World War: ಸರ್ವಾಧಿಕಾರಿಗೆ ಎಚ್ಚರಿಕೆ ನೀಡಿದ ದೊಡ್ಡಣ್ಣ ಅಮೆರಿಕ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾಗೆ ಭೇಟಿ ನೀಡಿ ಬಂದಿದ್ದೇ ತಡ, ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಕಿಮ್ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿದೆ. ಮೊದಲೇ ಅಣ್ವಸ್ತ್ರ ಇಟ್ಟುಕೊಂಡಿರುವ ಕಿಮ್ ಮುಂದೆ ಏನೇನು ಅನಾಹುತ ಮಾಡುತ್ತಾನೋ ಅಂತಾ ಹೆದರಿದ್ದಾರೆ. ಇದೇ ಸಂದರ್ಭದಲ್ಲಿ ದೊಡ್ಡಣ್ಣ ಅಮೆರಿಕ ಸರ್ವಾಧಿಕಾರಿಯ ವಿರುದ್ಧ ರೊಚ್ಚಿಗೆದ್ದಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಹೇಗಿದೆ ಎಂದರೆ, ಈ ಪ್ರಪಂಚ ಈಗಾಗಲೇ 2 ಭಾಗವಾಗಿ ಹೋಗಿದೆ. ಕೆಲವು ದೇಶಗಳು ರಷ್ಯಾ ಪರ ನಿಂತರೆ, ಹಲವು ದೇಶಗಳು ಈಗ ಅಮೆರಿಕ ಜೊತೆ ಸೇರಿವೆ. ಹೀಗಾಗಿ ಎರಡೂ ಬಣಗಳ ನಡುವೆ ಕಿತ್ತಾಟ ಜೋರಾಗಿದ್ದು, ಈ ಸಂದರ್ಭದಲ್ಲೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಂಕಿ ಇಟ್ಟಿದ್ದಾನೆ. ರಷ್ಯಾಗೆ ವಿಸಿಟ್ ಕೊಟ್ಟು, ಪುಟಿನ್ ಭೇಟಿ ಮಾಡಿದ ಕಿಮ್ ದಕ್ಷಿಣ ಕೊರಿಯಾ & ಜಪಾನ್ ಸೇರಿದಂತೆ ಆತನ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾನೆ. ಇದಕ್ಕೆ ಅಮೆರಿಕ ಮತ್ತು ಮಿತ್ರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?

ದೊಡ್ಡಣ್ಣನ ಆವಾಜ್ ಹೇಗಿತ್ತು?
ಹಿಂಗೆಲ್ಲ ಕಿಮ್ ಜಾಂಗ್ ಉನ್ ಆಟ ಆಡುತ್ತಿರುವುದು ಅಮೆರಿಕಗೆ ಒಂದಿಷ್ಟೂ ಇಷ್ಟವಿಲ್ಲ. ಅದಕ್ಕಿಂತ ಹೆಚ್ಚಾಗಿ ದಕ್ಷಿಣ ಕೊರಿಯಾಗೆ ಕೈಕಾಲು ನಡುಗುತ್ತಿವೆ. ಇದೇ ಸಮಯಕ್ಕೆ ಕಿಮ್ ವಿರುದ್ಧ ಅಮೆರಿಕ ಎಚ್ಚರಿಕೆ ಸಂದೇಶ ಕಳುಹಿಸಿದೆ. ಅಮೆರಿಕ ರಾಷ್ಟ್ರೀಯ ಭದ್ರತ ಮಂಡಳಿ ವಕ್ತಾರ ಜಾನ್ ಕಿರ್ಬಿ, ರಷ್ಯಾಗೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಕಿಮ್ ಕಡೆಯಿಂದ ಪೂರೈಕೆ ಆಗಿದ್ದೇ ನಿಜವಾದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತೆ ಎಂದಿದ್ದಾರೆ. ಹೀಗಾಗಿ ಕಿಮ್ ವಿರುದ್ಧ ಮತ್ತೆ ಅಮೆರಿಕ ಆಕ್ರೋಶ ಹೊರಹಾಕಿದೆ.
ದಕ್ಷಿಣ ಕೊರಿಯಾಗೆ ಭಯ ಏಕೆ?
