ಶುರುವಾಗಿದೆ 'ಬ್ರೇಕಪ್ ಕೋಚಿಂಗ್'; ಇದಕ್ಕೆ ದುಡ್ಡು ಸ್ಪೆಂಡ್ ಮಾಡೋದ್ರಲ್ಲಿ ಮಹಿಳೆಯರೇ ಮುಂದು

Break Up ಕೇಳಲು ಅಷ್ಟೇನೂ ಅನಿಸೋಲ್ಲ. ಆದರೆ, ಸಂಬಂಧ ಕಡಿದುಕೊಳ್ಳುವ ನೋವು ಹೇಳತೀರದು. ಕೆಲವರು ಈ ನೋವಿನಿಂದ ಹೊರ ಬರಲು ವರ್ಷಗಳ ಕಾಲ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯೋ ಮೂಲಕ ತಮ್ಮನ್ನು ತಾವು ಸಂಭಾಳಿಸಿಕೊಳ್ಳುತ್ತಾರೆ. ಇನ್ನು ಕೆಲವರು ದ್ವೇಷಕ್ಕೆ ಇಳಿದು ಬಿಡುತ್ತಾರೆ.

ಆದರೆ ಇತ್ತೀಚಿಗೆ ಬೇರೆಯದೇ ಪ್ರವೃತ್ತಿ ಜನಪ್ರಿಯವಾಗುತ್ತಿದೆ. ಯುವತಿಯರು ತಮ್ಮ ಎಕ್ಸ್‌ಗಳನ್ನು ಅಂದರೆ ಮಾಜಿ ಸಂಗಾತಿಗಳನ್ನು ಮರಳಿ ಪಡೆಯಲು ಶತಾಯ ಗತಾಯ ಪ್ರಯತ್ನಕ್ಕೆ ಇಳಿಯುತ್ತಿದ್ದಾರೆ. ಇದಕ್ಕಾಗಿ ಅವರು ಪಡೆಯುತ್ತಿರುವುದು ರಿಲೇಶನ್‌‌ಶಿಪ್‌ ಎಕ್ಸ್‌ಪರ್ಟ್‌ಗಳ ಸಹಾಯವನ್ನು. ಈ ತರಬೇತುದಾರರು ತಮ್ಮನ್ನು ಪ್ರೀತಿ ಮತ್ತು ಸಂಬಂಧ ತಜ್ಞರೆಂದು ಹೇಳಿಕೊಳ್ಳುತ್ತಾರೆ. ಇವರು ಮಾಜಿ ಸಂಗಾತಿಗಳನ್ನು ಮತ್ತೆ ತಮ್ಮ ಜೀವನದಲ್ಲಿ ತರಲು ಸಹಾಯ ಮಾಡುವ ತಂತ್ರಗಳನ್ನು ಜನರಿಗೆ ಕಲಿಸುತ್ತಾರೆ. ಆದರೆ ಇದು ಎಷ್ಟು ಪರಿಣಾಮಕಾರಿಯಾಗಿದೆ ಎನ್ನುವುದಕ್ಕೆ ಮಾತ್ರ ಯಾವುದೇ ಉತ್ತರ ಇಲ್ಲ.

Breakup Coach

ಬ್ರೇಕಪ್‌ ನೋವನ್ನು ನಿಭಾಯಿಸಲು ಸಹಾಯ ಮಾಡುವ ಉದ್ಯಮ :

ಬ್ರೇಕಪ್‌ ನೋವಿನಿಂದ ಹೊರ ಬರುವುದು ಹೇಳುವಷ್ಟು ಸುಲಭವಲ್ಲ. ಅನೇಕರು ತಮ್ಮ ಮನಸ್ಸನ್ನು ಬೇರೆ ಕಡೆಗೆ ಹರಿಸುವ ಮೂಲಕ ಬೇರೆ ಕೆಲಸಗಳಲ್ಲಿ ತಮ್ಮನ್ನು ಬ್ಯುಸಿಯಾಗಿಟ್ಟುಕೊಂಡು ಈ ನೋವನ್ನು ಮರೆಯುತ್ತಾರೆ. ಇನ್ನು ಕೆಲವರಿಗೆ ಇದಕ್ಕಾಗಿ ಬೇರೆಯವರ ಸಹಾಯ ಬೇಕಾಗುತ್ತದೆ. ಅಂಥವರಿಗಾಗಿಯೇ ಇದೀಗ ಈ ಹೊಸ ಉದ್ಯಮ ಹುಟ್ಟಿ ಕೊಂಡಿದೆ.

