ಕೊರೊನಾ ವೈರಸ್: ಒಂದೇ ದಿನದಲ್ಲಿ ಸಾವಿನ ಮನೆ ಸೇರಿದ್ದು 100 ಮಂದಿ
ಬೀಜಿಂಗ್, ಫೆಬ್ರವರಿ.10: ಚೀನಾದಲ್ಲಿ ಕೊರೊನಾ ವೈರಸ್ ದಿನೇ ದಿನೆ ಅಟ್ಟಹಾಸ ಮೆರೆಯುತ್ತಿದ್ದು, ಸಾವಿನ ಸಂಖ್ಯೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಮಾರಕ ರೋಗದ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಯಾಣದ ಏರಿಕೆ ಕಂಡು ಬಂದಿದೆ.
ಭಾನುವಾರ ಒಂದೇ ದಿನ ಚೀನಾದಲ್ಲಿ ಕೊರೊನಾ ವೈರಸ್ ಗೆ 100 ಮಂದಿ ಪ್ರಾಣ ಬಿಟ್ಟಿರುವುದಾಗಿ ವರದಿಯಾಗಿದೆ. ಇದರಿಂದ ಚೀನಾ ಒಂದರಲ್ಲೇ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 908ಕ್ಕೆ ಏರಿಕೆಯಾಗಿದೆ.
ಇನ್ನು, ಸೋಮವಾರದ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಕೊರೊನಾ ವೈರಸ್ ಗೆ 908 ಮಂದಿ ಪ್ರಾಣ ಬಿಟ್ಟಿದ್ದರೆ, 40,171 ಮಂದಿಯಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

ಚೀನಾ ಹೊರತಾಗಿ ಹೊರದೇಶಗಳಲ್ಲಿ 300 ಪ್ರಕರಣ
ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 40 ಸಾವಿರದ ಗಡಿ ದಾಟಿದೆ. ಮಾರಕ ಸೋಂಕು ಚೀನಾಗಷ್ಟೇ ಸೀಮಿತವಾಗದೇ ಜಾಗತಿಕ ಸೋಂಕಾಗಿ ಹರಡುತ್ತಿದ್ದು, 25 ದೇಶಗಳಲ್ಲಿ ಇದುವರೆಗೂ 300ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಗೆ ವಿದೇಶಗಳಲ್ಲಿ ಇಬ್ಬರು ಬಲಿ
ಕೊರೊನಾ ವೈರಸ್ ಗೆ ಚೀನಾ ಹೊರತಾಗಿ ವಿದೇಶಗಳಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಹಾಂಗ್ ಕಾಂಗ್ ನಲ್ಲಿ ಒಬ್ಬರು ಹಾಗೂ ಪಿಲಿಫೈನ್ಸ್ ನಲ್ಲಿ ಒಬ್ಬರು ಸೇರಿದಂತೆ ಇಬ್ಬರು ಮಾರಕ ರೋಗಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಭಾನುವಾರದ ಕೊರೊನಾ ವೈರಸ್ ಅಂಕಿ-ಅಂಶಗಳು
ಫೆಬ್ರವರಿ.09ರ ಭಾನುವಾರ ಒಂದೇ ದಿನ ಚೀನಾದಲ್ಲಿ 100 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 2,618 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 336 ಸೋಂಕಿತರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ.

ಚೀನಾದ ರಾಷ್ಟ್ರೀಯ ಹೆಲ್ತ್ ಕಮಿಶನ್ ಅಂಕಿ-ಅಂಶ
ಚೀನಾದಲ್ಲಿ ಸೋಂಕಿತರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದ್ದು, 6,484 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, 23,589 ಜನರಿಗೆ ಸೋಂಕು ತಗಲಿರುವ ಬಗ್ಗೆ ನ್ಯಾಷನಲ್ ಹೆಲ್ತ್ ಕಮಿಷನ್ ತಿಳಿಸಿದೆ. 3,99,487 ಜನರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, 29,307 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದಂತೆ 1,87,518 ಜನರಿಗೆ ವೈದ್ಯಕೀಯ ಪರೀಕ್ಷೆಯನ್ನು ಮುಂದುವರಿಸಲಾಗಿದೆ ಎಂದು ಹೆಲ್ತ್ ಕಮಿಷನ್ ತಿಳಿಸಿದೆ.












Click it and Unblock the Notifications