America Election: ಟ್ರಂಪ್ VS ಬೈಡನ್ ಫೈಟ್‌ನಲ್ಲಿ ಗೆಲ್ಲೋದು ಯಾರು?
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಹೀಗೆ ಜಿದ್ದಾಜಿದ್ದಿನ ಅಖಾಡದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಆಗಬಹುದು, ಹಾಲಿ ಅಧ್ಯಕ್ಷ ಬೈಡನ್‌ಗೆ ಮನೆಯ ದಾರಿ ತೋರಿಸಬಹುದು. ಇದೀಗ ಎಲ್ಲವೂ ಅಮೆರಿಕದ ಮತದಾರರ ಕೈಯಲ್ಲಿ ಇದ್ದು, ಈ ಮಧ್ಯೆ ಸಮೀಕ್ಷೆಯ ವರದಿ ಸ್ಫೋಟಕ ಮಾಹಿತಿ ನೀಡಿದೆ. ಹಾಗಾದರೆ ಯಾರ ಪರ ಇದ್ದಾರೆ ಅಮೆರಿಕದ ಮತದಾರರು? ಡೊನಾಲ್ಡ್ ಟ್ರಂಪ್ ಗೆಲ್ತಾರಾ? ಇಲ್ಲ ಸೋಲ್ತಾರಾ?
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಗಿನ ಹಾಲಿ ಅಧ್ಯಕ್ಷ ಟ್ರಂಪ್ ಕೂದಲೆಳೆ ಅಂತರದಲ್ಲಿ ಸೋತಿದ್ದರು. ಹೀಗಾಗಿಯೇ ಮತ್ತೊಮ್ಮೆ ಗೆದ್ದು ಬೀಗಬೇಕು ಎಂಬ ಗುರಿಯನ್ನ ಟ್ರಂಪ್ ಇಟ್ಟುಕೊಂಡಿದ್ದರು. ಇದೀಗ ಟ್ರಂಪ್ ಅಭಿಮಾನಿಗಳಿಗೆ ಖುಷಿ ಕೊಡುವ ಸುದ್ದಿಯು ಸಿಕ್ಕಿದ್ದು, ವಾಷಿಂಗ್ಟನ್ ಪೋಸ್ಟ್ ಹಾಗೂ ಎಬಿಸಿ ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆಯ ವರದಿ ರಿವೀಲ್ ಆಗಿದೆ. ಹಾಗಾದರೆ ಟ್ರಂಪ್ ಅಭಿಮಾನಿಗಳಿಗೆ ಸಿಕ್ಕಿರುವ ಸಿಹಿಸುದ್ದಿ ಏನು? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ಮುಂದೆ ಓದಿ.

ಟ್ರಂಪ್ ಪರ ಹವಾ ಜೋರು!
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಬೈಡನ್‌ಗೆ ಮೊದಲನೇ ಶಾಕ್ ಸಿಕ್ಕಿದೆ. ಈಗ ಹೊರಬಿದ್ದಿರುವ ಸಮೀಕ್ಷೆ ಪ್ರಕಾರ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ 10 ಅಂಕ ಹಿಂದೆ ಇದ್ದಾರಂತೆ ಹಾಲಿ ಅಧ್ಯಕ್ಷ ಬೈಡನ್. ವಾಷಿಂಗ್ಟನ್ ಪೋಸ್ಟ್ ಮತ್ತು ಎಬಿಸಿ ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆಯ ವರದಿ ಟ್ರಂಪ್ ಬೆಂಬಲಿಗರ ಹುರುಪು ಮತ್ತಷ್ಟು ಹೆಚ್ಚಿಸಿದ್ದರೆ, ಇದೀಗ ಜೋ ಬೈಡನ್ ಪಾಳಯದಲ್ಲಿ ಈ ಸಮೀಕ್ಷೆ ಸಂಚಲನಕ್ಕೆ ಕಾರಣವಾಗಿದೆ. ಹಾಗಾದರೆ ಜೋ ಬೈಡನ್ ವಿರುದ್ಧ ಅಮೆರಿಕನ್ನರಿಗೆ ಕೋಪ ಏಕೆ?
ಡೊನಾಲ್ಡ್ ಟ್ರಂಪ್‌ಗೆ ಸ್ವಪಕ್ಷದಲ್ಲೇ ಪೈಪೋಟಿ!
