2024ರ ರಷ್ಯಾ ಚುನಾವಣೆಗೆ ವ್ಲಾದಿಮಿರ್ ಪುಟಿನ್ ಸ್ಪರ್ಧೆ...
ರಷ್ಯಾ & ಉಕ್ರೇನ್ ಯುದ್ಧ ಘೋರವಾಗಿರುವ ಸಮಯದಲ್ಲೇ ರಷ್ಯಾ ಚುನಾವಣೆ ಬಗ್ಗೆಯೂ ಮಾತುಕತೆ ಶುರುವಾಗಿದೆ. ಈಗಾಗಲೇ ರಷ್ಯಾದ ಪ್ರಶ್ನಾತೀತ ನಾಯಕನಾಗಿ ಮೆರೆಯುತ್ತಿರುವ ಪುಟಿನ್ ಈ ಬಾರಿ ಕೂಡ ಚುನಾವಣೆಗೆ ನಿಲ್ತಾರಾ? ರಷ್ಯಾ ಕಾನೂನು ಹೇಳುವುದು ಏನು? ಉಕ್ರೇನ್ ವಿರುದ್ಧದ ಯುದ್ಧದ ನಡುವೆಯೂ ರಷ್ಯಾದಲ್ಲಿ ಚುನಾವಣಾ ತಯಾರಿ ಹೇಗಿದೆ?
ಮುಂದೆ ಜಗತ್ತು 3ನೇ ಮಹಾಯುದ್ಧ ನೋಡಬಾರದು ಎಂಬ ಕಾರಣಕ್ಕೆ ವಿಶ್ವಸಂಸ್ಥೆಯನ್ನು ರಚಿಸಲಾಗಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ, ವಿಶ್ವಸಂಸ್ಥೆ ಕಣ್ಣೆದುರಲ್ಲೇ ಮೂರನೇ ಮಹಾಯುದ್ಧ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ರಷ್ಯಾ & ಉಕ್ರೇನ್ ಯುದ್ಧವೇ ಈಗ 3ನೇ ಮಹಾಯುದ್ಧದ ರೂಪ ಪಡೆಯುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವಾಗಲೇ, ರಷ್ಯಾ ಚುನಾವಣೆ ಬಗ್ಗೆ ಚರ್ಚೆ ಜೋರಿದೆ. ಹಾಗಾದರೆ ನಿಜಕ್ಕೂ ರಷ್ಯಾದಲ್ಲಿ ಆಗ್ತಿರೋದು ಏನು?

ಮತ್ತೊಮ್ಮೆ ಪುಟಿನ್ ಕೈಗೆ ಅಧಿಕಾರ?
ಪುಟಿನ್ ಈಗಾಗಲೇ ಬರೋಬ್ಬರಿ 4 ಬಾರಿ ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದಾರೆ. ಅಲ್ಲದೆ ಈ ಅಧಿಕಾರ ಅಸ್ತ್ರವನ್ನು 2030ರ ತನಕ ಮುಂದುವರಿಸಿಕೊಂಡು ಹೋಗಲು ಪುಟಿನ್ ಪ್ಲ್ಯಾನ್ ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಯುದ್ಧದ ಮಧ್ಯೆ ರಷ್ಯಾದಲ್ಲಿ 2024ಕ್ಕೆ ಚುನಾವಣೆಗಳು ನಡೆಯುತ್ತವಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಏಕೆಂದರೆ ಯುದ್ಧ ಪರಿಣಾಮ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವ ಸಮಯಕ್ಕೆ, ಎಲೆಕ್ಷನ್ ನಡೆಸುತ್ತಾ ರಷ್ಯಾ ಸರ್ಕಾರ ಎಂಬ ಪ್ರಶ್ನೆ ಕೂಡ ಮೂಡಿದೆ. ಮತ್ತೊಂದು ಕಡೆ 2030ರ ತನಕ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಅಧಿಕಾರದಲ್ಲಿ ಉಳಿಯುವುದು ಹೇಗೆ? ಎಂಬ ಕುತೂಹಲ ಕೂಡ ಹೆಚ್ಚಾಗುತ್ತಿದೆ.
