China General: ಚೀನಾ ಸೇನೆಗೆ ಶಾಕ್ ನೀಡಿದ ಕ್ಸಿ ಜಿನ್‌ಪಿಂಗ್, ಭಾರತಕ್ಕೆ ಇದರಿಂದ ಲಾಭ ಆಗುತ್ತಾ?
ಬೀಜಿಂಗ್: ಚೀನಾ ಸೇನೆಗೆ ದೊಡ್ಡ ಆಘಾತ ಸಿಕ್ಕಿದೆ, ಚೀನಾ ಸರ್ಕಾರ ಇದೀಗ ಚೀನಾ ಸೇನೆಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳು ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನ ಮಟ್ಟ ಹಾಕಲು ಸಜ್ಜಾಗಿದೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಶಿಸ್ತು ಹಾಗೂ ಕಾನೂನುಗಳ ಗಂಭೀರ ಉಲ್ಲಂಘನೆ ಆರೋಪ ಹಿನ್ನೆಲೆ ಇದೀಗ ಪಿಎಲ್‌ಎ ಅತ್ಯುನ್ನತ ಅಧಿಕಾರಿ ಜನರಲ್ ಜಾಂಗ್ ಯೂಕ್ಸಿಯಾ ಸೇರಿ ಚೀನಾದ ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಲು ನಿರ್ಧರಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತದ ನೆರೆಯ ದೇಶ ಚೀನಾದಲ್ಲಿ ಇತ್ತೀಚೆಗೆ ಜನಪ್ರತಿನಿಧಿ ಒಬ್ಬ ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಬಿದ್ದ ಕಾರಣಕ್ಕೆ ಕಠಿಣ ಶಿಕ್ಷೆ ನೀಡಲಾಗಿತ್ತು. ಅದೇ ರೀತಿ ಸೇನೆಯಲ್ಲಿ ಕೂಡ ಚೀನಾ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಈ ವಿಚಾರದ ಬಗ್ಗೆ ಗಂಭೀರವಾಗಿ ಅವಲೋಕನ ನಡೆಸಿರುವ ಕ್ಸಿ ಜಿನ್‌ಪಿಂಗ್ ನೇತೃತ್ವದ ಸರ್ಕಾರ, ಮಹತ್ವದ ಕ್ರಮ ಕೈಗೊಂಡಿದೆ. ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಮಿಲಿಟರಿಯ ಹೈಕಮಾಂಡ್ ಆಗಿರುವವರೇ ಇದೀಗ ತನಿಖೆಗೆ ಒಳಪಡಲಿದ್ದು, ಜನರಲ್ ಜಾಂಗ್ ಯೂಕ್ಸಿಯಾಗೆ ಸಂಕಷ್ಟ ಎದುರಾಗಿದೆ. ಈ ವಿಚಾರ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಆರೋಪಗಳು ಸಾಬೀತಾದರೆ ಕಠಿಣವಾದ ಶಿಕ್ಷೆ ಗ್ಯಾರಂಟಿ.

ತಪ್ಪು ಮಾಡಿದವರ ವಿರುದ್ಧ ತನಿಖೆ ಅಸ್ತ್ರ
ಚೀನಾ ನೆಲದಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಕಠಿಣವಾದ ಶಿಕ್ಷೆ ಖಂಡಿತ, ಏಕೆಂದರೆ ಅಲ್ಲಿನ ನಿಯಮ ಅಷ್ಟು ಬಿಗಿಯಾಗಿದೆ. ಹೀಗಿದ್ದರೂ ಅದೆಲ್ಲವನ್ನೂ ಮೀರಿ, ಭಯ ಇಲ್ಲದೆ ಭ್ರಷ್ಟಾಚಾರ ಮಾಡಿದ್ದವರು ಕಂಬಿ ಹಿಂದೆ ಬಿದ್ದು ಒದ್ದಾಡುತ್ತಿದ್ದಾರೆ. ಅದೇ ರೀತಿಯಾಗಿ ಚೀನಾ ಸೇನೆಯಲ್ಲಿ ಕೂಡ ಭ್ರಷ್ಟಾಚಾರ ಹಾಗೂ ಅನ್ಯಾಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಸೇನೆಯ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳೇ ದಾರಿತಪ್ಪಿ ಹೋಗಿರುವ ಆರೋಪ ಸಂಚಲನ ಸೃಷ್ಟಿಸಿತ್ತು. ಇದೀಗ ಅಂತಹ ಅಧಿಕಾರಿಗಳಿಗೆ ಪಾಠ ಕಲಿಸಲು ಜಿನ್‌ಪಿಂಗ್ ಆಡಳಿತ ಮುಂದಾಗಿದೆ.
ಚೀನಾದಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನ
ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಮಾವೋ ನಂತರ ಚೀನಾ ದೇಶವನ್ನು ಸುದೀರ್ಘ ಅವಧಿಗೆ ಆಳುತ್ತಿರುವ ಜಿನ್‌ಪಿಂಗ್ ಈಗ ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಅಭಿಯಾನ ಕೈಗೊಂಡು ಸೇನೆಯಲ್ಲಿ ಇರುವ ಸಮಸ್ಯೆಗಳನ್ನು ಹಾಗೂ ಭ್ರಷ್ಟ ಸೇನಾಧಿಕಾರಿಗಳನ್ನ ಈಗ ಹೊರಗೆ ಹಾಕುವ ಕೆಲಸ ಆಗುತ್ತಿದೆ.
ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಈಗಾಗಲೇ ಲಕ್ಷಾಂತರ ಜನ ಅಧಿಕಾರಿಗಳನ್ನ ಶಿಕ್ಷಿಸಲಾಗಿದ್ದು, ಈ ಪೈಕಿ ಹಲವು ಅಧಿಕಾರಿಗಳು ಉನ್ನತ ಸೇನಾ ಅಧಿಕಾರಿಗಳು ಎಂಬುದು ಮಹತ್ವದ ಸಂಗತಿ. ಅದೇ ರೀತಿ ಇದೀಗ ಜನರಲ್ ಜಾಂಗ್ ಯೂಕ್ಸಿಯಾ ವಿರುದ್ಧ ಕೂಡ ತನಿಖೆ ಶುರುವಾಗಿದೆ. ಜಿನ್‌ಪಿಂಗ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜನರಲ್ ಜಾಂಗ್ ಯೂಕ್ಸಿಯಾ, ಹಲವು ವರ್ಷಗಳಿಂದ ಚೀನಾ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.












Click it and Unblock the Notifications