ಇನ್ನು ನೇರಾ ನೇರ ಹಣಾಹಣಿಯಲ್ಲಿ ಟ್ರಂಪ್ & ಬೈಡನ್ 51-42 ಅಂಕ ಗಳಿಸಿದ್ದಾರೆ. ಜತೆಗೆ ಇತರೆ ರಿಪಬ್ಲಿಕನ್ ಸ್ಪರ್ಧಿಗಳಿಗಿಂತಲೂ ಟ್ರಂಪ್ ಮುನ್ನಡೆ ಪಡೆದಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಆಕಾಂಕ್ಷಿಗಳಾಗಿ ಭಾರತ ಮೂಲದವರೇ ಆದ ದಕ್ಷಿಣ ಕರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ & ಉದ್ಯಮಿ ವಿವೇಕ್ ರಾಮಸ್ವಾಮಿ ಮುನ್ನಡೆ ಪಡೆಯುತ್ತಿದ್ದಾರೆ ಅಂತಾ ಹೇಳಲಾಗಿದೆ. ಇದು ಟ್ರಂಪ್ ಅವರಿಗೆ ಟಿಕೆಟ್ ಪಡೆಯಲು ಸಾಕಷ್ಟು ಸವಾಲನ್ನು ಒಡ್ಡುತ್ತಿದೆ, ಆದರೆ ಚುನಾವಣೆಗೆ ನಿಂತರೆ ಟ್ರಂಪ್ ಪಕ್ಕಾ ಗೆಲ್ತಾರೆ ಎನ್ನುತ್ತಿವೆ ಸಮೀಕ್ಷೆಗಳು.
ಈ ಮೂಲಕ ಭಾರತ ಮೂಲದ ಆಕಾಂಕ್ಷಿಗಳು ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಆಗುವುದನ್ನು ತಡೆಯಲು ಭಾರಿ ಪೈಪೋಟಿ ಕೊಡುತ್ತಿದ್ದಾರೆ. ಈ ಚುನಾವಣೆಯು ಟ್ರಂಪ್ ಅವರಿಗೆ ಸುಲಭವಾಗಿ ಇಲ್ಲ. ಆದರೂ ಬೈಡನ್ ವಿರುದ್ಧ ಗೆಲ್ಲುವ ಮುನ್ಸೂಚನೆ ನೀಡಿದ್ದಾರೆ. ಅಲ್ಲದೆ ಟ್ರಂಪ್ ಪರ ಅವರ ದೊಡ್ಡ ಬೆಂಬಲಿಗ ಪಡೆ ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಹೀಗಾಗಿ ಎಲ್ಲವೂ ಪರಿಣಾಮ ಬೀರುತ್ತಿದೆ. ಹಾಗೇ ಜೋ ಬೈಡನ್ ಆಡಳಿತದ ವಿರುದ್ಧ ಜನರ ಮುನಿಸು ಇದೆ ಎಂದು ಸಮೀಕ್ಷೆ ಸೂಕ್ಷ್ಮವಾಗಿ ತಿಳಿಸುತ್ತಿದೆ.
ಬೈಡನ್ ವಿರುದ್ಧ ಪ್ರಜೆಗಳ ಬೇಸರ?
ಇನ್ನು ಜೋ ಬೈಡನ್ ಆಡಳಿತ ಅವಧಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಸಮೀಕ್ಷೆಯು ಹೇಳಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಜನ ಬೈಡನ್ ಆಡಳಿತದ ವಿರುದ್ಧವೇ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜೋ ಬೈಡನ್ ವಯಸ್ಸಿನ ಪ್ರಶ್ನೆ ಕೂಡ ಈ ಸಮೀಕ್ಷೆಯಲ್ಲಿ ಪ್ರಸ್ತಾಪವಾಗಿದೆ. ಬೈಡನ್ ಅವರಿಗೆ ವಯಸ್ಸಾಗಿದೆ ಎಂದು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಮುಕ್ಕಾಲು ಭಾಗ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬೈಡನ್ ಗೆಲ್ಲಲು ಈ ಬಾರಿ ಸಾಕಷ್ಟು ಸವಾಲು ಎದುರಾಗಿದ್ದು, ಡೊನಾಲ್ಡ್ ಟ್ರಂಪ್ ಇದನ್ನೇ ತಮ್ಮ ಗೆಲುವಿಗೆ ದಾಳ ಮಾಡಿಕೊಳ್ಳುತ್ತಿದ್ದಾರೆ.

ಜೈಲಿಗೆ ಹೋದರೆ ಕಥೆ ಏನು?
ಮತ್ತೊಂದು ಕಡೆಗೆ ಟ್ರಂಪ್ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣ ಅವರ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋದರೆ ಪರಿಸ್ಥಿತಿ ಏನು? ಅಂತಾ ಫ್ಯಾನ್ಸ್ ಚಿಂತೆ ಮಾಡ್ತಿದ್ದಾರೆ. ಆದರೆ ಅಮೆರಿಕ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದ್ರೂ ಮತ್ತೊಮ್ಮೆ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗಲಾರದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯ ನಿರ್ವಹಿಸಲು ಕೂಡ ಅಮೆರಿಕದ ಕಾನೂನು ಅನುಮತಿ ನೀಡುತ್ತದೆ. ಹೀಗಾಗಿ ಟ್ರಂಪ್ ವಿರುದ್ಧ ಇರುವ ಪ್ರಕರಣಗಳು ಅವರ ಚುನಾವಣೆ ಗೆಲುವಿಗೆ ಸಮಸ್ಯೆ ಮಾಡಲ್ಲ.