40,000 ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ಶುಲ್ಕ:

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ವರದಿಯ ಪ್ರಕಾರ, 28 ವರ್ಷದ ಚೀನಾದ ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯನನ್ನು ಮರಳಿ ಪಡೆಯಲು ಸಂಬಂಧ ತರಬೇತುದಾರರನ್ನು ಸಂಪರ್ಕಿಸಿದ್ದಾರೆ. ಇವರು ಈ ತರಬೇತುದಾರರಿಗೆ ಸುಮಾರು 3,500 ಯುವಾನ್ (ಸುಮಾರು 40,000 ರೂಪಾಯಿಗಳು) ಪಾವತಿಸಿರುವುದಾಗಿ ಹೇಳಿದ್ದಾರೆ. ಇದರ ಬದಲಿಗೆ ಅವರಿಗೆ ಒಂದು ತಿಂಗಳ ನಿರಂತರ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆಯಂತೆ. ಆದರೆ ಅನೇಕ ಸಂಬಂಧ ತರಬೇತುದಾರರು ಪ್ರೀಮಿಯಂ ಪ್ಯಾಕೇಜ್‌ಗಳಿಗೆ ಸುಮಾರು 300,000 ರೂಪಾಯಿಗಳವರೆಗೆ ಶುಲ್ಕ ವಿಧಿಸುತ್ತಾರೆ.

ಮೊದಲು ಉಚಿತ ಸಂಭಾಷಣೆ, ನಂತರ ಪ್ಯಾಕೇಜ್ :

ಆ ಮಹಿಳೆಯ ಪ್ರಕಾರ, ತರಬೇತುದಾರ ಆರಂಭದಲ್ಲಿ ಅವಳೊಂದಿಗೆ ಸುಮಾರು 90 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದರು. ಇಲ್ಲಿ ತನ್ನ ಸಂಗಾತಿಯೊಂದಿಗೆ ಸಂಬಂಧ ಹೇಗಿತ್ತು? ಸಂಬಂಧ ಮುರಿದು ಬೀಳಲು ಕಾರಣ ಏನು ಎನ್ನುವುದನ್ನು ವಿವರವಾಗಿ ಕೇಳಿಕೊಂಡಿದ್ದರಂತೆ. ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಬೇಕು. ಫೋನಿನಲ್ಲಿ ಮಾತುಕತೆ ನಡೆದ ಬಳಿಕ ಒಂದು ತಿಂಗಳ ವಿಶೇಷ ಪ್ಯಾಕೇಜ್ ತೆಗೆದುಕೊಳ್ಳುವಂತೆ ಹೇಳಲಾಯಿತು. ಅಲ್ಲಿ ಮಹಿಳೆಗೆ ಮಾಜಿ ಸಂಗಾತಿಯನ್ನು ಹೇಗೆ ಮತ್ತೆ ಆಕರ್ಷಿಸುವುದು ಎನ್ನುವ ವಿಷಯದ ಬಗ್ಗೆ ತರಬೇತಿ ನೀಡಲಾಗಿದೆ.

ಮಾಜಿ ಜೊತೆ 21 ದಿನಗಳ ಕಾಲ ಮಾತುಕತೆ ನಿಷೇಧ :

ಸಂಬಂಧ ತರಬೇತುದಾರರ ಯೋಜನೆ ಹಲವಾರು ನಿಯಮಗಳನ್ನು ಒಳಗೊಂಡಿತ್ತು. ಮೊದಲನೆಯದು ತನ್ನ ಮಾಜಿ ಜೊತೆಗಿನ ಸಂಪರ್ಕವನ್ನು ಮೊದಲ 21 ದಿನಗಳವರೆಗೆ ನಿಲ್ಲಿಸಬೇಕಾಗಿತ್ತು. ಅವಳ ವ್ಯಕ್ತಿತ್ವ ಮತ್ತು ಲುಕ್‌ ಅನ್ನು ಬದಲಾಯಿಸಲು ಸಹ ಅವಳಿಗೆ ಸಲಹೆ ನೀಡಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಯಾವ ರೀತಿಯ ಪೋಸ್ಟ್‌ಗಳನ್ನು ಮಾಡಬೇಕು, ಯಾವಾಗ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಯಿತು. ಈ ಯೋಜನೆಯನ್ನು ಸರಿಯಾಗಿ ಅನುಸರಿಸಿದರೆ, ತನ್ನ ಮಾಜಿಯನ್ನು ಮರಳಿ ಪಡೆಯುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಎನ್ನುವುದು ತರಬೇತುದಾರರ ಭರವಸೆ.

ಎಲ್ಲಾ ಸಲಹೆಗಳನ್ನು ಅನುಸರಿಸಿದರೂ ಮರಳಿ ಬರಲಿಲ್ಲ ಎಕ್ಸ್‌ :

ತರಬೇತುದಾರರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮಹಿಳೆ ಹೇಳಿದ್ದಾರೆ. ತರಬೇತುದಾರರು ಹೇಳಿದ ಎಲ್ಲಾ ವಿಧಾನಗಳನ್ನು ಅನುಸರಿಸಿದ ಬಳಿಕ ಮಾಜಿ ಗೆಳೆಯ ತನ್ನೊಂದಿಗೆ ಮತ್ತೆ ಮಾತನಾಡುತ್ತಾನೆ ಎನ್ನುವ ಆಸೆಯಿಂದ ಆಕೆ ಕಾಯುತ್ತಿದ್ದರು. ಆದರೆ ಆದದ್ದೇ ಬೇರೆ. ಆಕೆಯ ಮಾಜಿ ಗೆಳೆಯ ಚಾಟ್ ಅಪ್ಲಿಕೇಶನ್‌ನಲ್ಲಿ ಅವಳನ್ನು ಬ್ಲಾಕ್‌ ಮಾಡಿ ಬಿಟ್ಟಿದ್ದಾನೆ. 90 ಪ್ರತಿಶತ ಯಶಸ್ಸಿನ ಬಗ್ಗೆ ತರಬೇತುದಾರನ ಹೇಳಿಕೆಯನ್ನು ವಾನ್ ಪ್ರಶ್ನಿಸಿದಾಗ, ಆಕೆಗೆ ಯಾವುದೇ ತೃಪ್ತಿದಾಯಕ ಉತ್ತರ ಸಿಗಲಿಲ್ಲ. ಬದಲಾಗಿ, ಆಕೆಗೆ ಹೆಚ್ಚು ದುಬಾರಿ ಪ್ಯಾಕೇಜ್ ನೀಡಲಾಯಿತು. ಈ ಬಾರಿ, ತರಬೇತುದಾರ 9,800 ಯುವಾನ್ ಅಥವಾ ಸರಿಸುಮಾರು 1.15 ಲಕ್ಷ ರೂ. ಮೌಲ್ಯದ ಹೊಸ ಪ್ಯಾಕೇಜ್ ಅನ್ನು ಸೂಚಿಸಿದ್ದಾರೆ. ಇಲ್ಲಿ ಹೆಚ್ಚು ಅನುಭವಿ ಮಾರ್ಗದರ್ಶಕರು ಅವಳಿಗೆ ಸಹಾಯ ಮಾಡುತ್ತಾರೆ ಎಂದು ಹೇಳಲಾಗಿದೆ.

ಹೆಚ್ಚುತ್ತಿದೆ ಜನಪ್ರಿಯತೆ :

ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಬಂಧ ತರಬೇತಿಗೆ ಸಂಬಂಧಿಸಿದ ವೀಡಿಯೊಗಳು ವೇಗವಾಗಿ ವೈರಲ್ ಆಗುತ್ತಿವೆ. "getbacktogether" ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸುಮಾರು 970 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಆದರೆ "datingskills" ನಂತಹ ಹ್ಯಾಶ್‌ಟ್ಯಾಗ್‌ಗಳನ್ನು 10.4 ಬಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವೀಡಿಯೊಗಳು ನಿಮ್ಮ ಸಂಗಾತಿಯನ್ನು ಬ್ರೇಕ್‌ ಅಪ್‌ ನಂತರ ಹೇಗೆ ಮರಳಿ ಪಡೆಯುವುದು, ಸಂದೇಶ ಕಳುಹಿಸಲು ಸರಿಯಾದ ಸಮಯ ಮತ್ತು ಸಂಬಂಧಗಳನ್ನು ಸುಧಾರಿಸಲು ಸಲಹೆಗಳನ್ನು ವಿವರಿಸುವ ಹಂತಗಳನ್ನು ಒಳಗೊಂಡಿದೆ.

