ಯುರೋಪ್ ರಾಷ್ಟ್ರಗಳ ಕೆಂಡದಂತಹ ಕೋಪಕ್ಕೆ ಬೆಚ್ಚಿದ ಚೀನಾ?
ಬೀಜಿಂಗ್: ಯುರೋಪ್ ಒಕ್ಕೂಟದ ಕೆಂಗಣ್ಣಿಗೆ ತುತ್ತಾಗುವ ಭಯದಲ್ಲೇ ಚೀನಾ ತಮ್ಮ ರಾಯಭಾರಿ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಫ್ರಾನ್ಸ್ ದೇಶದಲ್ಲಿನ ಚೀನಾ ರಾಯಭಾರಿ ಯುರೋಪ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಪ್ರಶ್ನಿಸಿ ವಿವಾದದ ಕಿಡಿ ಹೊತ್ತಿಸಿದ ಕಾರಣ ಚೀನಾ ಉತ್ತರ ಕೊಟ್ಟಿದೆ. ಈ ಮೂಲಕ ಯುರೋಪ್ ಕೆಂಗಣ್ಣಿಗೆ ಗುರಿಯಾಗುವ ಸಂಕಷ್ಟದಿಂದ ಪಾರಾಗಿದೆ.
ಸೋವಿಯತ್ ಒಕ್ಕೂಟ ಒಡೆದ ನಂತರ ಉಗಮವಾದ ಎಲ್ಲಾ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ವಿದೇಶಾಂಗ ವಕ್ತಾರ ಮಾವೋ ನಿಂಗ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸೋವಿಯೆತ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ಹೇಳಿದೆ. ಕೆಲ ದಿನಗಳ ಹಿಂದೆ ಫ್ರಾನ್ಸ್ ದೇಶದಲ್ಲಿನ ಚೀನಾ ರಾಯಭಾರಿ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದರು. ಇದು ಚೀನಾ ಮತ್ತು ಯುರೋಪ್ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಜೊತೆಗೆ, ಭಾರಿ ವಿರೋಧ ಎದುರಿಸಿತ್ತು ಚೀನಾ.

ಚೀನಾ ರಾಯಭಾರಿ ಹೇಳಿದ್ದು ಏನು?
ಅಷ್ಟಕ್ಕೂ ಫ್ರಾನ್ಸ್‌ಗೆ ಚೀನಾ ರಾಯಭಾರಿ ನೀಡಿದ್ದ ಹೇಳಿಕೆ ಹೀಗಿತ್ತು, 'ಸೋವಿಯತ್ ಒಕ್ಕೂಟದ ಪತನದ ನಂತರ ಹೊರಹೊಮ್ಮಿದ ದೇಶಗಳು ಅಂತರರಾಷ್ಟ್ರೀಯ ಕಾನೂನಿನ ಅಡಿ ಪರಿಣಾಮಕಾರಿ ಸ್ಥಾನಮಾನ ಹೊಂದಿಲ್ಲ. ಅವರ ಸಾರ್ವಭೌಮ ರಾಷ್ಟ್ರಗಳ ಸ್ಥಾನಮಾನ ದೃಢೀಕರಿಸುವ ಅಂತರರಾಷ್ಟ್ರೀಯ ಒಪ್ಪಂದವಿಲ್ಲ' ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು ಚೀನಾ ರಾಯಭಾರಿ ಲು ಶಾಯ್. ಹೀಗಾಗಿ ತನ್ನ ರಾಯಭಾರಿಯಿಂದ ಆದ ತಪ್ಪನ್ನು ಸರಿಪಡಿಸಲು ಖುದ್ದು ಚೀನಾ ವಿದೇಶಾಂಗ ವಕ್ತಾರ ಎಂಟ್ರಿ ಆಗಿದ್ದಾರೆ.
ಹಾವು ಸಾಯಬಾರದು, ಕೋಲು..!
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವಿಚಾರದಲ್ಲಿ ಚೀನಾ ಅದೆಷ್ಟು ಕಿಲಾಡಿ ಬುದ್ಧಿ ಉಪಯೋಗಿಸುತ್ತಿದೆ ಎಂದರೆ, 'ಹಾವು ಸಾಯಬಾರದು ಕೋಲು ಮುರಿಯಬಾರದು' ಎಂಬ ಗಾದೆ ಮಾತನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿದೆ. ಇದೇ ಕಾರಣಕ್ಕೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ತಟಸ್ಥವಾದ ನಿಲುವು ತಳೆದಿದೆ. ಈ ಮೂಲಕ ಅಮೆರಿಕದ ಕೆಂಗಣ್ಣಿಗೂ ಗುರಿಯಾಗದೆ, ಯುರೋಪ್ ರಾಷ್ಟ್ರಗಳ ಜೊತೆ ವ್ಯಾಪಾರ ಸಂಬಂಧ ವೃದ್ಧಿಸಿಕೊಂಡು ಹೋಗುತ್ತಿದೆ ಚೀನಾ. ಆದರೆ ಚೀನಾ ರಾಯಭಾರಿ ಮಾಡಿದ ಎಡವಟ್ಟು ದೊಡ್ಡ ವಿವಾದ ಸೃಷ್ಟಿಸಿತ್ತು.
ಯುರೋಪಿಯನ್ ಒಕ್ಕೂಟದ ಆಕ್ರೋಶ
ಹೌದು, ಚೀನಾ ರಾಯಭಾರಿ ನೀಡಿದ್ದ ಹೇಳಿಕೆ ಪರಿಣಾಮ ಯುರೋಪ್ ಒಕ್ಕೂಟ ಹಾಗೂ ಚೀನಾ ನಡುವಿನ ಸಂಬಂಧ ಹಾಳಾಗಿ ಹೋಗುವ ಪರಿಣಾಮ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಚೀನಾ ರಾಯಭಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. 'ಚೀನಾ ರಾಯಭಾರಿ ಹೇಳಿಕೆ ಸ್ವೀಕಾರಾರ್ಹವಲ್ಲ' ಎಂದಿದ್ದರು. ಜೊತೆಗೆ 'ಈ ಘೋಷಣೆಗಳು ಚೀನಾದ ಅಧಿಕೃತ ನೀತಿ ಪ್ರತಿನಿಧಿಸಲ್ಲ ಎಂದು ಮಾತ್ರ ಊಹಿಸಬಹುದು' ಎಂದಿದ್ದರು ಜೋಸೆಫ್ ಬೊರೆಲ್.

ಈಗಾಗಲೇ ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳು ತಿರುಗಿಬಿದ್ದಿವೆ. ಇದೇ ಸಂದರ್ಭದಲ್ಲಿ ಚೀನಾ ಕೂಡ ಎಡವಟ್ಟು ಮಾಡಿಕೊಳ್ತಾ? ಎಂಬ ಅನುಮಾನ ಮೂಡಿತ್ತು. ಆದ್ರೆ ತಕ್ಷಣ ತಮ್ಮ ರಾಯಭಾರಿ ನೀಡಿದ ತಪ್ಪು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಯುರೋಪ್ ಒಕ್ಕೂಟದ ಕೋಪ ತಣಿಸಿದೆ ಚೀನಾ. ಆದರೆ ಚೀನಾದ ಈ ಸ್ಪಷ್ಟನೆಗೆ ಯುರೋಪ್ ಒಕ್ಕೂಟ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಒಟ್ನಲ್ಲಿ ಅತ್ತ ಅಮೆರಿಕ ಕೂಡ ಚೀನಾ ಮತ್ತು ಯುರೋಪ್ ಒಕ್ಕೂಟದ ಸಂಬಂಧ ಕಂಡು ಬೇಸರಗೊಂಡಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ತಮ್ಮ ಪರ ಚೀನಾ ಬ್ಯಾಟ್ ಬೀಸಬೇಕು ಎಂಬ ಬಯಕೆ ದೊಡ್ಡಣ್ಣನಿಗೆ ಇದೆ. ಆದರೆ ಇದೇ ಹೊತ್ತಲ್ಲಿ ರಾಯಭಾರಿ ಮಾಡಿದ ಎಡವಟ್ಟು ಚೀನಾಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಸುಳ್ಳಲ್ಲ.












Click it and Unblock the Notifications