Ukraine War: ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ, ಪುಟಿನ್ & ಟ್ರಂಪ್ ಭೇಟಿ ಶೀಘ್ರ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬ ಆಸೆ ಇದೀಗ ಈಡೇರುತ್ತಿದೆ, ಸ್ವತಃ ರಷ್ಯಾದ ಕಡೆಯಿಂದ ಶಾಂತಿ ಮಾತುಕತೆಗೆ ಒಪ್ಪಿಗೆ ಸಿಕ್ಕ ನಂತರ ಮತ್ತೊಂದು ಆಟ ಶುರುವಾಗಿದೆ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಚರ್ಚೆ ಮಾಡಲು ಸಿದ್ಧರಾಗಿದ್ದರು. ಇಂತಹ ಸಮಯದಲ್ಲೇ, ರಷ್ಯಾ ಅಧ್ಯಕ್ಷ ಕಚೇರಿಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಹೀಗಿದ್ದಾಗ ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ ಹೊಡೆದು ಯುದ್ಧ ಮುಗಿಸಲು ಪುಟಿನ್ & ಟ್ರಂಪ್ ಶೀಘ್ರದಲ್ಲೇ ಭೇಟಿ ಮಾಡುತ್ತಿದ್ದಾರಾ?
ಯುದ್ಧ.. ಯುದ್ಧ.. ಯುದ್ಧ.. ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ದೊಡ್ಡ ಅವಾಂತರ ನಡೆದು ಹೋಗುತ್ತಿದ್ದು, ಯುರೋಪ್ ದೇಶಗಳಿಗೆ ದಾರಿದ್ರ್ಯ ಬೆನ್ನು ಹತ್ತುತ್ತಿದೆ. ಯುರೋಪ್ ಅಂದ್ರೆ ಅಭಿವೃದ್ಧಿ, ಯುರೋಪ್ ದೇಶಗಳಲ್ಲಿ ಹೋಗಿ ಸೆಟಲ್ ಆದರೆ ಜನ್ಮದಲ್ಲಿ ಕಷ್ಟ ಬರೋದಿಲ್ಲ, ನೆಮ್ಮದಿಯಾಗಿ ಇದ್ದು ಬಿಡಬಹುದು ಅನ್ನೋ ಮಾತು ಇತ್ತು. ಆದರೆ ಈಗ ಅದೇ ಯುರೋಪ್ ಖಂಡ ಹಾಳು ಕೊಂಪೆಯಾಗಿದ್ದು & ಯುರೋಪ್ ದೇಶಗಳಲ್ಲಿ ಸಾವಿರಾರು ಸಮಸ್ಯೆ ಕಾಡುತ್ತಿವೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ಉರಿಯುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ಕಷ್ಟಗಳ ಸರಮಾಲೆ ತಂದೊಡ್ಡಿದೆ. ಇದೇ ಸಮಯದಲ್ಲಿ ರಷ್ಯಾ & ಉಕ್ರೇನ್ ಯುದ್ಧ ಬೆಂಕಿಗೆ ನೀರು ಹಾಕುವ ಸಮಯ ಬಂದಿದೆ!

ಟ್ರಂಪ್ & ಪುಟಿನ್ ಭೇಟಿಗೆ ಕೌಂಟ್‌ಡೌನ್?
ಉಕ್ರೇನ್ ಯುದ್ಧದಲ್ಲಿ ನರಳಿ ಹೋಗಿರುವ ಸಮಯದಲ್ಲೇ ಭರ್ಜರಿ ಸುದ್ದಿ ಸಿಕ್ಕಿದ್ದು, ಇದೀಗ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ನಿಲ್ಲಿಸಲು ನೇರ ಮಾತುಕತೆಗಾಗಿ ಪ್ರಸ್ತಾಪ ಮಾಡಿದ್ದಾರೆ. ಜನರು ವಾಸ ಇರುವ ಅಂದ್ರೆ ನಾಗರಿಕ ಪ್ರದೇಶಗಳ ಮೇಲೆ ಅಟ್ಯಾಕ್ ಮಾಡದೇ ಇರಲು ಉಕ್ರೇನ್ ಜೊತೆ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳಲು ಪುಟಿನ್ ಸಿದ್ಧರಾಗಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಹಾಗಾದರೆ ಪುಟಿನ್ & ಟ್ರಂಪ್ ಅಕಸ್ಮಾತ್ ಭೇಟಿ ಮಾಡಿದರೆ ಎಲ್ಲಿ ಮೀಟ್ ಆಗಬಹುದು? ಡೊನಾಲ್ಡ್ ಟ್ರಂಪ್‌ಗೆ ರಷ್ಯಾಗೆ ಬರಲು ಆಹ್ವಾನ ಸಿಗುತ್ತಾ? ಅಥವಾ ಪುಟಿನ್ ಅಮೆರಿಕಗೆ ಹೋಗುತ್ತಾರಾ? ಮಾಹಿತಿಗಾಗಿ ಮುಂದೆ ಓದಿ.