ರಷ್ಯಾ & ಉಕ್ರೇನ್ ಯುದ್ಧದ ಭೀತಿ
ಇಡೀ ಜಗತ್ತನ್ನು ರಷ್ಯಾ & ಉಕ್ರೇನ್ ಯುದ್ಧದ ಭೀತಿ ಕಾಡುತ್ತಿದ್ದು, ಇದೀಗ ಅಮೆರಿಕದಲ್ಲಿ ಯಾರು ಗೆಲ್ಲುತ್ತಾರೆ? ಎಂಬುದರ ಮೇಲೆ ಭವಿಷ್ಯ ನಿರ್ಧಾರ ಆಗಲಿದೆ. ಟ್ರಂಪ್ ಗೆಲುವಿಗಾಗಿ ಕೆಲವರು ಕಾಯುತ್ತಿದ್ದರೆ, ಬೈಡನ್ ಸರ್ಕಾರವೇ ಉಳಿಯಲಿ ಅಂತಾ ಇನ್ನೂ ಕೆಲವರು ಈ ಸಂದರ್ಭದಲ್ಲಿ ಯತ್ನಿಸುತ್ತಿದ್ದಾರೆ. ಆದರೆ 2020ರ ಪರಿಸ್ಥಿತಿ ಮಾತ್ರ ಮರುಕಳಿಸಬಾರದು, ಅಂತಾ ಇಡೀ ಅಮೆರಿಕ ಬೇಡುತ್ತಿದೆ. ಏಕೆಂದ್ರೆ 2020ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಮರ್ಯಾದೆ ಹರಾಜು ಹಾಕಿತ್ತು. 2024ರಲ್ಲಿ ಅದು ಮರುಕಳಿಸದ ರೀತಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ.

ಟ್ರಂಪ್ ಗೆಲ್ತಾರಾ? ಬೈಡನ್ ಗೆಲ್ತಾರಾ?
2020ರಲ್ಲಿ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಾರ್ಟಿ ನಾಯಕರು ಒಗ್ಗಟ್ಟಿನಿಂದಲೆ ಅಖಾಡಕ್ಕೆ ಇಳಿದು ಹೋರಾಡಿದ್ದರು. ಹೀಗಾಗಿ ಜೋ ಬೈಡನ್ ಅವರ ಗೆಲುವು ಸುಲಭವಾಗಿತ್ತು. ಆದ್ರೆ ಈ ಬಾರಿ ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಸಮೀಕ್ಷೆಗಳಲ್ಲಿ ಅಮೆರಿಕ ಪ್ರಜೆಗಳು ಹಾಲಿ ಸರ್ಕಾರ ಹಾಗೂ ಬೈಡನ್ ಆಡಳಿತದ ಬಗ್ಗೆ ಬೇಸರ ಹೊಂದಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ಟ್ರಂಪ್ ಗೆಲ್ತಾರಾ? ಬೈಡನ್ ಗೆಲ್ತಾರಾ? ಅಂತಾ ಚರ್ಚೆ ಕೂಡ ಜೋರಾಗಿದೆ.
ಒಟ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು, ಇಡೀ ಜಗತ್ತು ಕಂಟ್ರೋಲ್ ಮಾಡಲು ಯತ್ನಿಸುವ ಅಮೆರಿಕಗೆ ಯಾರು ಬಾಸ್? ಅನ್ನೋದು ಇನ್ನೊಂದು ವರ್ಷದಲ್ಲಿ ಗೊತ್ತಾಗಲಿದೆ. ಅತ್ತ ಮತ್ತೆ ಗೆಲ್ಲಬೇಕು ಅನ್ನೋ ಹಂಬಲ ಡೊನಾಲ್ಡ್ ಟ್ರಂಪ್ ಅವರಿಗೆ, ಇನ್ನು ಅಧಿಕಾರ ಉಳಿಸಿಕೊಳ್ಳಬೇಕು ಅನ್ನೋ ಹಠ ಜೋ ಬೈಡನ್ ಅವರಿಗೆ. ಈ ಮಧ್ಯೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣ ಮಾತ್ರ ಭಾರಿ ಜಿದ್ದಿನಿಂದ ಕೂಡಿದೆ.












Click it and Unblock the Notifications