India & Canada: ಕೆನಡಾ ದೀಪಾವಳಿ ಕ್ಯಾನ್ಸಲ್, ಏನ್ ಗುರೂ ನಿನ್ ಕಿರಿಕ್ ಅಂತಾ ಕೇಳ್ತಿದ್ದಾರೆ ಭಾರತೀಯರು!
ಕೆನಡಾದ ಟ್ರುಡೋ ಸರ್ಕಾರ ಭಾರತದ ಜೊತೆಗಿನ ತಿಕ್ಕಾಟ ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ. ಯಾಕಂದ್ರೆ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಂದರು ಅನ್ನುವಂತೆ, ತಲೆ & ಬುಡ ಇಲ್ಲದ ಆರೋಪ ಮುಂದೆ ಇಟ್ಟುಕೊಂಡು ಖಲಿಸ್ತಾನಿಗಳ ಬೆನ್ನಿಗೆ ನಿಲ್ಲುತ್ತಿದೆ ಕೆನಡಾ ಸರ್ಕಾರ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ತಕ್ಕಂತೆ ಪದೇ ಪದೇ ಭಾರತ & ಕೆನಡಾ ನಡುವೆ ಫೈಟಿಂಗ್ ಬಲು ಜೋರಾಗಿದೆ. ಇಷ್ಟೆಲ್ಲಾ ಕಿಡಿ ಹೊತ್ತಿಕೊಂಡಿರುವ ಸಮಯದಲ್ಲೇ, ದೀಪಾವಳಿ ಹಬ್ಬದ ಸಂಬಂಧ ಕೆನಡಾ ಸರ್ಕಾರ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ!
ಖಲಿಸ್ತಾನಿ ಉಗ್ರ ನಿಜ್ಜರ್ ಸಾವಿನ ನಂತರ ಕೆನಡಾ & ಭಾರತ ಪರಸ್ಪರ ಆಕ್ರೋಶವನ್ನ ಹೊರ ಹಾಕುತ್ತಿವೆ. ಅದರಲ್ಲೂ ಎರಡೂ ದೇಶಗಳು ರಾಜತಾಂತ್ರಿಕ ಅಧಿಕಾರಿಗಳನ್ನ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದು ಸಂಘರ್ಷ ಹೆಚ್ಚಾಗಲು ಕಾರಣವಾಗಿತ್ತು. ಇನ್ನೊಂದು ಕಡೆ ಕೆನಡಾ ಈ ವಿಚಾರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಸಜ್ಜಾಗಿರುವ ಸಮಯದಲ್ಲೇ ಮತ್ತೊಂದು ಕಿರಿಕ್ ಶುರುವಾಗಿದೆ. ದೀಪಾವಳಿ ಹಬ್ಬದ ವಿಚಾರದಲ್ಲಿ ಕೆನಡಾದ ಸರ್ಕಾರ ಇದೀಗ ಮತ್ತೆ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ.

23 ವರ್ಷದ ಸಂಪ್ರದಾಯಕ್ಕೆ ಎಳ್ಳುನೀರು?
ಹೌದು, ಕೆನಡಾ ಸರ್ಕಾರಕ್ಕೆ ಅಂದ್ರೆ ಜಸ್ಟಿನ್ ಟ್ರುಡೋ ಅವರ ಸರ್ಕಾರಕ್ಕೆ ಏನಾಗಿದೆ ಅಂತಾ ಗೊತ್ತಾಗ್ತಿಲ್ಲ. ಯಾಕಂದ್ರೆ, ಪದೇ ಪದೇ ಭಾರತ ವಿರೋಧಿ ನಿಲುವು & ನಿರ್ಧಾರ ತೆಗೆದುಕೊಂಡು ಭಾರತದ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಈಗಲೂ ಅಷ್ಟೇ ಸುಮಾರು 23 ವರ್ಷದ ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟಿರುವ ಕೆನಡಾದ ಜಸ್ಟಿನ್ ಟ್ರುಡೋ ಸರ್ಕಾರ, ಕೆನಡಾ ಸಂಸತ್ತಿನಲ್ಲಿ ಭಾರತ & ಕೆನಡಿಯನ್ ಸಮುದಾಯದ ವತಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ದೀಪಾವಳಿ ಆಚರಣೆಯನ್ನು ದಿಢೀರ್ ಅಂತಾ ರದ್ದು ಮಾಡಿದೆ. ಇದು ಭಾರತೀಯರನ್ನ ಭಾರಿ ಕೋಪಗೊಳ್ಳುವಂತೆ ಮಾಡಿದೆ.