ಸಂಬಂಧಗಳು ಮತ್ತು ಮದುವೆ ಒತ್ತಡವೂ ಒಂದು ದೊಡ್ಡ ಕಾರಣ :

ಚೀನಾದಲ್ಲಿ ಸಂಬಂಧಗಳು ಮತ್ತು ಮದುವೆಗೆ ಸಂಬಂಧಿಸಿದ ಸಾಮಾಜಿಕ ಒತ್ತಡಗಳು ತೀವ್ರವಾಗಿರುತ್ತವೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಅನೇಕ ಮಹಿಳೆಯರು ಬೇರೆಯಾದ ಬಳಿಕ ಒಂಟಿತನ ಅನುಭವಿಸುತ್ತಾರೆ. ಸಾಧ್ಯವಾದಷ್ಟು ಬೇಗ ತಮ್ಮ ಹಳೆಯ ಸಂಬಂಧಕ್ಕೆ ಮರಳಲು ಪ್ರಯತ್ನಿಸುತ್ತಾರೆ. ಕೆಲವರು ಈ ಭಾವನಾತ್ಮಕ ಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಾಜಿ ಪತಿಯನ್ನು ಮರಳಿ ಪಡೆಯಲು 2 ಲಕ್ಷ ರೂಪಾಯಿ ಖರ್ಚು :

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಒಬ್ಬ ಮಹಿಳೆ ತನ್ನ ಮಾಜಿ ಪತಿಯೊಂದಿಗಿನ ಸಂಬಂಧಕ್ಕೆ ಮತ್ತೆ ಜೀವ ತುಂಬಲು ಸುಮಾರು 2.3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಸಮಾಜದಲ್ಲಿ ಮತ್ತು ಸ್ನೇಹಿತರೊಂದಿಗೆ ತನ್ನ ಇಮೇಜ್‌ಗೆ ಕಳಂಕ ಬರದಂತೆ ರಾಜಿ ಮಾಡಿಕೊಳ್ಳಲು ಅವನೇ ಮುಂದಾಗಬೇಕು ಎನ್ನುವುದು ಮಹಿಳೆ ಬಯಕೆ.

ಸಂಬಂಧ ಸಮಾಲೋಚನೆಯ ಕುರಿತು ಉದ್ಭವಿಸುವ ಪ್ರಶ್ನೆಗಳು :

ಶೆನ್ಜೆನ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ಅನೇಕ ಮದುವೆ ಮತ್ತು ಡೇಟಿಂಗ್ ಕೌನ್ಸೆಲಿಂಗ್ ಕಂಪನಿಗಳು ಇತ್ತೀಚೆಗೆ ಸಂಬಂಧ ಮುರಿದುಕೊಂಡ ಜನರನ್ನು ಗುರಿಯಾಗಿಸಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಕೌನ್ಸೆಲಿಂಗ್ ಕಂಪನಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆದಿದೆ. 2016ರಲ್ಲಿ, ಸುಮಾರು 18,000 ಕಂಪನಿಗಳು ಇದ್ದವು. ಆದರೆ ಈಗ 160,000 ಕ್ಕೂ ಹೆಚ್ಚು ಇವೆ. ಈ ಮಧ್ಯೆ, ಸಂಬಂಧ ಸಮಾಲೋಚನೆಗೆ ಸಂಬಂಧಿಸಿದ ಸಾವಿರಾರು ದೂರುಗಳನ್ನು ಗ್ರಾಹಕ ದೂರು ವೇದಿಕೆ "ಬ್ಲ್ಯಾಕ್ ಕ್ಯಾಟ್" ನಲ್ಲಿ ಸಲ್ಲಿಸಲಾಗಿದೆ. ಇದು ಈ ಉದ್ಯಮದ ಪಾರದರ್ಶಕತೆ ಮತ್ತು ನಿಯಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+