Donald Trump: ಡೊನಾಲ್ಡ್ ಟ್ರಂಪ್ ಶಾಕ್; ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳುತ್ತಿರುವ ಭಾರತೀಯರು
ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡೊನಾಲ್ಡ್ ಟ್ರಂಪ್ ಹಲವು ಹೊಸ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲೂ ವಲಸಿಗರ ವಿಚಾರದಲ್ಲಿ ತುಸು ಹೆಚ್ಚೇ ಎನ್ನುವಷ್ಟರು ಕಠಿಣವಾಗಿದ್ದಾರೆ. ಇದೀಗ 127 ವರ್ಷದ ಹಳೆಯ ಸಂವಿಧಾನವನ್ನು ತಿದ್ದುಪಡಿ ಮಾಡುವ ಆದೇಶಕ್ಕೆ ಸಹಿ ಹಾಕಿದ್ದು, ಭಾರತೀಯರಿಗೆ ದೊಡ್ಡ ಆಘಾತ ನೀಡಿದ್ದಾರೆ. ಟ್ರಂಪ್‌ರ ಹಸ ಕಾನೂನಿಂದ ಪಾರಾಗಲು ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಅಮೆರಿಕದ ಪೌರತ್ವ ಪಡೆಯುವುದು ತುಂಬಾ ಕಠಿಣವಾದ ವಿಚಾರ. ಆದರೆ ಈವರೆಗೆ ಅಮೆರಿಕದಲ್ಲಿ ಜನಿಸುವ ಮಕ್ಕಳನ್ನು ಅಮೆರಿಕದ ನಾಗರಿಕ ಎಂದು ಪರಿಗಣಿಸಲಾಗುತ್ತಿತ್ತು, ಪೋಷಕರಿಗೆ ಪೌರತ್ವ ಇಲ್ಲದೇ ಇದ್ದರು, ಅಲ್ಲೇ ಜನಿಸುವ ಮಗು ಪೌರತ್ವ ಪಡೆಯುತ್ತಿತ್ತು. ಈ ಕಾನೂನು ರದ್ದು ಮಾಡಲು ಟ್ರಂಪ್ ಮುಂದಾಗಿದ್ದಾರೆ.

ಆದರೆ ಹುಟ್ಟಿನಿಂದ ನಾಗರಿಕತೆ ಪಡೆಯುವ ಹಕ್ಕು ಅಮೆರಿಕದ ಸಂವಿಧಾನದಲ್ಲಿಯೇ ಇರುವ ಕಾರಣ ಆದೇಶ ಜಾರಿಯಾಗುವುದು ಅನುಮಾನವಾಗಿದೆ. ಟ್ರಂಪ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೆಕ್ಸಿಕೋ ಗಡಿಯಲ್ಲಿ ನಿರ್ಬಂಧವನ್ನು ವಿಧಿಸಿದರು. ಅಮೆರಿಕ ತಾತ್ಕಾಲಿಕವಾಗಿ ದೇಶದಲ್ಲಿ ನೆಲೆಸಲು ಅನುಮತಿ ನೀಡುವ ತಾತ್ಕಾಲಿಕ ಹೆಚ್1ಬಿ, ಎಲ್1 ವೀಸಾ, ಗ್ರೀನ್ ಕಾರ್ಡ್, ತಾತ್ಕಾಲಿಕ ವೀಸಾ, ವಿದ್ಯಾರ್ಥಿ ವೀಸಾ, ಪ್ರವಾಸಿ ವೀಸಾ, ದಾಖಲೆ ಹೊಂದಿಲ್ಲದೇ ವಾಸಿಸುತ್ತಿರುವ ಭಾರತೀಯರ ಮೇಲೆ ಹೊಸ ಕಾನೂನು ಪರಿಣಾಮ ಬೀರುತ್ತದೆ.
ಟ್ರಂಪ್ ತಂದಿರುವ ಹೊಸ ಕಾನೂನು ಏನು?
ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ನೀತಿಯನ್ನು ಅಂತ್ಯಗೊಳಿಸುವ ಕಾನೂನಿಗೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಫೆಬ್ರವರಿ 20 ರಿಂದ ಜಾರಿಗೆ ಬರಲಿದೆ. ಫೆಬ್ರವರಿ 20 ರ ಬಳಿಕ ಜನಿಸುವ ವಲಸಿಗರ ಮಕ್ಕಳಿಗೆ ಅಮೆರಿಕದ ಪೌರತ್ವ ಪಡೆಯುವುದು ಕಠಿಣವಾಗಲಿದ್ದು ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಹೊಸ ಕಾನೂನು ಜಾರಿಗೆ ಬಂದರೆ ಫೆಬ್ರವರಿ ಹುಟ್ಟುವ ಮಕ್ಕಳಿಗೆ 21 ವರ್ಷದವರೆಗೆ ಅಮೆರಿಕದಲ್ಲಿ ವಾಸಿಸಲು ಅವಕಾಶವಿದ್ದು ಬಳಿಕ ಅವರ ದೇಶಕ್ಕೆ ವಾಪಸ್ ಆಗಬೇಕಾಗುತ್ತದೆ. ಇದರಿಂದ ಪಾರಾಗಲು ಭಾರತೀಯ ಫೋಷಕರು ಅವಧಿಗೆ ಮುನ್ನವೇ ಹೆರಿಗೆಗೆ ಮುಂದಾಗಿದ್ದಾರೆ.
8 ಮತ್ತು 9 ತಿಂಗಳು ತುಂಬಿರುವ ಗರ್ಭಿಣಿಯರು ಸಿ ಸೆಕ್ಷನ್ ಹೆರಿಗೆಗೆ ಮುಂದಾಗಿದ್ದು ಆಸ್ಪತ್ರೆಯಲ್ಲಿ ಅವಧಿಗೆ ಮುನ್ನ ಹೆರಿಗೆಗಾಗಿ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಏಳು ತಿಂಗಳ ಮಹಿಳೆಯೊಬ್ಬರು ಪತಿಯ ಜೊತೆ ಅವಧಿಪೂರ್ವ ಹೆರಿಗೆಗೆ ನೋಂದಾಯಿಸಲು ಬಂದರು, ಅವರಿಗೆ ಮಾರ್ಚ್‌ವರೆಗೆ ಹೆರಿಗೆ ಮಾಡಲು ಅವಕಾಶವಿಲ್ಲ, ಇಂತಹ ಪ್ರಕರಣ ಹೆಚ್ಚುತ್ತಿವೆ ಎಂದು ನ್ಯೂಜೆರ್ಸಿಯ ಡಾ. ಎಸ್‌ಡಿ ರೋಮಾ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.












Click it and Unblock the Notifications