ಚೀನಾದಿಂದ ಅಮೆರಿಕಕ್ಕೆ ಹೈ ಸ್ಪೀಡ್ ರೈಲು!
ಬೀಜಿಂಗ್, ಮೇ 10: ಚೀನಾದ ತಂತ್ರಜ್ಞರು ಇದೀಗ ಅಮೆರಿಕಕ್ಕೆ ಹೈಸ್ಪೀಡ್ ರೈಲು ನಿರ್ಮಿಸಲು ಮುಂದಾಗಿದ್ದಾರೆ. 13 ಸಾವಿರ ಕಿ.ಮೀ ದೂರವನ್ನು ಎರಡು ದಿನಗಳಲ್ಲಿ ತಲುಪಲು ಹೈ ಸ್ಪೀಡ್ ರೈಲು ನಿರ್ಮಾಣಕ್ಕೆ ಚೀನಾ ಚಿಂತನೆ ನಡೆಸಿದೆ.
ಈ ಯೋಜನೆಗಾಗಿ ಶಾಂತಸಾಗರದದಲ್ಲಿ ಸುರಂಗ ನಿರ್ಮಾಣವಾಗಲಿದೆ. ರೈಲು ರಷ್ಯಾ, ಅಲಾಸ್ಕಾ ಮತ್ತು ಕೆನಡಾದ ಮೂಲಕ ಹಾದುಹೋಗಿ ಅಮೆರಿಕವನ್ನು ತಲುಪುವ ಯೋಜನೆಯನ್ನು ಚೀನಾ ರೂಪಿಸಿದೆ.
ಈ ಯೋಜನೆಗೆ ಚೀನಾ- ರಷ್ಯಾ ಪ್ಲಸ್ ಅಮೆರಿಕ ಲೈನ್ ಹೆಸರಿಟ್ಟಿದ್ದು,ಯೋಜನೆ ಪೂರ್ಣಗೊಂಡರೆ ವಿಶ್ವದಲ್ಲೇ ಅತಿ ಉದ್ದವಾದ ರೈಲು ಮಾರ್ಗವನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಲಿದೆ. ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡುವ ಬುಲೆಟ್ ರೈಲುಗಳು ಈ ಮಾರ್ಗದಲ್ಲಿ ಓಡಿಸಬಹುದಾಗಿದ್ದು, ಈಶಾನ್ಯ ಚೀನಾದ ಪ್ರಯಾಣಿಕರು ಎರಡು ದಿನದಲ್ಲಿ ಅಮೆರಿಕವನ್ನು ತಲುಪಬಹುದಾಗಿದೆ.

ರಶ್ಯಾ ಮತ್ತು ಅಲಸ್ಕಾ ನಡುವೆ ಇರುವ ಬೇರಿಂಗ್ ಜಲಸಂಧಿಯನ್ನು ದಾಟಲು ಶಾಂತ ಸಾಗರದ ಆಳದಲ್ಲಿ 200 ಕಿ.ಮೀ. ಸುರಂಗವನ್ನು ನಿರ್ಮಿಸುವ ಅಗತ್ಯವಿದ್ದು, ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಚೀನಾ ಮಾತುಕತೆ ನಡೆಸುತ್ತಿದೆ.ಸದ್ಯಕ್ಕೆ ವಿಶ್ವದಲ್ಲಿ ಚೀನಾದ ಟ್ರಾನ್ಸ್-ಸೈಬೀರಿಯನ್ ರೈಲ್ವೆ ಹಳಿ ಅತಿ ದೊಡ್ಡ ಹಳಿಯಾಗಿದ್ದು, ಈ ಹಳಿಗಿಂತ ಅಮೆರಿಕಕ್ಕೆ ಸಂಪರ್ಕಿಸುವ ಹಳಿ 3700ಕಿ.ಮೀ.ಗಳಷ್ಟು ದೂರದ್ದಾಗಿದೆ.
ಈ ಮಧ್ಯೆ ಚೀನಾ ಏಷ್ಯಾದ ದೇಶಗಳನ್ನು ಸಂಪರ್ಕಿಸಲು ಬುಲೆಟ್ ರೈಲು ಓಡಿಸಲು ಮುಂದಾಗಿದೆ. ಟ್ರಾನ್ಸ್-ಏಷ್ಯನ್ ಹೆಸರಿನ ಯೋಜನೆ ಇದಾಗಿದ್ದು ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಂ, ಕಾಂಬೋಡಿಯಾ, ಥೈಲೆಂಡ್, ಮಲೇಶ್ಯಾ ಮತ್ತು ಸಿಂಗಾಪುರದೊಡನೆ ಚೀನವನ್ನು ಸಂಪರ್ಕಿಸುವ ಕಾಮಗಾರಿ ಜೂನ್‌ನಲ್ಲಿ ಆರಂಭಗೊಳ್ಳಲಿದೆ.
ಚೀನಾ ಇದುವರೆಗೆ 11028 ಕಿ.ಮೀ ಉದ್ದದ ಹೈ ಸ್ಪೀಡ್ ರೈಲು ಜಾಲವನ್ನು ನಿರ್ಮಿಸಿದ್ದು, 12000 ಕಿ. ಮೀ ಉದ್ದದ ರೈಲು ಮಾರ್ಗಗಳ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.












Click it and Unblock the Notifications