ಚೀನಾದಲ್ಲಿ ಕೊರೊನಾ ಉಲ್ಬಣ: ಹೊಸ ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನೇ ಕೈಬಿಟ್ಟ ಚೀನಾ
ಬೀಜಿಂಗ್, ಡಿ. 25: ಕಳೆದ ಮೂರು ವರ್ಷಗಳಿಂದ ಚೀನಾದ ದೈನಂದಿನ ಕೊರೊನಾ ಪ್ರಕರಣಗಳ ಅಂಕಿಅಂಶಗಳನ್ನು ಪ್ರಕಟಿಸಿದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಇನ್ನು ಮುಂದೆ ಅಂತಹ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಭಾನುವಾರ ಹೇಳಿದೆ.
ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು, ದೇಶದ ಕೋವಿಡ್ ಪ್ರಕರಣಗಳ ಅಂಕಿಅಂಶಗಳನ್ನು ಪ್ರತಿದಿನವೂ ನೀಡುತ್ತಿತ್ತು, ಭಾನುವಾರದಿಂದ ಕೋವಿಡ್ ಅಪ್‌ಡೇಟ್ ಪ್ರಕಟಿಸುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದೆ.
"ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಭಾನುವಾರದಿಂದ ದೈನಂದಿನ ಕೋವಿಡ್ 19 ಪ್ರಕರಣದ ಡೇಟಾವನ್ನು ಪ್ರಕಟಿಸುವುದನ್ನು ನಿಲ್ಲಿಸುತ್ತದೆ. ಬದಲಾಗಿ, ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಅಧ್ಯಯನ ಮತ್ತು ಉಲ್ಲೇಖಕ್ಕಾಗಿ ಕೊರೊನಾ ಸಂಬಂಧಿತ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ " ಎಂದು ಎನ್‌ಎಚ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವೆಬ್‌ಸೈಟ್‌ನಲ್ಲಿ, ಶನಿವಾರದಂದು ಶುಕ್ರವಾರದ ಕೋವಿಡ್ ಪ್ರಕರಣದ ಅಂಕಿಅಂಶಗಳನ್ನು ನೀಡಿದೆ. ಇದರ ಪ್ರಕಾರ ಚೀನಾದಲ್ಲಿ 4,128 ಹೊಸ ಕೊರೊನಾ ಸೋಂಕುಗಳು ದೃಢಪಟ್ಟಿವೆ ಮತ್ತು ದೇಶದಲ್ಲಿ ಯಾವುದೇ ಹೊಸ ಕೋವಿಡ್ ಸಂಬಂಧಿತ ಸಾವು ವರದಿಯಾಗಿಲ್ಲ.
ಡಿಸೆಂಬರ್ 23 ರಂದು, 1,760 ರೋಗಿಗಳು ಗುಣ ಹೊಂದಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸೋಂಕಿತ ರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 28,865 ಜನರನ್ನು ವೈದ್ಯಕೀಯ ತಪಾಸಣೆ ಮಾಡಿಲಾಗಿದೆ.
ಈ ತಿಂಗಳ ಮೊದಲ ವಾರದಲ್ಲಿ ಏಕಾಏಕಿ ಕೋರೊನಾ ಮಾರ್ಗಸೂಚಿಗಳನ್ನು ತೆಗೆದುಹಾಕಿದ ಕೇವಲ 20 ದಿನಗಳಲ್ಲಿ ಚೀನಾದಲ್ಲಿ ಸುಮಾರು 250 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ಒಳಗಾಗಬಹುದು ಎಂದು ವರದಿಯಾಗಿತ್ತು. ಇದೆ ಬೆನ್ನಲ್ಲೇ ಎನ್‌ಎಚ್‌ಸಿ ಹೊಸ ಪ್ರಕರಣಗಳನ್ನು ವರದಿ ಮಾಡುವುದನ್ನು ನಿಲ್ಲಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸೋರಿಕೆಯಾದ ಸರ್ಕಾರಿ ದಾಖಲೆಗಳ ಪ್ರಕಾರ, ಡಿಸೆಂಬರ್ 1 ರಿಂದ 20 ರವರೆಗೆ 248 ಮಿಲಿಯನ್ ಜನರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ಚೀನಾದ ಜನಸಂಖ್ಯೆಯ ಶೇಕಡಾ 17.65 ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ.
ಇನ್ನು, ಬ್ರಿಟಿಷ್ ಮೂಲದ ಆರೋಗ್ಯ ದತ್ತಾಂಶ ಸಂಸ್ಥೆ ಏರ್‌ಫಿನಿಟಿ, ಚೀನಾದಲ್ಲಿ ಸೋಂಕುಗಳು ದಿನಕ್ಕೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವರದಿಯಾಗುತ್ತಿವೆ. ದಿನಕ್ಕೆ 5,000 ಕ್ಕಿಂತ ಹೆಚ್ಚು ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥ ಡಾ ಲೂಯಿಸ್ ಬ್ಲೇರ್, "ಚೀನಾವು ಸಾಮೂಹಿಕ ಪರೀಕ್ಷೆಯನ್ನು ನಿಲ್ಲಿಸಿದೆ. ಇನ್ನು ಮುಂದೆ ಲಕ್ಷಣರಹಿತ ಕೊರೊನಾ ಪ್ರಕರಣಗಳನ್ನು ವರದಿ ಮಾಡುತ್ತಿಲ್ಲ. ಹೀಗಾಗಿ ಈ ಅಧಿಕೃತ ಡೇಟಾವು ದೇಶಾದ್ಯಂತ ಏಕಾಏಕಿ ಕೊರೊನಾ ಸೋಂಕಿಗೆ ಒಳಗಾದವರ ನಿಜವಾದ ಮಾಹಿತಿಯಾಗಿರಲು ಸಾಧ್ಯವಿಲ್ಲ" ಎಂದಿದ್ದಾರೆ.












Click it and Unblock the Notifications