Chandrayaan-3: ಆಸ್ಟ್ರೇಲಿಯಾ ತೀರದಲ್ಲಿ ಸಿಕ್ಕಿದ್ದು ಇಸ್ರೋ ರಾಕೆಟ್ ತುಣುಕು!
ಪರ್ತ್: ಅಂತೂ ಇಂತೂ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದ ನಿಗೂಢ ವಸ್ತು ಭಾರತದ ಚಂದ್ರಯಾನ-3 ತುಣುಕು ಎನ್ನಲಾಗಿತ್ತು. ಇದರ ಜೊತೆಗೆ ಹಲವು ಗುಮಾನಿಗಳು ಹುಟ್ಟಿಕೊಂಡಿದ್ದವು. ಆದ್ರೆ ಈಗ ಎಲ್ಲಾ ಪ್ರಶ್ನೆಗಳಿಗೂ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯೇ ಉತ್ತರ ನೀಡಿದ್ದು, ಈ ನಿಗೂಢ ವಸ್ತು ಭಾರತದ್ದೇ ಅಂತಾ ಹೇಳಿದೆ.
ಅಂದಹಾಗೆ ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿ ಬಳಿಯ ಕಡಲ ತೀರದಲ್ಲಿ ನಿಗೂಢ ವಸ್ತು ಪತ್ತೆಯಾಗಿತ್ತು. ಈ ವಸ್ತುವು 'ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್' ಅಂದರೆ ಪಿಎಸ್‌ಎಲ್‌ವಿ 3ನೇ ಹಂತದ ಅವಶೇಷ ಎಂದು ತೀರ್ಮಾನಿಸಿದ್ದೇವೆ ಎಂದಿದೆ ಆಸ್ಟ್ರೇಲಿಯಾ. ಈ ಕುರಿತು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಟ್ವಿಟ್ ಮೂಲಕ ಮಾಹಿತಿ ನೀಡಿದೆ. ಪರ್ತ್ ನಗರದ ಉತ್ತರಕ್ಕೆ ಸುಮಾರು 250 ಕಿಲೋಮೀಟರ್ ದೂರದ ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಕಡಲ ತೀರದ ಸಮೀಪವೇ ಈ ವಸ್ತು ಪತ್ತೆಯಾಗಿತ್ತು.

ಏನೇನೋ ಚರ್ಚೆ ಶುರುವಾಗಿತ್ತು!
ಬೃಹತ್ ಗಾತ್ರದ ಲೋಹದ ಸಿಲಿಂಡರ್ ಪಶ್ಚಿಮ ಆಸ್ಟ್ರೇಲಿಯಾದ ಕಡಲ ತೀರದಲ್ಲಿ ಪತ್ತೆ ಆಗಿದ್ದೇ ತಡ, ವಿಚಿತ್ರ ಚರ್ಚೆ ಶುರುವಾಗಿತ್ತು. ಸಿಲಿಂಡರ್ ಆಕಾರದ ವಸ್ತು ಏನೆಂಬುದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ವಿಚಿತ್ರ ವಿಚಿತ್ರ ಚರ್ಚೆ ನಡೆದು, ಇದು 'ಚಂದ್ರಯಾನ-3'ರ ರಾಕೆಟ್‌ನ ತುಣುಕು ಇರಬಹುದಾ? ಅಂತಿದ್ದರು ಜನ. ಅಲ್ದೆ ವಿಚಿತ್ರ ವಸ್ತು ರಾಕೆಟ್, ವಿಮಾನ ಅಥವಾ ಹಡಗಿನ ಬಿಡಿ ಭಾಗ ಇರಬಹುದಾ? ಅನ್ನೋ ಮಾತುಕತೆ ಕೂಡ ನಡೆಯುತ್ತಿತ್ತು. ಇನ್ನು ತಕ್ಷಣ ಅಲರ್ಟ್ ಆಗಿದ್ದ ಆಸಿಸ್ ಪೊಲೀಸರು, ವಿಚಿತ್ರ ವಸ್ತುವಿನ ಹತ್ತಿರ ಸುಳಿಯದಂತೆ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಿದ್ದರು.
()We have concluded the object located on a beach near Jurien Bay in Western Australia is most likely debris from an expended third-stage of a Polar Satellite Launch Vehicle (PSLV).
— Australian Space Agency (@AusSpaceAgency) July 31, 2023
The PSLV is a medium-lift launch vehicle operated by @isro.
[More in comments] pic.twitter.com/ivF9Je1Qqy
ಈಗ ಪತ್ತೆಯಾದ ವಸ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿನ್ಯಾಸಗೊಳಿಸಿದ ಪಿಎಸ್ಎಲ್‌ವಿ ಉಡಾವಣಾ ವಾಹನದ ಭಾಗವಾಗಿದೆ. ನಾವು ವಸ್ತುವನ್ನ ಶೇಖರಿಸಿಟ್ಟಿದ್ದು ಮುಂದಿನ ಕ್ರಮದ ಬಗ್ಗೆ ಇಸ್ರೋ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದೆ ಆಸ್ಟ್ರೇಲಿಯಾ. ಈ ಮೂಲಕ ಹಲವು ದಿನದಿಂದ ಕಾಡುತ್ತಿದ್ದ ಅತಿದೊಡ್ಡ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿದೆ. ಹಾಗೆ 2014ರ ಮಾರ್ಚ್ 8ರಂದು ಕಣ್ಮರೆಯಾಗಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್ 370 ಅವಶೇಷ ಇದಾಗಿದೆಯಾ? ಎಂಬ ಪ್ರಶ್ನೆ ಕೇಳಿಬಂದಿತ್ತು. ಈ ವಸ್ತು ಸುಮಾರು 2.5 ಮೀಟರ್ ಅಗಲ ಹಾಗೂ 3 ಮೀಟರ್ ಉದ್ದ ಇತ್ತು. ಈಗ ಎಲ್ಲಾ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಚರ್ಚೆ ನಡೆಸುತ್ತಿದೆ.

