Benjamin Netanyahu: ಅಮೆರಿಕ ಅಧ್ಯಕ್ಷರ ಭೇಟಿಗೆ ನಿರ್ಧಾರ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಅಮೆರಿಕ & ಇಸ್ರೇಲ್ ಅತ್ಯಂತ ಆಪ್ತ ಸಂಬಂಧ ಹೊಂದಿದ್ದು, ಎರಡೂ ದೇಶಗಳು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರರು. ಹೀಗೆ ಎರಡೂ ದೇಶಗಳು ಒಟ್ಟಿಗೆ ಸಾಗುತ್ತಿದ್ದು, ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ಒಗ್ಗಟ್ಟಿನಿಂದ ಹೋರಾಡಿ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿವೆ.
ಹೀಗಿದ್ದಾಗ ಇರಾನ್ ಪರಮಾಣು ಬಾಂಬ್ ಪರೀಕ್ಷೆ ನಡೆಸುತ್ತಿದೆ ಎಂಬ ಆರೋಪಗಳ ನಡುವೆ ಭಾರಿ ಕಠಿಣ ತೀರ್ಮಾನ ತೆಗೆದುಕೊಂಡು, ಇರಾನ್ ವಿರುದ್ಧ ಎರಡೂ ದೇಶಗಳು ಸೇನಾ ಕಾರ್ಯಾಚರಣೆಗೆ ಸಜ್ಜಾಗಿದ್ದವು. ಆದರೆ ಕೊನೆಯ ಹಂತದಲ್ಲಿ ಯುದ್ಧದ ಮಾತು ಬಿಟ್ಟು ಮಾತುಕತೆ ನಡೆಸುತ್ತಿದ್ದಾರೆ. ಈ ಸಮಯದಲ್ಲೇ, ಅಮೆರಿಕ ಅಧ್ಯಕ್ಷರ ಭೇಟಿಗೆ ನಿರ್ಧಾರ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೊಸ ದಾಳ ಉರುಳಿಸಿದ್ದಾರೆ.

ಪರಮಾಣು ಒಪ್ಪಂದಕ್ಕೆ ಕೌಂಟ್‌ಡೌನ್
ಇರಾನ್ & ಅಮೆರಿಕ ನಡುವೆ ಪರಮಾಣು ಒಪ್ಪಂದ ಇನ್ನೇನು ಕೊನೆಯ ಹಂತಕ್ಕೆ ಬಂದು ನಿಂತಿದೆ. ಒಮನ್ ನೆಲದಲ್ಲಿ ಈಗಾಗಲೇ ಅಮೆರಿಕ & ಇರಾನ್ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆಯನ್ನ ನಡೆಸಿದ್ದಾರೆ. ಅಲ್ಲದೆ ಈ ಮಾತುಕತೆ ಬಹುತೇಕ ಯಶಸ್ವಿ ಎನ್ನುವ ಹಂತಕ್ಕೂ ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪರಮಾಣು ಒಪ್ಪಂದ ಏರ್ಪಡುವ ಮುನ್ಸೂಚನೆ ಕೂಡ ಇತ್ತು. ಹೀಗೆ, ಎಲ್ಲವೂ ಸರಿ ಆಗುತ್ತಿದೆ, ಅಮೆರಿಕ & ಇರಾನ್ ನಡುವೆ ಸಂಧಾನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಇರುವಾಗಲೇ ಇಸ್ರೇಲ್ ಪ್ರಧಾನಿಯ ಅಮೆರಿಕ ಭೇಟಿ ಕುತೂಹಲ ಕೆರಳಿಸಿದೆ.
ಇಸ್ರೇಲ್ ಪ್ರಧಾನಿ ವಾಷಿಂಗ್ಟನ್ ಭೇಟಿ
ಇರಾನ್ ಯಾವಾಗ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗುಡುಗಲು ಶುರು ಮಾಡಿತ್ತೋ ಅಲ್ಲಿಂದ ಮುಂದೆ ಬೇರೆಯದ್ದೇ ತಂತ್ರ ಹೂಡಲು ಅಮೆರಿಕ ಸಜ್ಜಾದಂತೆ ಕಾಣುತ್ತಿದೆ. ಈಗಾಗಲೇ ಇರಾನ್ ಬಳಿ ದೊಡ್ಡ, ದೊಡ್ಡ ಯುದ್ಧ ಹಡಗು ಹಾಗೂ ಬೃಹತ್ ಪ್ರಮಾಣದಲ್ಲಿ ಯುದ್ದ ವಿಮಾನಗಳನ್ನು ಕಳಿಸಿದೆ ಜಗತ್ತಿನ ದೊಡ್ಡಣ್ಣ ಅಮೆರಿಕ. ಹೀಗಿದ್ದಾಗ ದಿಢೀರ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೇರ ಅಮೆರಿಕಗೆ ತೆರಳುತ್ತಿದ್ದು, ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಇಸ್ರೇಲ್ ಪ್ರಧಾನಿಯವರ ಕಚೇರಿ ಮಾಹಿತಿ ನೀಡಿದ್ದು, ಇರಾನ್ ಜೊತೆಗಿನ ಅಮೆರಿಕದ ಮಾತುಕತೆ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ.
ಅಮೆರಿಕ ನೆಲದಲ್ಲಿ ಮಹತ್ವದ ಚರ್ಚೆ
ಇಸ್ರೇಲ್ ನೆಲದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ನೆಲೆಗಳನ್ನು ಅಮೆರಿಕ ಹೊಂದಿದ್ದು, ಈ ದೇಶದ ರಕ್ಷಣೆ ಕೂಡ ಅಮೆರಿಕದ ಹೊಣೆ ಎಂಬಂತಹ ವಾತಾವರಣ ಇದೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ಜೊತೆ ಹಲವು ದೇಶಗಳು ಶತ್ರುತ್ವ ಬೆಳೆಸಿಕೊಂಡಿರುವ ಕಾರಣಕ್ಕೆ ಅಮೆರಿಕ ನೀಡುವ ಬೆಂಬಲ ಅತ್ಯಗತ್ಯವಾಗಿದೆ. ಇಷ್ಟೆಲ್ಲದರ ನಡುವೆ ಇನ್ನೇನು ಗಾಜಾ ಪಟ್ಟಿಯಲ್ಲಿ ಯುದ್ಧ ನಿಲ್ಲಿಸುವುದು ಹಾಗೂ ಹಮಾಸ್ ಕೈಯಿಂದ ಅಧಿಕಾರ ಕಿತ್ತುಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಇದೇ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಡೊನಾಲ್ಡ್ ಟ್ರಂಪ್ ಅವರ ಜೊತೆ ಮಹತ್ವದ ಚರ್ಚೆ ನಡೆಸುವ ನಿರೀಕ್ಷೆ ಇದೆ.












Click it and Unblock the Notifications