ಅತ್ತ ಅಮೆರಿಕ ಎಚ್ಚರಿಕೆ ನಡುವೆ ದಕ್ಷಿಣ ಕೊರಿಯಾ ಕೂಡ ತನ್ನ ಆತಂಕ ಹೊರಹಾಕಿದೆ. ಅಣ್ವಸ್ತ್ರ ಸಜ್ಜಿತ ದೇಶಗಳ ನಾಯಕರ ನಡುವಿನ ಚರ್ಚೆ ಅಮೆರಿಕ ಜೊತೆ ಸಂಘರ್ಷ ಹೆಚ್ಚಿಸುವ ಸೂಚನೆ ಎನ್ನಲಾಗುತ್ತಿದೆ. ಈ ಮಧ್ಯೆ ಶಸ್ತ್ರಾಸ್ತ್ರಗಳ ಪೂರೈಕೆಗೆ ಪ್ರತಿಯಾಗಿ ಉತ್ತರ ಕೊರಿಯಾ ಸೇನಾ ಕಣ್ಣಾವಲು ಸ್ಯಾಟಲೈಟ್ ಸೇರಿ ಆಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನ ಪಡೆಯುವ ಸಾಧ್ಯತೆ ಇದೆ ಎಂದು ದಕ್ಷಿಣ ಕೊರಿಯಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿಮ್ ಸೂ ಸುಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾಗೆ ದಕ್ಷಿಣ ಕೊರಿಯಾ ಎಚ್ಚರಿಕೆ
ಈಗಾಗಲೇ ಕಿಮ್ ಜಾಂಗ್ ಉನ್ ಬಳಿ ಸಾಕಷ್ಟು ಖಂಡಾಂತರ ಕ್ಷಿಪಣಿಗಳು ಇವೆ. ಆದರೂ ಕಿಮ್ ಜಾಂಗ್ ಉನ್ ಮಿಲಿಟರಿ ಉಪಗ್ರಹ ಉಡಾವಣೆಗೆ ಯತ್ನಿಸುತ್ತಿದ್ದಾನೆ. ಈಗ ರಷ್ಯಾದ ಕಡೆಯಿಂದ ಅದಕ್ಕೆ ಸಹಕಾರ ಸಿಕ್ಕರೆ, ಜಪಾನ್ & ದಕ್ಷಿಣ ಕೊರಿಯಾಗೆ ಇದರಿಂದ ದೊಡ್ಡ ಸಮಸ್ಯೆ ಇದೆ ಎಂಬ ಭಯ ಶುರುವಾಗಿದೆ. ಹೀಗಾಗಿಯೇ ದಕ್ಷಿಣ ಕೊರಿಯಾ ಈಗ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಉತ್ತರ ಕೊರಿಯಾ ಜೊತೆಗಿನ ಸಂಬಂಧ ನಕಾರಾತ್ಮಕ ಪರಿಣಾಮವನ್ನ ಬೀರಲಿದೆ ಎಂಬ ಸತ್ಯವನ್ನು ರಷ್ಯಾ ಅರ್ಥ ಮಾಡಿಕೊಳ್ಳಲಿ ಎಂದಿದೆ ದಕ್ಷಿಣ ಕೊರಿಯಾ.
ಒಟ್ಟಾರೆ ಹೇಳುವುದಾದರೆ ಕಿಮ್ ಜಾಂಗ್ ಉನ್ ರಷ್ಯಾ ಭೇಟಿ ಈಗ ಉಕ್ರೇನ್ ಯುದ್ಧದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಕೂಡ ದೊಡ್ಡ ಪರಿಣಾಮ ಬೀರಿದೆ. ಮುಂದೆ ಪರಿಸ್ಥಿತಿ ಇನ್ನು ಕಠಿಣವಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಕೂಡ ರೊಚ್ಚಿಗೆದ್ದು ವಾರ್ನಿಂಗ್ ಕೊಟ್ಟಿದ್ದು ಇದಕ್ಕೆ ಕಿಮ್ ಜಾಂಗ್ ಉನ್ ಯಾವ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರ ನೀಡುತ್ತಾನೆ ಅಂತಾ ಕಾದು ನೋಡಬೇಕಿದೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ, ದಕ್ಷಿಣ ಚೀನಾ ಸಮುದ್ರ ಪ್ರದೇಶ ಈಗ ಮತ್ತೊಮ್ಮೆ ಸೂಕ್ಷ್ಮ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಅಮೆರಿಕ ತನ್ನ ಸ್ನೇಹಿತರಾದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಮತ್ತಷ್ಟು ಭದ್ರತೆ ಒದಗಿಸುವ ಸಾಧ್ಯತೆ ಇದೆ. ಅತ್ತ ತೈವಾನ್ ಕೂಡ ಅಮೆರಿಕದ ಪರ ನಿಂತಿದ್ದು ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ದಕ್ಷಿಣ ಚೀನಾ ಸಮುದ್ರ ಭಾಗಕ್ಕೂ ಹಬ್ಲಿದೆಯಾ? ಕಾದು ನೋಡಬೇಕಿದೆ.












Click it and Unblock the Notifications