ಯಾವ ದೇಶದಲ್ಲಿ ಟ್ರಂಪ್ & ಪುಟಿನ್ ಭೇಟಿ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಸ್ನೇಹ ಗಟ್ಟಿಯಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನ ಪುಟಿನ್ ಇದೀಗ ಪುರಸ್ಕಾರ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಉಕ್ರೇನ್ ವಿರುದ್ಧದ ರಷ್ಯಾ ಯುದ್ಧಕ್ಕೆ ಬ್ರೇಕ್ ಹಾಕಲು ರಷ್ಯಾ ಸಿದ್ಧತೆ ನಡೆಸಿದೆ. ಹೀಗಿದ್ದಾಗ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೌದಿ ಅರೇಬಿಯಾ ಅಥವಾ ಕತಾರ್ ದೇಶದಲ್ಲಿ ಭೇಟಿ ಮಾಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಯಾಕಂದ್ರೆ ಟ್ರಂಪ್ ಅವರು ರಷ್ಯಾಗೆ ಬರಲು ಒಪ್ಪುವುದು ಕಷ್ಟವಿದೆ, ಹಾಗೇ ಬಂಧನ ಭೀತಿ ಹಿನ್ನೆಲೆ ಪುಟಿನ್ ಕೂಡ ಅಮೆರಿಕಗೆ ಹೋಗಲು ಆಗಲ್ಲ. ಹೀಗಿದ್ದಾಗಲೇ, ಸೌದಿ ಅರೇಬಿಯಾ ಅಥವಾ ಕತಾರ್ ದೇಶದಲ್ಲಿ ಭೇಟಿ ಮಾಡುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಚೀನಾದಲ್ಲಿ ಭೇಟಿ ಮಾಡಿದರೂ ಅಚ್ಚರಿ ಇಲ್ಲ, ಎನ್ನುವ ಚರ್ಚೆ ಕೂಡ ಜೋರಾಗಿದೆ. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಒಂದು ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ.
ಅಂತೂ ಇಂತೂ ಯುದ್ಧ ನಿಲ್ಲುತ್ತಾ?
ಖುದ್ದು ಉಕ್ರೇನ್ ಅಧ್ಯಕ್ಷರ ಎಡವಟ್ಟಿನಿಂದ ಯುದ್ಧ ಶುರುವಾಯಿತು ಎಂಬ ಆರೋಪ ಇದೆ. ಉಕ್ರೇನ್ ಕೈಯಿಂದ ಈಗಾಗಲೇ ಎಲ್ಲಾ ಕಿತ್ತುಕೊಂಡಿರುವ ರಷ್ಯಾ ಸೇನೆ ಬಾಕಿ ಉಳಿದ ಪ್ರದೇಶಗಳ ಮೇಲೂ ಈಗ ಸ್ಕೆಚ್ ಹಾಕಿ ಕಾಯುತ್ತಿದೆ. ಉಕ್ರೇನ್ ಗಡಿ ಭಾಗದಲ್ಲಿ ಇರುವ ಎಲ್ಲಾ ಹಳ್ಳಿಗಳನ್ನು ಕಿತ್ತುಕೊಳ್ಳುತ್ತಿರುವ ರಷ್ಯಾ, ಇದೀಗ ಉಕ್ರೇನ್ ರಾಜಧಾನಿ ಕೀವ್‌ಗೆ ಕೂಡ ಗುರಿ ಇಟ್ಟಿದೆ.
ಹೀಗಾಗಿ ಆದಷ್ಟು ಬೇಗನೇ ಯುದ್ಧ ನಿಲ್ಲಿಸಬೇಕು ಎಂಬುದು ಉಕ್ರೇನ್ ಒತ್ತಾಯವೂ ಆಗಿತ್ತು. ಈ ಕಾರಣಕ್ಕೆ ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹಾಕುತ್ತಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ವಿಚಾರದಲ್ಲಿ ಸಕ್ಸಸ್ ಕಾಣುತ್ತಿಲ್ಲ. ಆ ಮೂಲಕ ರಷ್ಯಾ ಯುದ್ಧವನ್ನ ಮುಂದುವರಿಸಿ ಭೀಕರ ಆಘಾತ ನೀಡುತ್ತಾ ಬಂದಿತ್ತು. ಆದರೆ ಅಂತಿಮವಾಗಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದಂತೆ ಕಾಣ್ತಾ ಇದೆ. ಹೀಗಾಗಿ ಉಕ್ರೇನ್ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.
ಅನುದಾನ ಸಿಗದೆ ಒದ್ದಾಡುತ್ತಿದೆ ಉಕ್ರೇನ್!