ಈ ಮೊದಲು ರಷ್ಯಾದಲ್ಲಿ 4 ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುತ್ತಿತ್ತು. ಆದ್ರೆ ಕಾನೂನು ಬದಲಾಗಿದ್ದು, 6 ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮರು ಆಯ್ಕೆ ಆಗ್ತಾರಾ? ಎಂಬ ಪ್ರಶ್ನೆ ಮೂಡಿದೆ. ರಷ್ಯಾ ಕಾನೂನಿನಂತೆ ಅಧ್ಯಕ್ಷೀಯ ಚುನಾವಣೆ ಬಗ್ಗೆ ಸಂಸತ್ ನಿರ್ಧಾರ ಮಾಡಬೇಕಿದೆ. ಈ ಹಿನ್ನೆಲೆ ಚುನಾವಣೆ ನಡೆಯುವುದೇ ಅನುಮಾನ ಎಂಬುದು ಪುಟಿನ್ ವಿರೋಧಿಗಳ ಮಾತು. ಏಕೆಂದರೆ ಪುಟಿನ್ ವಿರೋಧಿಗಳ ಮಾತಿನಂತೆ ಈಗಾಗಲೇ ರಷ್ಯಾ ಆಡಳಿತವನ್ನು ವ್ಲಾದಿಮಿರ್ ಪುಟಿನ್ ಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ಪುಟಿನ್ ವಿರುದ್ಧ ಯಾರ ಸ್ಪರ್ಧೆ?
ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಪುಟಿನ್ ಫಿಕ್ಸ್ ಆಗಿದ್ದರೂ ಅವರ ವಿರುದ್ಧ ಯಾರ ಸ್ಪರ್ಧೆ ಇರಲಿದೆ ಎಂಬುದೇ ಇನ್ನೂ ಕನ್ಫರ್ಮ್ ಆಗಿಲ್ಲ. ಏಕೆಂದರೆ ವ್ಲಾದಿಮಿರ್ ಪುಟಿನ್ ವಿರುದ್ಧ ನಿಲ್ಲುವುದಲ್ಲ ಮಾತನಾಡುವುದಕ್ಕೂ ರಷ್ಯನ್ನರು ಭಯಪಡುತ್ತಾರೆ. ಹೀಗಿದ್ದಾಗಲೇ ಪುಟಿನ್ ವಿರುದ್ಧ ಸ್ಪರ್ಧೆಗೆ ಯಾರು ಸಜ್ಜಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಅಮೆರಿಕವೂ ಸೇರಿ ರಷ್ಯಾ ವಿರೋಧಿಗಳು ರಷ್ಯಾ ಚುನಾವಣೆ ಮೇಲೆ ಕಣ್ಣಿಟ್ಟು ಕೂತಿವೆ ಎಂಬ ಮಾತು ಕೇಳಿಬರುತ್ತಿದೆ.
ಉಕ್ರೇನ್ ನೆಲದಲ್ಲಿ ರಷ್ಯಾ ಚುನಾವಣೆ!
ಇತ್ತ ರಷ್ಯಾ ಚುನಾವಣೆ ಬಗ್ಗೆ ಚರ್ಚೆ ನಡೆಯುವಾಗ, ಅತ್ತ ಉಕ್ರೇನ್ ನೆಲದಲ್ಲಿ ಖುದ್ದಾಗಿ ರಷ್ಯಾ ಸೇನೆ ಚುನಾವಣೆ ನಡೆಸಿದೆ. ಒಂದು ವರ್ಷ ಹಿಂದೆ ಉಕ್ರೇನ್‌ನ 4 ಭಾಗಗಳನ್ನು ರಷ್ಯಾಗೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕಾರಣಕ್ಕೆ ಸೆಪ್ಟೆಂಬರ್ ಆರಂಭದಲ್ಲಿ ಉಕ್ರೇನ್ ಹಲವು ಪ್ರಾಂತ್ಯಗಳಲ್ಲಿ ಸ್ಥಳೀಯ ಚುನಾವಣೆ ಎದುರಿಸಿತ್ತು. ರಷ್ಯಾ ಸೇನೆ ಹಿಡಿತಕ್ಕೆ ತೆಗೆದುಕೊಂಡಿದ್ದ ಡೊನೆಟ್ಸ್ಕ್, ಲುಹಾನ್ಸಕ್, ಕೆರ್ಸಾನ್ & ಝಪೊರಿಝಿಯಾ ಪ್ರದೇಶದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಈಗ ರಷ್ಯಾ ಚುನಾವಣೆ ಬಗ್ಗೆ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವವರೆಗೂ ಈ ಗೊಂದಲಕ್ಕೆ ಬ್ರೇಕ್ ಬೀಳುವುದಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಜಗತ್ತಿನಲ್ಲಿ ಶಾಂತಿ ಮೂಡಿಸಬೇಕಿದೆ ಎಂಬ ಒತ್ತಾಯ ಕೇಳಿಬರುತ್ತಿದೆ. ಇದೆಲ್ಲಾ ಸಾಧ್ಯವಾಗುತ್ತಾ? ಅನ್ನೋದೆ ಈಗ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications