ಕೊರೊನಾ ಸತ್ಯ ಹೊರಬರುವ ಹಾಗಿಲ್ಲ: ಕಟ್ಟಪ್ಪಣೆ ಮಾಡಿದ ಚೀನಾ.!
ಅಮೇರಿಕಾ, ಇಟಲಿ, ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ವಿಶ್ವದಾದ್ಯಂತ ನೋವೆಲ್ ಕೊರೊನಾ ವೈರಸ್ ನಿಂದಾಗಿ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ.
ಇತ್ತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೆ, ಅತ್ತ ನೋವೆಲ್ ಕೊರೊನಾ ವೈರಸ್ ಜನ್ಮ ರಹಸ್ಯದ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.
ಡೆಡ್ಲಿ ಕೊರೊನಾ ವೈರಸ್ ಸೋರಿಕೆ ಆಗಿದ್ದು ಎಲ್ಲಿಂದ.? ಕೊರೊನಾ ವೈರಸ್ ಹುಟ್ಟಿದ್ದು ಚೀನಾ ಲ್ಯಾಬ್ ನಲ್ಲಾ.? ಇದು ಚೀನಾ ಸೃಷ್ಟಿಸಿದ ಜೈವಿಕ ಅಸ್ತ್ರವೇ.? ಎಂಬ ಹಲವು ಪ್ರಶ್ನೆಗಳು ಇದೀಗ ಎಲ್ಲರ ತಲೆಯಲ್ಲೂ ಕೊರೆಯುತ್ತಿವೆ. ಇಡೀ ಜಗತ್ತನ್ನೇ ಕಾಡುತ್ತಿರುವ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಸಿಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಚೀನಾ ಅದಾಗಲೇ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಕೊರೊನಾ ವೈರಸ್ ಹರಡುವಿಕೆ ವಿಚಾರವನ್ನು ಮೊದಲು ಮುಚ್ಚಿಟ್ಟು, ನಂತರ ಸುಳ್ಳು ಹೇಳಿ ವಿಶ್ವಕ್ಕೆ ಮಹಾ ಮೋಸ ಮಾಡಿದ ಚೀನಾ ಇದೀಗ 'ಕೊರೊನಾ ಜನ್ಮ ರಹಸ್ಯ' ಬಹಿರಂಗವಾಗದಂತೆ ಕಟ್ಟೆಚ್ಚರ ವಹಿಸುತ್ತಿದೆ. ಇದಕ್ಕಾಗಿ ಸಕಲ ಕ್ರಮಗಳನ್ನೂ ಕೈಗೊಂಡಿದೆ.
ನೋವೆಲ್ ಕೊರೊನಾ ವೈರಸ್ ಮೂಲದ ಬಗ್ಗೆ ಶೈಕ್ಷಣಿಕ ಸಂಶೋಧನೆಯ ಪ್ರಕಟನೆಗೆ ಚೀನಾ ಸರ್ಕಾರ ನಿರ್ಬಂಧ ಹೇರಿದೆ. ಚೀನಾ ಸರ್ಕಾರದ ನಿರ್ದೇಶನದಂತೆ ಈಗಾಗಲೇ ಆನ್ ಲೈನ್ ನಲ್ಲಿ ಪ್ರಕಟಗೊಂಡಿದ್ದ ಎರಡು ಅಧ್ಯಯನಗಳನ್ನು ವೆಬ್ ನಿಂದ ತೆಗೆದು ಹಾಕಲಾಗಿದೆ.

ಸರ್ಕಾರ ಪರಿಶೀಲನೆ ಕಡ್ಡಾಯ
ಚೀನಾ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಕೋವಿಡ್-19 ಕುರಿತಾದ ಎಲ್ಲಾ ಶೈಕ್ಷಣಿಕ ಅಧ್ಯಯನಗಳು ಪ್ರಕಟಗೊಳ್ಳುವ ಮುನ್ನ ಕಡ್ಡಾಯವಾಗಿ ಸರ್ಕಾರದ ಪರಿಶೀಲನೆಗೆ ಒಳಪಡಬೇಕು. ಕೇಂದ್ರ ಸರ್ಕಾರಿ ಅಧಿಕಾರಿಗಳು ಅನುಮೋದನೆ ನೀಡದ ಬಳಿಕವಷ್ಟೇ, ಅಧ್ಯಯನಗಳು ಪ್ರಕಟಗೊಳ್ಳಲಿದೆ.

ಫೆಬ್ರವರಿಯಲ್ಲಿ ನಿರ್ಬಂಧ ಇರಲಿಲ್ಲ
ಅಧ್ಯಯನಗಳ ಪ್ರಕಟನೆಗೆ ಚೀನಾ ಸರ್ಕಾರ ಫೆಬ್ರವರಿಯಲ್ಲಿ ಯಾವುದೇ ನಿರ್ಬಂಧ ಹೇರಿರಲಿಲ್ಲ. ಆದ್ರೆ, ಮಾರ್ಚ್ ತಿಂಗಳ ಬಳಿಕ ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗಿ'ನ ರೂಪ ಪಡೆದ ಮೇಲೆ, ನೋವೆಲ್ ಕೊರೊನಾ ವೈರಸ್ 'ಮೂಲ'ದ ಬಗ್ಗೆ ಇರುವ ಎಲ್ಲಾ ಮಾಹಿತಿಯನ್ನು ಸರ್ಕಾರ ಹೆಚ್ಚು ಪರಿಶೀಲನೆಗೆ ಒಳಪಡಿಸಿದೆ.

ಬಿಗಿ ಹಿಡಿತ ಸಾಧಿಸಲು ಮುಂದಾದ ಚೀನಾ
ಅಸಲಿಗೆ, ಜನವರಿ ತಿಂಗಳಿನಿಂದಲೇ ಚೀನಾದ ಹಲವು ಸಂಶೋಧಕರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಕೋವಿಡ್-19 ಕುರಿತು ಸರಣಿ ಅಧ್ಯಯನಗಳನ್ನು ಪ್ರಕಟಿಸಿದ್ದಾರೆ. ಕೊರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡಲು ಶುರುವಾಗಿದ್ದು ಹೇಗೆ ಎಂಬುದರ ಬಗ್ಗೆಯೂ ಅಧ್ಯಯನಗಳು ಪಬ್ಲಿಶ್ ಆದ್ಮೇಲೆ ಚೀನಾ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದವು. ಇದರಿಂದ ಚೀನಾ ಸರ್ಕಾರ ವಿವಾದದ ಕೇಂದ್ರಬಿಂದುವಾಯಿತು. ಪರಿಣಾಮ, ಕೋವಿಡ್-19 ಸಂಶೋಧನೆಗಳ ಮೇಲೆ ಬಿಗಿ ಹಿಡಿತ ಸಾಧಿಸಲು ಚೀನಾ ಸರ್ಕಾರ ಇದೀಗ ಮುಂದಾಗಿದೆ.

ಆತಂಕಕಾರಿ ಬೆಳವಣಿಗೆ
''ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗುತ್ತದೆ. ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಹುಟ್ಟಿಲ್ಲ ಎಂಬುದನ್ನು ಬಿಂಬಿಸಿಕೊಳ್ಳುವುದಕ್ಕೋ, ಏನೋ.. ಚೀನಾ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಹಾಗೇ, ಕೊರೊನಾ ವೈರಸ್ ಮೂಲದ ಬಗ್ಗೆ ಯಾವುದೇ ವಸ್ತುನಿಷ್ಟ ಅಧ್ಯಯನವನ್ನು ಅವರು ನಿಜವಾಗಿಯೂ ಸಹಿಸುವುದಿಲ್ಲ'' ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.

ಈಗ ಡಿಲೀಟ್ ಆಗಿವೆ
ಕೋವಿಡ್-19 ಕುರಿತ ಅಧ್ಯಯನಗಳನ್ನು ಪ್ರಕಟ ಮಾಡುವ ಮುನ್ನ ಪರಿಶೀಲನೆಗೆ ಒಳಪಡಿಸಲು ಚೀನಾ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಶಾಂಘೈನಲ್ಲಿರುವ ಫುಡಾನ್ ವಿಶ್ವವಿದ್ಯಾನಿಲಯ ಮತ್ತು ವುಹಾನ್ ನಲ್ಲಿರುವ ದಿ ಚೈನಾ ಯೂನಿವರ್ಸಿಟಿ ಆಫ್ ಜಿಯೋಸೈನ್ಸ್ ತಮ್ಮ ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸಿದ್ದವು. ಬಳಿಕ ಅದನ್ನು ಡಿಲೀಟ್ ಮಾಡಿವೆ.

