ಇರಾನ್; ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ, 19 ಸಾವು
ತೆಹ್ರಾನ್, ಜುಲೈ 01 : ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು 19 ಜನರು ಮೃತಪಟ್ಟಿದ್ದಾರೆ. ಸ್ಫೋಟ ನಡೆದ ಕಟ್ಟಡದ ಅಕ್ಕ-ಪಕ್ಕದ ಕಟ್ಟಡಗಳಲ್ಲೂ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದೆ.
ಉತ್ತರ ತೆಹ್ರಾನ್‌ನ ಕ್ಲಿನಿಕ್‌ವೊಂದರಲ್ಲಿ ಮಂಗಳವಾರ ರಾತ್ರಿ ಈ ಪ್ರಬಲ ಸ್ಫೋಟ ಸಂಭವಿಸಿದೆ. 19 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ವರದಿ ಮಾಡಿದೆ.
ಸ್ಫೋಟ ನಡೆದ ತಕ್ಷಣ ತೆಹ್ರಾನ್ ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ದಟ್ಟಹೊಗೆಯಿಂದಾಗಿ ಕಾರ್ಯಾಚರಣೆ ನಡೆಸಲು ಸುಮಾರು 2 ಗಂಟೆಗಳ ಕಾಲ ಬೇಕಾಯಿತು. ಕ್ಲಿನಿಕ್‌ನಲ್ಲಿದ್ದ ವೈದ್ಯಕೀಯ ರಸಾಯನಿಕಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.

ಕ್ಲಿನಿಕ್ ಇರುವ ಕಟ್ಟಡದಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಮೃತಪಟ್ಟವರಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ. ಹೊಗೆಯ ಕಾರಣ ಉಸಿರಾಡಲು ಕಷ್ಟವಾಗಿ ಹಲವು ಮೃತಪಟ್ಟಿದ್ದಾರೆ.
ಈ ಸ್ಫೋಟ ನಡೆದ ಪ್ರದೇಶದಲ್ಲಿ 2015ರಲ್ಲಿ ಪರಮಾಣು ಸಂಶೋಧನೆ ನಡೆಯುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಕೆಲವು ವರ್ಷಗಳ ಕಾಲ ಈ ಸ್ಥಳದ ಮೇಲೆ ನಿಗಾ ಇಡಲಾಗಿತ್ತು.












Click it and Unblock the Notifications