ಯುದ್ಧ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸಂಪತ್ತು ಬೇಕು, ಆದರೆ ಉಕ್ರೇನ್‌ಗೆ ಅದೇ ಇಲ್ಲ. ಅಮೆರಿಕ ಹಣ ಕೊಡದೆ ಉಕ್ರೇನ್ ಸೇನೆ ಪಾಡು ಯಾರಿಗೂ ಬೇಡವಾಗಿದೆ. ಯಾಕೆ ಅಂದ್ರೆ ರಷ್ಯಾ ರೀತಿಯ ಬಲಿಷ್ಠ ದೇಶದ ವಿರುದ್ಧ ಹೋರಾಟ ನಡೆಸಲು ಆಗದೆ ಉಕ್ರೇನ್ ಸೇನೆಯು ಒದ್ದಾಡಿದೆ. ಇನ್ನೊಂದು ಕಡೆ ಲಕ್ಷಾಂತರ ಜನರನ್ನು ಕಳೆದುಕೊಂಡು ಉಕ್ರೇನ್ ಕಂಗಾಲಾಗಿ ಹೋಗಿದೆ.
ಹಾಗೇ ರಷ್ಯಾ ಸೇನೆ ನಿಧಾನವಾಗಿ ಉಕ್ರೇನ್ ಒಳಗೆ ನುಗ್ಗುತ್ತಾ ಬಹುತೇಕ ಉಕ್ರೇನ್ ನೆಲದ ಮೇಲೆ ಹಿಡಿತ ಸಾಧಿಸಿದೆ. ಹೀಗಿದ್ದಾಗ ಅಮೆರಿಕ ನೀಡುತ್ತಿದ್ದ ಅನುದಾನವೂ ಬಂದ್ ಆಗಿದ್ದು ವಿಲವಿಲ ಒದ್ದಾಡಿ ಹೋಗಿದೆ ಉಕ್ರೇನ್ ಸೇನೆ. ಯುರೋಪ್ ದೇಶಗಳು ಮಾಡುತ್ತಿರುವ ಸಹಾಯವೇ ಇದೀಗ ಉಕ್ರೇನ್‌ಗೆ ಆಧಾರವಾಗಿದೆ. ಇಂತಹ ಸಮಯದಲ್ಲಿ ರಷ್ಯಾ ಇದೀಗ ಯುದ್ಧ ನಿಲ್ಲಿಸಲು ಮುಂದೆ ಬಂದಿರುವುದು ಉಕ್ರೇನ್‌ಗೆ ಲಾಟರಿ ಹೊಡೆದಂತೆ ಆಗಿದೆ.
ಉಕ್ರೇನ್ ರಾಜಧಾನಿ ಉಡೀಸ್ ಆಗುತ್ತಾ?
ರಷ್ಯಾ ಸೇನೆ ಉಕ್ರೇನ್‌ಗೆ ಬದಲಾಗುವಂತೆ ಹೇಳಿ ಹೇಳಿ ರೊಚ್ಚಿಗೆದ್ದು ಕೂತಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಭೀಕರ ದಾಳಿ ಮುನ್ನೆಚ್ಚರಿಕೆ ನೀಡಿದ್ದರು, ಭವಿಷ್ಯದಲ್ಲಿ ಉಕ್ರೇನ್ ಇನ್ನಷ್ಟು ಸಮಸ್ಯೆಗೆ ಸಿಲುಕಿ ಒದ್ದಾಡುವಂತೆ ಮಾಡಲು ರಷ್ಯಾ ಸೇನೆ ಎಲ್ಲ ರೀತಿ ಪ್ಲಾನ್ ಮಾಡಿದೆ ಎಂಬ ಮಾಹಿತಿ ಕೂಡ ಹರಿದಾಡಿತ್ತು. ಮತ್ತೊಂದು ಕಡೆ ಉಕ್ರೇನ್ ದೇಶದ ರಾಜಧಾನಿ ಕೀವ್ ವಶಕ್ಕೆ ಕೂಡ ಪಕ್ಕಾ ಸ್ಕೆಚ್ ಹಾಕಿರುವ ಆರೋಪವೂ ಕೇಳಿ ಬಂದಿತ್ತು, ಉಕ್ರೇನ್ ವಿರುದ್ಧ ಅಪಾಯಕಾರಿ ಅಸ್ತ್ರಗಳನ್ನೇ ಬಳಸಲು ಮುಂದಾಗಿತ್ತು ರಷ್ಯಾ ಮಿಲಿಟರಿ. ಹೀಗೆ ಎಲ್ಲಾ ರೀತಿಯ ಅಪಾಯಗಳು ಒಟ್ಟಿಗೆ ಎದುರಾದ ಸಮಯದಲ್ಲೇ ಉಕ್ರೇನ್‌ಗೆ ಪ್ರಾಣ ಭಿಕ್ಷೆ ಸಿಕ್ಕಂತೆ ಆಗಿದೆ.












Click it and Unblock the Notifications