ಈಗ ಎಲ್ಲಿದೆ 'ಚಂದ್ರಯಾನ-3' ನೌಕೆ?
ಅಷ್ಟಕ್ಕೂ ಇಸ್ರೋ ನೀಡಿರುವ ಮಾಹಿತಿ ಪ್ರಕಾರ, ಇದೀಗ ಲೂನಾರ್ ಟ್ರಾನ್ಸ್‌ಫರ್ ಟ್ರಾಜೆಕ್ಟರಿ ಪಥದಲ್ಲಿ 'ಚಂದ್ರಯಾನ-3' ನೌಕೆ ಸಾಗುತ್ತಿದೆ. ಸೋಮವಾರ ಮಧ್ಯರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟ ನೌಕೆ ಚಂದ್ರನ ಕಡೆ ಸಾಗಿದೆ. ಹಾಗೇ ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ ಆಗಮಿಸುತ್ತಿದ್ದಂತೆ 'ಲೂನಾರ್-ಆರ್ಬಿಟ್ ಇನ್‌ರ್ಸಶನ್' ಅಂದರೆ ಎಲ್‌ಓಐ ಕಾರ್ಯ ಶುರು ಆಗುತ್ತೆ. ಆಗಸ್ಟ್ 5ಕ್ಕೆ ಎಲ್‌ಓಐ ಮಾಡಲು ಯೋಜಿಸಿದ್ದೇವೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಆಗಸ್ಟ್ 17ಕ್ಕೆ ಪ್ಯೊಪಲ್ಷನ್ ಮಾಡ್ಯೂಲ್ & ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಸುರಕ್ಷಿತವಾಗಿ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಈ ಕ್ಷಣಕ್ಕೆ ಇಡೀ ಜಗತ್ತೇ ಕಾಯುತ್ತಿದೆ. ಇಷ್ಟೆಲ್ಲಾ ಘಟನೆಗಳ ನಡುವೆ ಇಸ್ರೋದ ಉಡಾವಣಾ ವಾಹನದ ತುಣುಕು ಆಸ್ಟ್ರೇಲಿಯಾ ತೀರದಲ್ಲಿ ಸಿಕ್ಕಿರುವುದು ಪಕ್ಕಾ ಆಗಿದೆ.

ಕಡಿಮೆ ವೆಚ್ಚದಲ್ಲಿ ಐತಿಹಾಸಿಕ ಸಾಧನೆ!
ಇತರ ದೇಶಗಳಿಗೆ ಹೋಲಿಕೆ ಮಾಡಿದ್ರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.












Click it and Unblock the Notifications