ಉರಿಯುವ ಬೆಂಕಿಗೆ ತುಪ್ಪ ಸುರಿದರಾ?
ಈಗಾಗಲೇ ಕೆನಡಾ & ಭಾರತದ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದ್ದು, ಇದೇ ವೇಳೆ ಕೆನಡಾ ಸರ್ಕಾರದ ಮತ್ತೊಂದು ಕೆಟ್ಟ ನಿರ್ಧಾರ ಸಂಚಲನ ಸೃಷ್ಟಿ ಮಾಡಿದೆ. ಸಂಬಂಧವು ಹಾಳಾಗಿ ಹೋಗಿರುವ ಸಮಯದಲ್ಲಿ ಅದನ್ನು ಸರಿ ಮಾಡುವುದು ಬಿಟ್ಟು, ದೀಪಾವಳಿ ಹಬ್ಬ ಆಚರಣೆಯನ್ನೇ ನಿಲ್ಲಿಸಿರುವ ಕೆನಡಾ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ಮೊಳಗಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ಕೂಡ ಈ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸುತ್ತಿದ್ದು, ಇದರ ಪರಿಣಾಮ ಮುಂದೆ ಭಾರತ & ಕೆನಡಾ ನಡುವಿನ ರಾಜತಾಂತ್ರಿಕ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ.
ಉಗ್ರನ ಸಾವಿನ ನಂತರ ಇಷ್ಟೆಲ್ಲ!
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಯಾವಾಗ ನಡೆಯಿತೋ, ಅಲ್ಲಿಂದ ಮುಂದೆ ಭಾರತ & ಕೆನಡಾ ನಡುವಿನ ಸಂಬಂಧ ಕೂಡ ಹಾಳಾಗುತ್ತಾ ಬಂದಿದೆ. ಯಾಕಂದ್ರೆ ತನ್ನ ನೆಲದಲ್ಲಿ ತನ್ನ ಪ್ರಜೆಯನ್ನ ಹತ್ಯೆ ಮಾಡಿದ್ದಾರೆ ಅಂತಾ ಕೆನಡಾ ಯಾವುದೇ ಸಾಕ್ಷ್ಯಗಳ ಲಭ್ಯತೆ ಇಲ್ಲದೆ ಬಾಯಿ ಬಡಿದುಕೊಳ್ಳುತ್ತಿದೆ. ಅಲ್ಲದೆ ಭಾರತದ ಅಧಿಕಾರಿಗಳು & ಸರ್ಕಾರದ ವಿರುದ್ಧ ಸಾಕ್ಷ್ಯಗಳೇ ಇಲ್ಲದೆ ಆರೋಪ ಮಾಡುತ್ತಿದೆ. ಮತ್ತೊಂದು ಕಡೆ ಭಾರತ ಕೂಡ ಹೀಗೆ ಕೆನಡಾ ಮಾಡುತ್ತಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದರೂ ಪರಿಸ್ಥಿತಿ ಸರಿ ಹೋಗುತ್ತಿಲ್ಲ. ಇಂತಹ ಸಮಯದಲ್ಲೇ ದೀಪಾವಳಿ ಹಬ್ಬದ ಆಚರಣೆಗೆ ಕೂಡ ಕೆನಡಾದಲ್ಲಿ ಬ್ರೇಕ್ ಬಿದ್ದಿದೆ.












Click it and Unblock the Notifications