ಹಲವು ಅನುಮಾನ ಇರುವುದು ಸತ್ಯ
ನೋವೆಲ್ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ವುಹಾನ್ ನ ಸೀ ಫುಡ್ ಮಾರುಕಟ್ಟೆಯಲ್ಲಿ.. ಅಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ತಗುಲಿದೆ ಎನ್ನಲಾದರೂ ನೋವೆಲ್ ಕೊರೊನಾ ವೈರಸ್ ಮೂಲದ ಬಗ್ಗೆ ಈಗಲೂ ಹಲವು ಅನುಮಾನಗಳು ವ್ಯಕ್ತವಾಗಿವೆ.

ವೈದ್ಯನ ದನಿ ಹತ್ತಿಕ್ಕಿದ ಚೀನಾ
ಅಷ್ಟಕ್ಕೂ, ಡಿಸೆಂಬರ್ 30 ರಂದೇ ನೋವೆಲ್ ಕೊರೊನಾ ವೈರಸ್ ಹರಡುತ್ತಿದೆ ಎಂದು ವುಹಾನ್ ಸೆಂಟ್ರಲ್ ಆಸ್ಪತ್ರೆಯ ವೈದ್ಯ ಡಾ.ಲೀ ವೆನ್ಲಿಯಾಂಗ್ ವಾರ್ನಿಂಗ್ ಕೊಟ್ಟಿದ್ದರು. ಆದ್ರೆ, ಇನ್ಮುಂದೆ ಇಂತಹ ''ಸುಳ್ಳು ಮಾಹಿತಿ'' ನೀಡಬಾರದು, ಒಂದು ವೇಳೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಡಾ.ಲೀ ವೆನ್ಲಿಯಾಂಗ್ ಗೆ ಎಚ್ಚರಿಕೆ ನೀಡಿದ್ದರು. ದುರಂತ ಅಂದ್ರೆ, ಅದೇ ಡಾ.ಲೀ ವೆನ್ಲಿಯಾಂಗ್ ಗೆ ಜನವರಿ 8 ರಂದು ಕೊರೊನಾ ವೈರಸ್ ಸೋಂಕು ತಗುಲಿತು. ಫೆಬ್ರವರಿ 7 ರಂದು ಕೋವಿಡ್-19 ನಿಂದಾಗಿ ಡಾ.ಲೀ ವೆನ್ಲಿಯಾಂಗ್ ಮೃತಪಟ್ಟರು. ಕೊರೊನಾ ವೈರಸ್ ಬಗ್ಗೆ ಡಾ.ಲೀ ವೆನ್ಲಿಯಾಂಗ್ ಎಚ್ಚರಿಸಿದಾಗಲೇ, ಅವರ ದನಿಯನ್ನು ಚೀನಾ ಸರ್ಕಾರ ಹತ್ತಿಕ್ಕದಿದ್ದಿದ್ದರೆ, ಬಹುಶಃ ಕೋವಿಡ್-19 'ಸಾಂಕ್ರಾಮಿಕ ಪಿಡುಗು' ಎಂಬ ಹಣೆ ಪಟ್ಟಿ ಹೊತ್ತಿಕೊಳ್ಳುತ್ತಿರಲಿಲ್ಲವೇನೋ.

ಮತ್ತೆ ಅದೇ ತಪ್ಪು
ಡಾ.ಲೀ ವೆನ್ಲಿಯಾಂಗ್ ವಿಷಯದಲ್ಲಿ ಅಂದು ಚೀನಾ ಸರ್ಕಾರ ಮಾಡಿದ ತಪ್ಪಿನಿಂದ ಇಂದು ಇಡೀ ವಿಶ್ವವೇ ಹೆಣಗಾಡುತ್ತಿದೆ. ಇದೀಗ ಅಧ್ಯಯನಗಳ ಮೇಲೂ ಬಿಗಿ ಹಿಡಿತ ಸಾಧಿಸಲು ಚೀನಾ ಮುಂದಾಗಿರುವುದರಿಂದ ವಿಶ್ವಕ್ಕೆ ಇನ್ನೂ ಏನೇನು ಅಪಾಯ ಕಾದಿದೆಯೋ.?!












Click it and Unblock the Notifications