಪಡೆಯಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೊದಿ ಅವರು ಸಹ ಗುರುವಾರ ಬೆಳಿಗ್ಗೆ ಜಪಾನ್ ತಲುಪಿದ್ದು, ಉಭಯ ನಾಯಕರ ನಡುವಲ್ಲಿ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಆದ್ಯತೆಯ ವಹಿವಾಟಿನ(Generalized System of Preferences) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications