ರಿಷಿ ಸುನಕ್‌ಗೆ ಮುಖಭಂಗ: ಬ್ರಿಟನ್ ಪ್ರಧಾನಿ ಕುರ್ಚಿಯ ಮೇಲೆ ಕರ್ಚಿಫ್ ಹಾಕಿರುವ ಕೀರ್ ಸ್ಟಾರ್ಮರ್ ಯಾರು?
ಬ್ರಿಟನ್‌ನಲ್ಲಿ ಚುನಾವಣೆಯನ್ನು ಅವಧಿಗಿಂತ ಮುಂಚಿತವಾಗಿ ನಡೆಸಿ ಪ್ರಧಾನಿ ರಿಷಿ ಸುನಕ್ ಕೈ ಸುಟ್ಟುಕೊಂಡರಾ ಹೀಗೊಂದು ಅನುಮಾನ ಶುರುವಾಗಿದೆ. ಅಲ್ಲದೆ ಸದ್ಯದ ಫಲಿತಾಂಶಗಳ ಚಿತ್ರಣವನ್ನು ನೋಡಿದರೆ, ರಿಷಿ ಸುನಕ್ ಸರ್ಕಾರಿ ಬಂಗಲೇಯನ್ನು ಬಿಟ್ಟು ತಮ್ಮ ಸ್ವಂತ ಮನೆ ಕಡೆ ಮುಖ ಮಾಡವುದು ಫಿಕ್ಸ್ ಆಗಿದೆ.
ಸುಧಾಮುರ್ತಿ ಅಳಿಯ ರಿಷಿ ಸುನಕ್ ಅಂದುಕೊಂಡಿದ್ದೆ ಒಂದು ಆಗಿದ್ದೇ ಇನ್ನೊಂದು. ಅವಧಿಗೂ ಮೊದಲೇ ಚುನಾವಣೆಗಳನ್ನು ನಡೆಸಿದರೆ, ಮತ್ತೊಮ್ಮೆ ಅಧಿಕಾರ ತಮ್ಮ ತೆಕ್ಕೆಗೆ ಸಿಗಲಿದೆ ಎಂದು ಭಾವಿಸಿದ್ದರು. ಅಲ್ಲದೆ ತಾವು ಹಾಕಿಕೊಂಡ ಜನಪರ ಕಾರ್ಯಕ್ರಮಗಳಿಗೆ ಜನರು ಜೈ ಎಂದಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ರಿಷಿ ಸುನಕ್ ಅವರ ಈ ಪ್ಲ್ಯಾನ್ ಹೀಗೆ ಕೈ ಸುಡುತ್ತದೆ ಎಂದು ಭಾವಿಸಿರಲು ಸಾಧ್ಯವೇ ಇಲ್ಲ.

ಹೌದು.. ಇಂಗ್ಲೆಂಡ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಬರಲಿವೆ. ಅವಧಿಗೂ ಮುನ್ನವೇ ಚುನಾವಣೆ ನಡೆಸುವುದಾಗಿ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದರಿಂದ, ಬ್ರಿಟನ್ ಈಗ ಚುನಾವಣೆಗಳನ್ನು ಎದುರಿಸಬೇಕಾಯಿತು. ಅವರ ಈ ನಿರ್ಧಾರಕ್ಕೆ ತೀವ್ರ ಹಿನ್ನಡೆ ಆಗಿದೆ. ಸುನಕ್ ಮುಂದಾಳತ್ವದ ಕನ್ಸರ್ವೇಟಿವ್ ಪಕ್ಷವು ಚುನಾವಣಾ ಫಲಿತಾಂಶಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದೆ. ಇನ್ನು ಇಷ್ಟು ದಿನ ವಿರೋಧ ಪಕ್ಷದಲ್ಲಿ ಕುಳಿತಿದ್ದ ಲೇಬರ್ ಪಕ್ಷ ನಿಚ್ಚಳ ಬಹುಮತದತ್ತ ದಾಪು ಗಾಲು ಇಟ್ಟಿದೆ.
ಬ್ರಿಟನ್‌ನ 650 ಸ್ಥಾನಗಳಲ್ಲಿ ಲೇಬರ್ ಪಕ್ಷ 410 ಸ್ಥಾನಗಳನ್ನು ಗೆದ್ದಿದೆ ಮತ್ತು ಕನ್ಸರ್ವೇಟಿವ್ ಪಕ್ಷವು 118 ಸ್ಥಾನಗಳಿಗೆ ಕುಸಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗೆಲುವು 1997ರ ನಂತರ ಪಾರ್ಟಿ ಸಾಧಿಸಿದ ದೊಡ್ಡ ಗೆಲುವು ಎಂಬ ಶ್ರೇಯ ತನ್ನದಾಗಿಸಿಕೊಂಡಿದೆ. ಲೇಬರ್ ಪಾರ್ಟಿಯನ್ನು ಮುನ್ನಡೆಸುತ್ತಿರುವ ಕೀರ್ ಸ್ಟಾರ್ಮರ್ ಮುಂದಿನ ಪ್ರಧಾನಿ ಎಂದು ಬಿಂಬಿಸಲಾಗುತ್ತಿದೆ. ಈಗ ಅಂತರ್ಜಾಲದಲ್ಲಿ ಇವರ ಬಗ್ಗೆ ಹುಡುಕಾಟ ಜೋರಾಗಿದೆ. ಅವರ ಬಗ್ಗೆ ಕೆಲವು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

ಕೀರ್ ಸ್ಟಾರ್ಮರ್ ಯಾರು?
61 ವರ್ಷ ವಯಸ್ಸಿನ ಕೀರ್ ಸ್ಟಾರ್ಮರ್ ಲೇಬರ್ ಪಕ್ಷದ ನಾಯಕ. ಅವರು 2 ಸೆಪ್ಟೆಂಬರ್ 1962 ರಂದು ಸರ್ರೆಯ ಆಕ್ಸ್ಟೆಡ್‌ನಲ್ಲಿ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ದಾದಿಯಾಗಿದ್ದರು. ಸ್ಟಾರ್ಮರ್ ತಂದೆ ಉಪಕರಣ ತಯಾರಕರಾಗಿ ಕೆಲಸ ಮಾಡುತ್ತಿದ್ದರು. ಸ್ಟಾರ್ಮರ್ ರೀಗೇಟ್ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮುಗಿಸಿದ್ದರು. ಅಲ್ಲದೆ ಅವರ ಕುಟುಂಬದಿಂದ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು.
ಯಾವ ಭರವಸೆಗೆ ಜನ ಮನಸೋತರು?
ಮಾಜಿ ವಕೀಲ ಕೀರ್ ಸ್ಟಾರ್ಮರ್ 2015 ರಲ್ಲಿ ಸಂಸತ್ತಿಗೆ ಪ್ರವೇಶಿಸಿದರು ಮತ್ತು 2020 ರಲ್ಲಿ ಲೇಬರ್ ಪಕ್ಷದ ನಾಯಕತ್ವವನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿಯೇ ಲೇಬರ್ ಪಾರ್ಟಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 14 ವರ್ಷಗಳ ನಂತರ ಯುಕೆಯಲ್ಲಿ ಲೇಬರ್ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ. ಹಣಕಾಸಿನ ಜವಾಬ್ದಾರಿಯನ್ನು ನಿರ್ವಹಿಸುವಾಗ ಸಾರ್ವಜನಿಕ ಸೇವೆಗಳನ್ನು ಮತ್ತೆ ಆರಂಭಿಸಲು ಸ್ಟಾರ್ಮರ್ ಪ್ರತಿಪಾದಿಸಿದ್ದಾರೆ.

ಕೀರ್ ಸ್ಟಾರ್ಮರ್ ವೃತ್ತಿಯಲ್ಲಿ ವಕೀಲ
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಕೀರ್ ಸ್ಟಾರ್ಮರ್ ವಕೀಲರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮುಗಿಸಿದ್ದಾರೆ. ಮಾಹಿತಿಯ ಪ್ರಕಾರ, ಕೀರ್ ಸ್ಟಾರ್ಮರ್ 1987 ರಲ್ಲಿ ಬ್ಯಾರಿಸ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಬ್ರಿಟನ್‌ನಲ್ಲಿ ಪ್ರಸಿದ್ಧ ಮಾನವ ಹಕ್ಕುಗಳ ವಕೀಲರಲ್ಲಿ ಒಬ್ಬರಾಗಿದ್ದರು.
ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಹೊಸ ಬ್ರಿಟಿಷ್ ಸರ್ಕಾರದ ನೀತಿಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ ಎಂದು ನಂಬಲಾಗಿದೆ. ಸ್ಟಾರ್ಮರ್ ರಷ್ಯಾ ವಿರುದ್ಧ ಉಕ್ರೇನ್‌ಗೆ ನೆರವು ನೀಡುವುದನ್ನು ಮುಂದುವರೆಸುವ ಬಗ್ಗೆ ಮಾತನಾಡಿದ್ದರು.












Click it and Unblock the Notifications