ಅಮೆರಿಕದ ಮಾಜಿ ಅಧ್ಯಕ್ಷರಿಗೆ ಜೈಲು ಶಿಕ್ಷೆ? ಹೇಗಿದೆ ಟ್ರಂಪ್ ಪರಿಸ್ಥಿತಿ?
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಸಂಕಷ್ಟದ ಸುಳಿಗೆ ಸಿಲುಕಿ ನಲುಗಿದ್ದಾರೆ. ಡೊನಾಲ್ಡ್ ಟ್ರಂಪ್ ಒಂದಾದ ನಂತರ ಒಂದು ಕೇಸ್‌ನಲ್ಲಿ ಸಿಲುಕಿ ಬೆಚ್ಚಿಬಿದ್ದಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಟ್ರಂಪ್ ಜೈಲು ಸೇರುತ್ತಾರಾ? ಎಂಬ ಭಯ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಈಗ ಆ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.
ಹೌದು 2020ರ ಜಾರ್ಜಿಯಾ ರಾಜ್ಯದ ಚುನಾವಣೆ ಅಕ್ರಮ ಆರೋಪ ಟ್ರಂಪ್ ಅವರ ಭವಿಷ್ಯ ಮಂಕಾಗಿಸಿದೆ. ಜಾರ್ಜಿಯಾ ಎಲೆಕ್ಷನ್ ರಿಸಲ್ಟ್ ಸಂಬಂಧಿಸಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿತ್ತು. ಫಲಿತಾಂಶ ಕಾನೂನು ಬಾಹೀರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿ ಜೊತೆ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅದ್ರಲ್ಲೂ ಟ್ರಂಪ್ ಜೈಲು ಸೇರುತ್ತಾರಾ? ಎಂಬ ಪ್ರಶ್ನೆ ಕಾಡುವಾಗಲೇ ಟ್ರಂಪ್ ಅಭಿಮಾನಿಗಳು ಹಾಗೂ ವಿರೋಧಿಗಳಿಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

ಟ್ರಂಪ್ ಶರಣಾಗಲು ಸಕಲ ಸಿದ್ಧತೆ!
ಪ್ರಕರಣ ಸಂಬಂಧ ತಾವೇ ಅಧಿಕಾರಿಗಳ ಎದುರು ಶರಣಾಗುವುದಾಗಿ ಟ್ರಂಪ್ ಹೇಳಿದ್ದಾರೆ. 'ನಾನು ಗುರುವಾರ ಜಾರ್ಜಿಯಾದ ಅಟ್ಲಾಂಟಾಗೆ ಹೋಗುತ್ತೇನೆ' ಎಂದು ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಇನ್ನು ಟ್ರಂಪ್ ಶರಣಾದಾಗ ಮುಖ್ಯ ಕೌಂಟಿ ಜೈಲಿನ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಬಂದ್ ಆಗಲಿದ್ದು, ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಹೀಗೆ ಟ್ರಂಪ್ ಶರಣಾಗತಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗಾಗಲೇ ಇದೇ ಆರೋಪ ಸಂಬಂಧ ಕೋರ್ಟ್ ಟ್ರಂಪ್‌ಗೆ 2,00,000 ಡಾಲರ್ ಬಾಂಡ್ ನಿಗದಿಪಡಿಸಿ ಆದೇಶ ನೀಡಿತ್ತು.
ಏನಿದು ಟ್ರಂಪ್ ಪ್ರಕರಣದ ಹಿನ್ನೆಲೆ?
ಅಮೆರಿಕ ಚುನಾವಣೆ ಇತಿಹಾಸದಲ್ಲೇ 2020 ಎಂದಿಗೂ ಮರೆಯಾಗಲ್ಲ ಅಂತಾ ಹೇಳಬಹುದು. ಯಾಕಂದ್ರೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಜಗತ್ತಿನಲ್ಲಿ ಸದ್ದು ಮಾಡಿತ್ತು. ಇದಕ್ಕೆ ಪ್ರಮುಖ ಕಾರಣ ಟ್ರಂಪ್ & ಟ್ರಂಪ್ ಬೆಂಬಲಿಗರು ಎಂಬ ಆರೋಪ ಇದೆ. ಇದೀಗ ಇದೇ 2020ರ ಅಧ್ಯಕ್ಷೀಯ ಚುನಾವಣೆ ವಿಚಾರ ಟ್ರಂಪ್‌ಗೆ ಆಘಾತ ನೀಡುತ್ತಿದೆ. 2020ರ ಚುನಾವಣೆಯ ವೇಳೆ ಜಾರ್ಜಿಯಾ ಫಲಿತಾಂಶ ಬದಲಿಸಲು ಯತ್ನಿಸಿದ ಆರೋಪ & ವಂಚನೆ ಸಂಬಂಧಿತ ಕೇಸ್‌ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕ ಕೋರ್ಟ್ ದೋಷಾರೋಪ ಹೊರಿಸಿದೆ.

ಜೈಲಿಗೆ ಹೋದರೂ ಟ್ರಂಪ್ ಗೆಲ್ಲಬಹುದು!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದೇ ಬಿಡುತ್ತೆ. ಚುನಾವಣೆ ಹೀಗೆ ಹತ್ತಿರದಲ್ಲೇ ಇರುವಾಗ ಪ್ರಶ್ನೆಯೊಂದು ಕಾಡುತ್ತಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಆಗ ಮುಂದೇನು?ಅಂತಾ. ಅದಕ್ಕೂ ಉತ್ತರ ಇದ್ದು ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕ ಕಾನೂನು ಅನುಮತಿ ನೀಡುತ್ತದೆ.
ಒಟ್ನಲ್ಲಿ ತಾವೇ ಅಧಿಕಾರಿಗಳ ಎದುರು ಶರಣಾಗುವ ಬಗ್ಗೆ ಟ್ರಂಪ್ ಮಾಹಿತಿ ನೀಡಿರುವುದು ಸಂಚಲನ ಸೃಷ್ಟಿಸಿದೆ. ಅತ್ತ ಡೊನಾಲ್ಡ್ ಟ್ರಂಪ್ ಈ ಬಾರಿ ಗೆಲ್ಲಬೇಕು ಅಂತಾ ಅಮೆರಿಕದ ಮಾಜಿ ಅಧ್ಯಕ್ಷರ ಬೆಂಬಲಿಗರು ಹೋರಾಡುತ್ತಿದ್ದಾರೆ. ಅದೇ ಸಮಯಕ್ಕೆ ಟ್ರಂಪ್‌ಗೆ ಒಂದಾದ ನಂತರ ಒಂದು ಕೇಸ್ ತಲೆನೋವು ತರಿಸುತ್ತಿದೆ. ಇದನ್ನೆಲ್ಲಾ ಟ್ರಂಪ್ ಯಾವ ರೀತಿಯಾಗಿ ಎದುರಿಸುತ್ತಾರೆ? 2024ರ ಚುನಾವಣೆ ಗೆಲುವಿಗೆ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಯಾವ ರೀತಿ ರಣತಂತ್ರ ರೂಪಿಸಿದ್ದಾರೆ? ಅನ್ನೋದನ್ನ ಕಾದು ನೋಡಬೇಕು. ಈ ಮೂಲಕ 2024ರ ಅಮೆರಿಕ ಚುನಾವಣೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯೋದು ಗ್ಯಾರಂಟಿ.












Click it and Unblock the Notifications