ಮುಟ್ಟಿನ ಹೊಟ್ಟೆ ನೋವಿಗೆ ಮಾತ್ರೆ ಸೇವಿಸಿ ಕೋಮಾಗೆ ಜಾರಿದ ಯುವತಿ
ಮುಟ್ಟಿನ ಸಮಯ ಹೆಣ್ಣು ಮಕ್ಕಳಿಗೆ ಸವಾಲಿನ ಕ್ಷಣಗಳು. ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒಂದಿಷ್ಟು ಬದಲಾವಣೆಗಳು ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮುಟ್ಟಿನ ಈ ಸಮಯದಲ್ಲಿ ಹೆಣ್ಣು ಕುಗ್ಗುತ್ತಾಳೆ. ಅದರಲ್ಲೂ ಹೊಟ್ಟೆ ಹಾಗೂ ಸೊಂಟ ನೋವು ವಿಪರೀತ ಕಾಣಿಸಿಕೊಳ್ಳುತ್ತದೆ. ಕೆಲವರು ಇದನ್ನು ತಡೆದರೆ, ಇನ್ನೂ ಕೆಲವರಿಗೆ ತಡೆಯಲಾರದಷ್ಟು ನೋವು ಬರುತ್ತದೆ.
ನೋವು ಸಹಿಸಿಕೊಳ್ಳಲಾಗದೇ ಕಡಿಮೆಯಾಗಲಿ ಎಂದು ಹೆಣ್ಣು ಮಕ್ಕಳು ಅನೇಕ ಪ್ರಯತ್ನ ಮಾಡುತ್ತಾರೆ. ಕೆಲವರು ಮನೆಯಲ್ಲೇ ತಯಾರಿಸುವ ಮನೆ ಮದ್ದುಗಳನ್ನು ಸೇವಿಸಿದರೆ, ಇನ್ನೂ ಕೆಲವರು ಬೇಗ ನೋವು ಕಡಿಮೆಯಾಗಲಿ ಎಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದು ಆರೋಗ್ಯಕ್ಕೆ ಕುತ್ತು. ಮುಟ್ಟಿನ ನೋವು ಕಡಿಮೆಯಾಗಲು ಸೇವಿಸುವ ಮಾತ್ರೆಗಳು ನೇರವಾಗಿ ಆರೋಗ್ಯ ಅಥವಾ ಜೀವದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಬ್ರೆಜಿಲ್‌ನ ಯುವತಿಯೊಬ್ಬಳು ಮುಟ್ಟಿನ ನೋವು ತಾಳಲಾರದೇ ನೋವಿನ ಮಾತ್ರೆ ಸೇವಿಸಿದ ಪರಿಣಾಮ ಆರೋಗ್ಯ ತೀವ್ರ ಹದಗೆಟ್ಟಿದ್ದು, ಕೋಮಾಗೆ ಜಾರಿದ್ದಾಳೆ. ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವಿಗೆ ಮಾತ್ರೆಯೊಂದನ್ನು ಸೇವಿಸಿದ್ದಾಳೆ. ಮಾತ್ರೆ ಸೇವಿಸಿದ ಬಳಿಕ ಆಕೆಗೆ ಅತಿಯಾದ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ.
ಇದನ್ನು ಗಮನಿಸಿದ ಪೋಷಕರು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದ ಕೆಲ ಹೊತ್ತಿನಲ್ಲೇ ಯುವತಿ ಕೋಮಾಗೆ ಜಾರಿದ್ದಾಳೆ. ಈ ಬಗ್ಗೆ ವೈದ್ಯರು ಅಧೀಕೃತವಾಗಿ ಪೋಷಕರಿಗೆ ತಿಳಿಸಿದ್ದಾರೆ. ಸದ್ಯ 17 ದಿನಗಳ ಸತತ ಚಿಕಿತ್ಸೆ ಬಳಿಕ ಜಾಕ್ವೆಲಿನ್ ಕೋಮಾದಿಂದ ಹೊರಬಂದಿದ್ದು, ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಮುಟ್ಟಿನ ಹೊಟ್ಟೆ ನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಬೇಕು.












Click it and Unblock the Notifications